
Sidlaghatta : ಕೈವಾರದ ಯೋಗಿ ನಾರೇಯಣಪ್ಪ ಅವರ ಅಧ್ಯಾತ್ಮಿಕತೆ, ಚಿಂತನೆಗಳು ಹಾಗೂ ಕೀರ್ತನೆಗಳು ಆಧುನಿಕ ಯುಗದಲ್ಲಿಯೂ ಪ್ರಸ್ತುತವಾಗಿದ್ದು, ಭಕ್ತರ ಹೃದಯದಲ್ಲಿ ಸದಾ ಜೀವಂತವಾಗಿವೆ ಎಂದು ತಹಶೀಲ್ದಾರ್ ಬಿ.ಎನ್.ಸ್ವಾಮಿ ಹೇಳಿದರು.
ತಾಲ್ಲೂಕು ಕಚೇರಿ ಸಭಾಂಗಣದಲ್ಲಿ ರಾಷ್ಟ್ರೀಯ ಹಾಗೂ ನಾಡಹಬ್ಬಗಳ ಆಚರಣಾ ಸಮಿತಿ ವತಿಯಿಂದ ಶುಕ್ರವಾರ ಹಮ್ಮಿಕೊಂಡಿದ್ದ ಯೋಗಿ ನಾರೇಯಣ ಯತೀಂದ್ರ ಜಯಂತ್ಯೋತ್ಸವದಲ್ಲಿ ಅವರು ಮಾತನಾಡಿದರು.
“ಕೋಲಾರ, ಚಿಕ್ಕಬಳ್ಳಾಪುರ ಹಾಗೂ ಬೆಂಗಳೂರು ಗ್ರಾಮಾಂತರ ಭಾಗದಲ್ಲಿ ಕೈವಾರ ತಾತಯ್ಯನವರ ಧಾರ್ಮಿಕ ಹಾಗೂ ಆಧ್ಯಾತ್ಮಿಕ ಪ್ರಭಾವ ಹೆಚ್ಚಾಗಿದೆ. ಅವರ ಕೀರ್ತನೆಗಳು ಸರಳ ಮತ್ತು ಸ್ಪಷ್ಟವಾಗಿರುವುದರಿಂದ ಜನ ಜೀವನದ ವಾಸ್ತವತೆ ಕನ್ನಡಿಯಂತೆ ಪ್ರತಿಬಿಂಬಿಸುತ್ತವೆ. ಈ ಕಾರಣದಿಂದಲೇ, ಅವು ಜನಮನ್ನಣೆ ಪಡೆದುಕೊಂಡಿವೆ” ಎಂದು ಅವರು ಹೇಳಿದರು.
ಜಯಂತ್ಯೋತ್ಸವದ ಅಂಗವಾಗಿ ತಾತಯ್ಯರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಪುಷ್ಪ ನಮನ ಸಲ್ಲಿಸಲಾಯಿತು. ಈ ಸಂದರ್ಭ ಸಮುದಾಯದ ಎಸ್‌ಎಸ್‌ಎಲ್‌ಸಿ ಹಾಗೂ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳನ್ನು ಗೌರವಿಸಲಾಯಿತು.
ನಗರದ ಚಿಂತಾಮಣಿ ರಸ್ತೆಯ ಆಂಜನೇಯ ಸ್ವಾಮಿ ದೇವಾಲಯದಿಂದ ಯೋಗಿ ನಾರೇಯಣ ಯತೀಂದ್ರರ ಭಾವಚಿತ್ರವನ್ನು ಹೊತ್ತ ಪಲ್ಲಕ್ಕಿ ಮೆರವಣಿಗೆ ಹಮ್ಮಿಕೊಳ್ಳಲಾಯಿತು. ಊರಿನ ಪ್ರಮುಖ ಬೀದಿಗಳಲ್ಲಿ ಕಲಾತಂಡಗಳ ಸಂಭ್ರಮದೊಂದಿಗೆ ಮೆರವಣಿಗೆ ಸಾಗಿದ್ದು, ಭಕ್ತರ ಉತ್ಸಾಹ ಹೆಚ್ಚಿಸಿತು.
ಜಿಲ್ಲಾ ಜಾಗೃತಿ ಸಮಿತಿ ಸದಸ್ಯ ಮೇಲೂರು ಮಂಜುನಾಥ್, ತಾಲ್ಲೂಕು ಆರೋಗ್ಯಾಧಿಕಾರಿ ಡಾ. ವೆಂಕಟೇಶಮೂರ್ತಿ, ಕೈವಾರ ತಾತಯ್ಯನವರ ಆರಾಧಕ ಬಿ.ಕೆ. ವೇಣು ಸೇರಿದಂತೆ ಸಮುದಾಯದ ಮುಖಂಡರು, ವಿವಿಧ ಇಲಾಖೆಗಳ ಅಧಿಕಾರಿಗಳು, ಸಂಘ-ಸಂಸ್ಥೆಗಳ ಪದಾಧಿಕಾರಿಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.