Sidlaghatta : ಶಿಡ್ಲಘಟ್ಟ ತಾಲ್ಲೂಕಿನ ಗಡಿ ಎಲ್.ಮುತ್ತುಕದಹಳ್ಳಿ ಗೇಟ್ ಬಳಿ ಸೋಮವಾರ ಕನ್ನಡ ಜ್ಯೋತಿ ರಥವನ್ನು ಶಾಸಕ ಬಿ.ಎನ್.ರವಿಕುಮಾರ್, ತಹಶೀಲ್ದಾರ್ ಬಿ.ಎನ್.ಸ್ವಾಮಿ ಮತ್ತು ತಾಲ್ಲೂಕು ಆಡಳಿತ ವತಿಯಿಂದ ರಥಕ್ಕೆ ಮಾಲಾರ್ಪಣೆ ಮಾಡಿ, ಪುಷ್ಪ ವೃಷ್ಟಿಯೊಂದಿಗೆ ಅದ್ದೂರಿಯಾಗಿ ಸ್ವಾಗತಿಸಲಾಯಿತು.
ಹಂಡಿಗನಾಳ ಗ್ರಾಮ ಪಂಚಾಯತಿ ವತಿಯಿಂದ ಕನ್ನಡ ಜ್ಯೋತಿ ರಥಕ್ಕೆ ಪೂರ್ಣ ಕುಂಭ ಸ್ವಾಗತ ನೀಡಿ, ಮಾಲಾರ್ಪಣೆ ಮಾಡಿದರು, ಮಹಿಳೆಯರು ಆರತಿ ಬೆಳಗಿ ಪೂಜೆ ಸಲ್ಲಿಸಿದರು.
ನಗರ ಬಸ್ ನಿಲ್ದಾಣದ ಬಳಿ ನಗರಸಭೆ ವತಿಯಿಂದ ರಥಕ್ಕೆ ಪುಷ್ಪ ವೃಷ್ಟಿ ಮಾಡಿ, ಮಾಲಾರ್ಪಣೆ ಮಾಡಿ, ವಿವಿದ ಕಲಾ ತಂಡ ಮತ್ತು ಶಾಲಾ ಬ್ಯಾಂಡ್ ಸೆಟ್ ತಂಡಗಳಿಂದ ಸ್ವಾಗತ ಕೋರಲಾಯಿತು. ಮೆರವಣಿಗೆಯಲ್ಲಿ ಕನ್ನಡ ಧ್ವಜಗಳು ಹಾರಾಡಿದವು ಮತ್ತು ಭುವನೇಶ್ವರಿ ಮಾತೆಗೆ ಜಯಘೋಷ ಮಾಡಲಾಯಿತು. ಮೆರವಣಿಗೆಯುದ್ದಕ್ಕೂ ಕನ್ನಡ ರಥಕ್ಕೆ ಶಾಲಾ ವಿದ್ಯಾರ್ಥಿಗಳು ಪುಷ್ಪವೃಷ್ಟಿ ಮಾಡಿದರು.
ನಗರದ ಕೋಟೆ ವೃತ್ತದಲ್ಲಿ ವೇದಿಕೆ ಕಾರ್ಯಕ್ರಮದಲ್ಲಿ ಶಾಸಕ ಬಿ.ಎನ್.ರವಿಕುಮಾರ್ ಮಾತನಾಡಿ, ಕನ್ನಡ ಭಾಷೆ ಮತ್ತು ಸಂಸ್ಕೃತಿ, ಕನ್ನಡ ನಾಡಿನ ಕಲೆ, ಸಾಹಿತ್ಯ, ನೃತ್ಯ, ಸಂಗೀತ ಉತ್ಕೃಷ್ಟವಾದದ್ದು, ಶ್ರೀಮಂತವಾದದ್ದು. ಈ ನಾಡಿನ ಶಿಲ್ಪ ಕಲೆಗೆ ಮನಸೋಲದವರೇ ಇಲ್ಲ. ನಮ್ಮ ನೆಲ, ಜಲ, ಭಾಷೆ ಮತ್ತು ಸಂಸ್ಕೃತಿಯನ್ನು ಕಾಪಾಡುವುದು ನಮ್ಮೆಲ್ಲರ ಕರ್ತವ್ಯ ಎಂದು ಹೇಳಿದರು.
ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಪ್ರೊ.ಕೋಡಿರಂಗಪ್ಪ ಮಾತನಾಡಿ, ಕರ್ನಾಟಕದಲ್ಲಿರುವ ನಾವೆಲ್ಲರೂ ಒಂದೇ. ಎಲ್ಲರೂ ಸಹೋದರ ಭಾವನೆ ಹೊಂದಿರಬೇಕು. ಕನ್ನಡ ಭಾಷೆ, ಸಾಹಿತ್ಯ, ಸಂಸ್ಕೃತಿ, ಕಲೆಯನ್ನು ಗೌರವಿಸಬೇಕು ಎಂದರು.
