ಶಿಡ್ಲಘಟ್ಟ ತಾಲ್ಲೂಕಿನ ಐತಿಹಾಸಿಕ ಸ್ಥಳ ಚಿಕ್ಕದಾಸರಹಳ್ಳಿಯ ಬ್ಯಾಟರಾಯಸ್ವಾಮಿ ದೇವಾಲಯದ ಆವರಣದಲ್ಲಿ ಅಕ್ಟೋಬರ್ 28 ರ ಗುರುವಾರ “ಕನ್ನಡಕ್ಕಾಗಿ ನಾವು” ಎಂಬ ಧ್ಯೇಯ ವಾಕ್ಯದೊಂದಿಗೆ ಲಕ್ಷ ಕಂಠಗಳ ಗೀತಗಾಯನದ ಮೂಲಕ ಕನ್ನಡ ಜಾಗೃತಿ ಅಭಿಯಾನ ಕಾರ‍್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ತಹಶೀಲ್ದಾರ್ ಬಿ.ಎಸ್.ರಾಜೀವ್ ತಿಳಿಸಿದರು.
ತಾಲ್ಲೂಕು ಕಚೇರಿ ಸಭಾಂಗಣದಲ್ಲಿ ಬುಧವಾರ ನಡೆದ ಕನ್ನಡ ರಾಜ್ಯೋತ್ಸವ ಕಾರ‍್ಯಕ್ರಮದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, ಅಕ್ಟೋಬರ್ 24 ರಿಂದ ರಾಜ್ಯದಲ್ಲಿ ಕನ್ನಡಕ್ಕಾಗಿ ನಾವು ಕನ್ನಡ ಜಾಗೃತಿ ಅಭಿಯಾನ ನಡೆಯುತ್ತಿದೆ.
ಅದರ ಅಂಗವಾಗಿ ಅಕ್ಟೋಬರ್ 28 ರಂದು ರಾಜ್ಯದೆಲ್ಲೆಡೆ ಒಂದು ಲಕ್ಷ ಮಂದಿ ಏಕ ಕಾಲದಲ್ಲಿ ಸಾಮೂಹಿಕ ಗೀತಗಾಯನದಲ್ಲಿ ಪಾಲ್ಗೊಳ್ಳಲಿದ್ದಾರೆ. ಐತಿಹಾಸಿಕ ಮತ್ತು ಸಾಂಸ್ಕೃತಿಕ ಸ್ಥಳವಾದ ಚಿಕ್ಕದಾಸರಹಳ್ಳಿಯ ಬ್ಯಾಟರಾಯಸ್ವಾಮಿ ದೇವಾಲಯದ ಪರಿಸರದಲ್ಲಿ ತಾಲ್ಲೂಕು ಆಡಳಿತದಿಂದ ಸಾಮೂಹಿಕ ಗೀತಗಾಯನ ಹಮ್ಮಿಕೊಂಡಿದ್ದೇವೆ.
ಕುವೆಂಪು ಅವರ “ಬಾರಿಸು ಕನ್ನಡ ಡಿಂಡಿಮವ”, ಡಾ.ಕೆ.ಎಸ್.ನಿಸ್ಸಾರ್ ಅಹ್ಮದ್ ಅವರ “ಜೋಗದ ಸಿರಿ ಬೆಳಕಿನಲ್ಲಿ” ಹಾಗೂ ಹಂಸಲೇಖ ಅವರ “ಹುಟ್ಟಿದರೆ ಕನ್ನಡ ನಾಡಲ್ಲಿ ಹುಟ್ಟಬೇಕು” ಗೀತೆಗಳನ್ನು ಸಾಮೂಹಿಕವಾಗಿ ಹಾಡಲಾಗುವುದು.
ಈ ಕಾರ‍್ಯಕ್ರಮದಲ್ಲಿ ಶಾಲಾ ಕಾಲೇಜು ವಿದ್ಯಾರ್ಥಿಗಳು, ಸಂಘ ಸಂಸ್ಥೆಗಳ ಪದಾಧಿಕಾರಿಗಳು, ಕನ್ನಡ, ರೈತ, ದಲಿತ, ಪ್ರಗತಿಪರ ಎಲ್ಲ ಸಂಘಟನೆಗಳು, ಸಾರ್ವಜನಿಕರು, ಮಹಿಳಾ ಸಂಘಗಳ ಸದಸ್ಯರು, ಅಧಿಕಾರಿಗಳು ಎಲ್ಲರೂ ಭಾಗವಹಿಸಬಹುದು ಎಲ್ಲರಿಗೂ ಮುಕ್ತ ಅವಕಾಶವಿದೆ ಎಂದರು.
ಈ ಮೂಲಕ ಎಲ್ಲರಲ್ಲೂ ಕನ್ನಡ ಭಾಷೆ ಸಾಹಿತ್ಯ ಸಂಸ್ಕೃತಿ ಕುರಿತು ಇನ್ನಷ್ಟು ಜಾಗೃತಿ ಪ್ರೀತಿ ಅಭಿಮಾನವನ್ನು ಬೆಳೆಸುವ ಕೆಲಸ ಆಗಲಿದೆ. ಜತೆಗೆ ಕಾರ‍್ಯಕ್ರಮವನ್ನು ನಡೆಸುವ ಪ್ರದೇಶದ ಇತಿಹಾಸವನ್ನು ಮಹತ್ವವವನ್ನು ಸಾರುವ ಕೆಲಸವೂ ಆಗಬೇಕಿದೆ ಎಂದು ಹೇಳಿದರು.
ಎಲ್ಲ ಶಾಲಾ ಕಾಲೇಜು ಸರ್ಕಾರಿ ಇಲಾಖಾ ಕಚೇರಿಗಳಲ್ಲಿ ಬೆಳಗ್ಗೆ 11 ಗಂಟೆಗೆ ಸರಿಯಾಗಿ ಕನ್ನಡಕ್ಕಾಗಿ ನಾವು ಕನ್ನಡ ಜಾಗೃತಿ ಅಭಿಯಾನವನ್ನು ಆರಂಭಿಸಬೇಕು, ಕಡಿಮೆ ಸಿಬ್ಬಂದಿ ಇರುವ ಇಲಾಖೆಯವರು ತಾಲ್ಲೂಕು ಆಡಳಿತದಿಂದ ಹಮ್ಮಿಕೊಂಡಿರುವ ಚಿಕ್ಕದಾಸರಹಳ್ಳಿ ಕಾರ‍್ಯಕ್ರಮದಲ್ಲಿ ಭಾಗವಹಿಸಬೇಕೆಂದರು.
ನಗರಸಭೆ ಆಯುಕ್ತ ಆರ್.ಶ್ರೀಕಾಂತ್, ತಾಲ್ಲೂಕು ಆರೋಗ್ಯಾಕಾರಿ ಡಾ.ವೆಂಕಟೇಶ್‌ಮೂರ್ತಿ, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಕೆ.ಎಸ್.ಸುಬ್ಬಾರೆಡ್ಡಿ, ಕರ್ನಾಟಕ ಜನಪದ ಪರಿಷತ್‌ನ ತಾಲ್ಲೂಕು ಅಧ್ಯಕ್ಷ ಎ.ಎಂ.ತ್ಯಾಗರಾಜ್ ಸೇರಿದಂತೆ ತಾಲ್ಲೂಕು ಮಟ್ಟದ ಅಧಿಕಾರಿಗಳು, ಕನ್ನಡಪರ ಸಂಘಟನೆಗಳ ಪದಾಧಿಕಾರಿಗಳು ಹಾಜರಿದ್ದರು.