Sidlaghatta : ಒಕ್ಕೂಟದ ವ್ಯವಸ್ಥೆಯಲ್ಲಿ ನಾಡು ಮತ್ತು ದೇಶ ಎರಡು ಸಮಾನ ಪ್ರಾಮುಖ್ಯತೆ ಹೊಂದಿವೆ. ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಮಹನೀಯರ ದೇಶಪ್ರೇಮವನ್ನು ಅರಿತು, ಅವರು ತೋರಿದ ಮಾರ್ಗದಲ್ಲಿ ಸಾಗುವ ಮೂಲಕ ಉತ್ತಮ ನಾಡನ್ನು ನಿರ್ಮಿಸಬೇಕು ಎಂದು ಶಾಸಕ ಬಿ.ಎನ್. ರವಿಕುಮಾರ್ ಕರೆ ನೀಡಿದರು.
ಬುಧವಾರ ಶಿಡ್ಲಘಟ್ಟ ತಾಲ್ಲೂಕಿಗೆ ಆಗಮಿಸಿದ ಕನ್ನಡ ಜ್ಯೋತಿ ರಥಯಾತ್ರೆಯನ್ನು ಗಡಿಭಾಗದ ಲಕ್ಕಹಳ್ಳಿ ಗೇಟ್‌ನಲ್ಲಿ ಸ್ವಾಗತಿಸಿ ಮಾತನಾಡಿದ ಅವರು, ಆಂಧ್ರಪ್ರದೇಶದ ಗಡಿಗೆ ಸಮೀಪವಿರುವ ಈ ಪ್ರದೇಶದಲ್ಲಿ ತೆಲುಗು ಭಾಷೆಯ ಪ್ರಭಾವವಿರುವುದರಿಂದ ಕನ್ನಡ ಪರ ಕಾರ್ಯಕ್ರಮಗಳನ್ನು ಹೆಚ್ಚಿಸಬೇಕಿದೆ ಎಂದು ಅಭಿಪ್ರಾಯಪಟ್ಟರು.
ಕನ್ನಡ ಜ್ಯೋತಿ ರಥಯಾತ್ರೆಯ ಮೂಲಕ ಕನ್ನಡ ಭಾಷೆ ಮತ್ತು ಸಂಸ್ಕೃತಿಯ ಪ್ರತಿಯೊಂದು ವಿಧಾನಸಭಾ ಕ್ಷೇತ್ರಕ್ಕೂ ತಲುಪಿಸುವ ಗುರಿಯನ್ನು ಸರ್ಕಾರ ಹೊಂದಿದೆ. ರಥಯಾತ್ರೆಯು ಜಾತಿ, ಧರ್ಮ, ಪಕ್ಷಭೇದವಿಲ್ಲದೆ ಜನರ ಸೌಹಾರ್ದಕ್ಕೆ ಸಹಕಾರಿಯಾಗಿದೆ ಎಂದು ಅವರು ಅಭಿಪ್ರಾಯಪಟ್ಟರು. ಕನ್ನಡ ತಾಯಿ ಭಾಷೆಯು ತಾಯಿಯಷ್ಟು ಗೌರವಾರ್ಹವಾಗಿದೆ ಎಂಬ ಸಂದೇಶವನ್ನು ಎಲ್ಲರೂ ಹೃತ್ಪೂರ್ವಕವಾಗಿ ಅಳವಡಿಸಿಕೊಳ್ಳಬೇಕೆಂದು ಮನವಿ ಮಾಡಿದರು.
ಕನ್ನಡ ಜ್ಯೋತಿ ರಥ ಯಾತ್ರೆಯು ಶಿಡ್ಲಘಟ್ಟ ಪಟ್ಟಣದ ವಿವಿಧ ಪ್ರಮುಖ ವೃತ್ತಗಳು ಮತ್ತು ರಸ್ತೆಗಳ ಮೂಲಕ ದಿಬ್ಬೂರಹಳ್ಳಿ ಮಾರ್ಗವಾಗಿ ಸಾಗಿತು. ರಥದ ಮುಂದೆ ತಲೆ ಮೇಲೆ ಕಳಶ ಹೊತ್ತ ಮಹಿಳೆಯರು, ಕೈಯಲ್ಲಿ ನಾಡಧ್ವಜ ಹಿಡಿದ ಶಾಲಾ ಮಕ್ಕಳು, ತಮಟೆ ಹಾಗೂ ಜನಪದ ಕಲಾ ತಂಡಗಳ ನೃತ್ಯಗಳು ರಥಯಾತ್ರೆಗೆ ವಿಜೃಂಭನೆ ನೀಡಿದವು. ರಸ್ತೆ ಬದಿ ನಿಂತ ಜನರು ಯಾತ್ರೆಯನ್ನು ಕಣ್ತುಂಬಿಕೊಂಡು ಸಂಭ್ರಮಿಸಿದರು.
ಈ ಕಾರ್ಯಕ್ರಮದಲ್ಲಿ ತಹಸೀಲ್ದಾರ್ ಬಿ.ಎನ್. ಸ್ವಾಮಿ, ತಾ.ಪಂ ಇಒ ಹೇಮಾವತಿ, ಬಿಇಒ ನರೇಂದ್ರ ಕುಮಾರ್, ಸರ್ಕಲ್ ಇನ್ಸ್‌ಪೆಕ್ಟರ್ ಎಂ. ಶ್ರೀನಿವಾಸ್, ನಗರಸಭೆ ಅಧ್ಯಕ್ಷ ಎಂ.ವಿ. ವೆಂಕಟಸ್ವಾಮಿ, ವಿವಿಧ ಕನ್ನಡ ಪರ ಸಂಘಟನೆಗಳ ಮುಖಂಡರು, ರೈತ ಸಂಘದ ಪ್ರತಿನಿಧಿಗಳು ಮತ್ತು ಶಾಲಾ ಮಕ್ಕಳು ಭಾಗವಹಿಸಿದ್ದರು.