ಕರ್ನಾಟಕದ ಬಹುತೇಕ ಜನರಿಗೆ ಕನ್ನಡ ಮಾತೃಭಾಷೆ ಆಗಿದೆ. ಆಂಧ್ರಪ್ರದೇಶ, ತಮಿಳುನಾಡು, ಕೇರಳ ಹಾಗೂ ದಮನ್ ಹಾಗೂ ದಿಯುಗಳಲ್ಲಿಯೂ ಕನ್ನಡವನ್ನು ಮಾತೃ ಭಾಷೆಯಾಗಿ ಬಳಸುವ ಗಣನೀಯ ಕನ್ನಡಿಗರು ಇದ್ದಾರೆ ಎಂದು ಹೇಳಿದರು.
ಕರ್ನಾಟಕ ಸರ್ವ ಜನಾಂಗದ, ಸರ್ವೋದಯದ ವಿಶ್ವಮಾನವರ ರಾಜ್ಯ ಆಗಬೇಕು. ಕನ್ನಡಿಗರಿಗೆ ಉದ್ಯೋಗ, ನೆಲ, ಜಲದ ವಿಚಾರದಲ್ಲಿ ಅನ್ಯಾಯ ಆಗಬಾರದು ಎಂದರು.
ತಹಸೀಲ್ದಾರ್ ಬಿ.ಎನ್.ಸ್ವಾಮಿ ಮಾತನಾಡಿ, ಕರ್ನಾಟಕ ರಾಜ್ಯ ಉದಯವಾಗಿ 50 ವರ್ಷ ಪೂರೈಸಿದ ಸಂಭ್ರಮದ ಹಿನ್ನೆಲೆಯಲ್ಲಿ ಕನ್ನಡ ಜ್ಯೋತಿ ರಥಯಾತ್ರೆಯನ್ನು ಹಮ್ಮಿಕೊಳ್ಳಲಾಗಿದೆ ಎಂದರು.
ಪ್ರತಿ ತಾಲ್ಲೂಕಿನಲ್ಲೂ ಒಂದೊಂದು ದಿನ ಸಂಚಾರ ನಡೆಸಿ, ಮುಂದಿನ ತಾಲ್ಲೂಕಿಗೆ ಸಾಗಲಿದೆ. ಈ ವರ್ಷದ ಕನ್ನಡ ರಾಜ್ಯೋತ್ಸವ ದಿನಕ್ಕೆ ಕರ್ನಾಟಕ ರಾಜ್ಯ ಉದಯವಾಗಿ 50 ವರ್ಷ ಪೂರ್ಣ ಆಗುವುದರಿಂದ ಕನ್ನಡ ನಾಡು ನುಡಿಯ ಬಗ್ಗೆ ಇಂದಿನ ಹಾಗೂ ಮುಂದಿನ ಪೀಳಿಗೆಗೆ ಪರಿಚಯಿಸುವ ಜೊತೆಗೆ ಸಂಭ್ರಮ ಆಚರಿಸಲು ಈ ರಥಯಾತ್ರೆಯನ್ನು ಸರ್ಕಾರ ಆಯೋಜಿಸಿದೆ ಎಂದರು.
ಕನ್ನಡದ ಉಳಿವಿಗಾಗಿ ಶ್ರಮಪಟ್ಟ ಸಾಹಿತಿಗಳು ಮತ್ತು ಹೋರಾಟಗಾರರನ್ನು ಸ್ಮರಿಸಬೇಕು. ಈ ಸಂದೇಶ ಎಲ್ಲ ಕನ್ನಡ ಪ್ರೇಮಿಗಳಿಗೂ ತಲುಪಿಸಬೇಕು ಎಂದು ಹೇಳಿದರು.
ಸರ್ಕಲ್ ಇನ್ಸ್ ಪೆಕ್ಟರ್ ಶ್ರೀನಿವಾಸ್ , ಸಬ್ ಇನ್ಸ್ ಪೆಕ್ಟರ್ ವೇಣುಗೋಪಾಲ್ , ನಗರಸಭೆ ಪೌರಾಯುಕ್ತ ಮಂಜುನಾಥ್ , ತಾಲ್ಲೂಕು ಆಡಳಿತದ ವಿವಿದ ಇಲಾಖೆಯ ಅಧಿಕಾರಿಗಳು ಮತ್ತು ಸಿಬ್ಬಂದಿ, ಕಸಾಪ ಪದಾಧಿಕಾರಿಗಳು , ಮಾಜಿ ಅಧ್ಯಕ್ಷರು , ವಿವಿದ ಕನ್ನಡ ಪರ ಸಂಘಟನೆಗಳ ಸದಸ್ಯರು, ರೈತ ಪರ ಸಂಘಟನೆ ಸದಸ್ಯರು, ಶಾಲಾ ಶಿಕ್ಷಕರು, ವಿದ್ಯಾರ್ಥಿಗಳು ಮೆರವಣಿಗೆಯಲ್ಲಿ ಭಾಗವಹಿಸಿದ್ದರು.