Kachahalli, Sidlaghatta : ಶಿಡ್ಲಘಟ್ಟ ತಾಲ್ಲೂಕಿನ ಕಾಚಹಳ್ಳಿಯ ಸರ್ಕಾರಿ ಶಾಲೆಯಲ್ಲಿ ಶನಿವಾರ ಬ್ಯಾಗ್ ರಹಿತ ದಿನ ಆರೋಗ್ಯಕರ ಆಹಾರ ತಯಾರಿಸಿ, ಸವಿಯುವ ಮೂಲಕ ಆಚರಿಸಲಾಯಿತು.
ಆರೋಗ್ಯಕರ ಜೀವನಶೈಲಿ ಕುರಿತು ವಿದ್ಯಾರ್ಥಿಗಳಿಗೆ ಶಿಕ್ಷಕ ವಿ. ಚಂದ್ರಶೇಖರ್ ಮಾರ್ಗದರ್ಶನ ನೀಡಿದರು. ಆಧುನಿಕ ಮತ್ತು ಪುರಾತನ ಜೀವನ ಶೈಲಿಗಳ ವ್ಯತ್ಯಾಸವನ್ನು ವಿವರಿಸಿದರು. ಜೊತೆಗೆ ಗ್ರಾಮೀಣ ಪ್ರದೇಶದಲ್ಲಿ ದೊರೆಯುವ ಹಣ್ಣುಗಳು, ಸೊಪ್ಪುಗಳು, ತರಕಾರಿಗಳ ಪೌಷ್ಟಿಕತೆಯನ್ನು ಪರಿಚಯಿಸಿ, ಅವುಗಳಿಂದ ಆರೋಗ್ಯವನ್ನು ಹೇಗೆ ಸುಧಾರಿಸಬಹುದು ಎಂಬುದನ್ನು ವಿದ್ಯಾರ್ಥಿಗಳಿಗೆ ವಿವರಿಸಿದರು.
ಕಾಚಕ್ಕಿ ತಿನಿಸಿನ ಪ್ರಾಯೋಗಿಕ ಪರಿಚಯ:
ಮಕ್ಕಳಿಗೆ ಕಾಚಕ್ಕಿ ಎಂಬ ತಿನಿಸು ಪರಿಚಯಿಸಲಾಯಿತು. ರಾಗಿ ಬೆಳೆಗೆ ತಲೆ ಬಂದು (ಪೈರು) ಕಾಳುಗಳು ಹಾಲು ತುಂಬಿದಾಗ ಅದನ್ನು “ಬೆಳಸಿ” ಎಂದು ಕರೆಯಲಾಗುತ್ತದೆ. ಈ ಬೆಳಸಿಯನ್ನು ಬೆಂಕಿಯಲ್ಲಿ ಸುಟ್ಟು, ಕಾಳುಗಳನ್ನು ಉಜ್ಜಿ, ಬೆಲ್ಲ, ಸಕ್ಕರೆ ಅಥವಾ ಉಪ್ಪು-ಖಾರದೊಂದಿಗೆ ತಯಾರಿಸಿದ ತಿನಿಸು ಕಾಚಕ್ಕಿ ಎಂದು ಹೇಳಲಾಯಿತು. ಈ ತಿನಿಸು ಪ್ರಾಯೋಗಿಕವಾಗಿ ತಯಾರಿಸಲಾಗಿದ್ದು, ಮಕ್ಕಳು ಅದನ್ನು ಸವಿದು ಸಂತಸಪಟ್ಟರು. ಅಡುಗೆ ಸಹಾಯಕಿ ಗಾಯತ್ರಮ್ಮ ಸಹಕಾರ ನೀಡಿದರು.
ರಾಗಿ ಬೆಳೆಯ ಕುರಿತು ಪ್ರಾಯೋಗಿಕ ತರಗತಿ:
ಶಿಕ್ಷಕರು ಮಕ್ಕಳನ್ನು ರಾಗಿ ಹೊಲಕ್ಕೆ ಕರೆದೊಯ್ದು, ರಾಗಿ ಬೆಳೆಯ ಹಂತಗಳು, ರಾಗಿ ಬೆಳೆಯ ಉಪಯೋಗಗಳು ಮತ್ತು ಅದರ ಪೌಷ್ಠಿಕಾಂಶಗಳ ಬಗ್ಗೆ ವಿವರಿಸಿದರು. ಈ ವಿಶೇಷ ದಿನದ ಮೂಲಕ ಮಕ್ಕಳಲ್ಲಿ ಆರೋಗ್ಯಕರ ಆಹಾರ ಮತ್ತು ಜೀವನಶೈಲಿಯ ಮಹತ್ವವನ್ನು ಪರಿಚಯಿಸಲಾಯಿತು.