Sidlaghatta : ಕನ್ನಡ ರಾಜ್ಯೋತ್ಸವವು ಕೇವಲ ನವೆಂಬರ್ ತಿಂಗಳಿಗಷ್ಟೇ ಸೀಮಿತವಾಗದೆ, ಬದುಕಿನ ಪ್ರತೀ ದಿನ ಕನ್ನಡದ ಉತ್ಸವ ನಡೆಯಬೇಕು ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಸಿ.ಎ. ನರೇಂದ್ರಕುಮಾರ್ ಅಭಿಪ್ರಾಯ ವ್ಯಕ್ತಪಡಿಸಿದರು.
ನಗರದ ಕೋಟೆ ವೃತ್ತದ ಡಾ. ಪುನೀತ್ ರಾಜ್‌ಕುಮಾರ್ ವೇದಿಕೆಯಲ್ಲಿ ಸಮಾನ ಮನಸ್ಕರ ಹೋರಾಟ ಸಮಿತಿಯಿಂದ ಆಯೋಜಿಸಲಾದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದ ಸಂಜೆಯ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
“ಮಕ್ಕಳು ಅಗತ್ಯ ಬಿದ್ದಲ್ಲಿ ಮಾತ್ರ ಮೊಬೈಲ್ ಬಳಸಬೇಕು. ಉಳಿದ ಸಮಯದಲ್ಲಿ ಪಠ್ಯ ಪುಸ್ತಕಗಳ ಜೊತೆಗೆ ಉತ್ತಮ ಸಾಹಿತ್ಯ ಪುಸ್ತಕಗಳನ್ನು ಓದುವ ಹವ್ಯಾಸವನ್ನು ಬೆಳೆಸಿಕೊಳ್ಳಿ. ಜ್ಞಾನಪೀಠ ಪ್ರಶಸ್ತಿ ವಿಜೇತ ಸಾಹಿತ್ಯವನ್ನು ಓದಿ, ಕಾನೂನು ಜ್ಞಾನ ಹಾಗೂ ಮಕ್ಕಳ ಹಕ್ಕುಗಳ ಕುರಿತು ಅರಿವು ಹೊಂದಿ,” ಎಂದರು.
“ಕನ್ನಡ ನಮ್ಮ ಬದುಕಿನ ಉಸಿರು. ಕನ್ನಡ ಭಾಷೆ ಅಳಿದರೆ, ಅದು ಕನ್ನಡಿಗರ ಅಳಿವಾಗುತ್ತದೆ. ಕನ್ನಡಿಗರು ಹಾಗೂ ಕನ್ನಡ ಭಾಷೆಗಿನ್ನೂ ಅಳಿವಿಲ್ಲ. ಭಾಷೆಯನ್ನು ಉಳಿಸಿ ಬೆಳೆಸಲು ದೊಡ್ಡ ಹೋರಾಟವಿಲ್ಲ. ನಮ್ಮ ಜೀವನದ ಉದ್ದಕ್ಕೂ ಕನ್ನಡವನ್ನು ಮಾತನಾಡಿ ಮತ್ತು ಬರೆಯುವುದು ಸಾಕಷ್ಟಾಗಿದೆ,” ಎಂದು ಅವರು ತಿಳಿಸಿದರು.
ಕಾರ್ಯಕ್ರಮದಲ್ಲಿ ಶಾಲಾ, ಕಾಲೇಜು, ಹಾಗೂ ನೃತ್ಯ ತರಗತಿಯ ವಿದ್ಯಾರ್ಥಿಗಳು ಕನ್ನಡ ಗೀತೆಗಳಿಗೆ ನೃತ್ಯ ಪ್ರದರ್ಶಿಸಿದರು. ಭರತನಾಟ್ಯ ಪ್ರದರ್ಶನವು ವಿಶೇಷ ಆಕರ್ಷಣೆಯಾಗಿ ಸಾಕಷ್ಟು ಗಮನ ಸೆಳೆಯಿತು. ಜೂನಿಯರ್ ರಾಜ್ ಕುಮಾರ್ ಮತ್ತು ಜೂನಿಯರ್ ರವಿಚಂದ್ರನ್ ಅವರು ಸಿನಿಮಾದ ಡೈಲಾಗ್‌ಗಳ ಮೂಲಕ ನಟನೆ ಮಾಡಿ ಸಭಿಕರನ್ನು ಮನರಂಜಿಸಿದರು. ಹಳ್ಳಿಕಾರ್ ಒಡೆಯ ವರ್ತೂರು ಸಂತೋಷ್ ಅವರ ಡೈಲಾಗ್‌ಗಳು ಶ್ರೋತರಿಂದ ಭರ್ಜರಿ ಚಪ್ಪಾಳೆ ಗಳಿಸಿತು.
ನಾನಾ ಕ್ಷೇತ್ರಗಳಲ್ಲಿ ಸಾಧನೆ ಮಾಡಿದವರಿಗೆ ಈ ಸಂದರ್ಭ ಸನ್ಮಾನಿಸಲಾಯಿತು.
ತಹಸೀಲ್ದಾರ್ ಬಿ.ಎನ್. ಸ್ವಾಮಿ, ಸರ್ಕಲ್ ಇನ್ಸ್‌ಪೆಕ್ಟರ್ ಎಂ. ಶ್ರೀನಿವಾಸ್, ಮಾರುಕಟ್ಟೆ ಡಿಡಿ ಮಹದೇವ್, ಮಾಜಿ ಶಾಸಕ ಎಂ. ರಾಜಣ್ಣ, ಬಿಜೆಪಿ ಮುಖಂಡ ಸೀಕಲ್ ಆನಂದಗೌಡ, ಕಾಂಗ್ರೆಸ್ ಮುಖಂಡರಾದ ನಂದ ಮುನಿಕೃಷ್ಣಪ್ಪ, ಆಂಜಿನಪ್ಪ, ಹಾಗೂ ಸಮಾನ ಮನಸ್ಕರ ವೇದಿಕೆಯ ಮುನಿಕೆಂಪಣ್ಣ, ಪಟೇಲ್ ನಾರಾಯಣಸ್ವಾಮಿ, ರವಿಪ್ರಕಾಶ್ ಸೇರಿದಂತೆ ಅನೇಕರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.