Y Hunasenahalli, Sidlaghatta : ಲೋಕಸಭೆ ಚುನಾವಣೆ ಫಲಿತಾಂಶ ಬಂದ ಕೆಲವೇ ದಿನಗಳಲ್ಲಿ ರಾಜ್ಯದ ಈಗಿನ ಕಾಂಗ್ರೆಸ್ ಸರ್ಕಾರ ಇರುವುದಿಲ್ಲ. ಇದು ನನ್ನ ಅನುಭವದಿಂದ ಹೊರಬಂದಂತಹ ಮಾತು ಎಂದು ಮಾಜಿ ಪ್ರಧಾನಮಂತ್ರಿ ಎಚ್.ಡಿ.ದೇವೇಗೌಡ ತಿಳಿಸಿದರು.
ತಾಲ್ಲೂಕಿನ ವೈ.ಹುಣಸೇನಹಳ್ಳಿಯ ಬಳಿ ಆಯೋಜಿಸಿದ್ದ ಬೃಹತ್ ಸಮಾವೇಶದಲ್ಲಿ ಕೋಲಾರ ಲೋಕಸಭಾ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಮಲ್ಲೇಶ್ ಬಾಬು ಪರವಾಗಿ ಮತಯಾಚನೆ ಮಾಡಿ ಅವರು ಮಾತನಾಡಿದರು.
ಉತ್ತರಪ್ರದೇಶದಿಂದ ಗೆದ್ದು ಜವಾಹರಲಾಲ್ ನೆಹರು 15 ವರ್ಷ ದೇಶವನ್ನಾಳಿದರು. ಅವರ ಮಗಳು ಇಂದಿರಾಗಾಂಧಿ 19 ವರ್ಷ ಮತ್ತು ಅವರ ಮಗ ರಾಜೀವ್ ಗಾಂಧಿ 6 ದೇಶವನ್ನಾಳಿದರು. ಈಗ ಕಾಂಗ್ರೆಸ್ ಪರಿಸ್ಥಿತಿ ಏನಾಗಿದೆ. ಉತ್ತರಪ್ರದೇಶದಿಂದ ನಿಲ್ಲದೆ ಕೇರಳಕ್ಕೆ ಬಂದಿರುವ ರಾಹುಲ್ ಗಾಂಧಿ, ಮೊನ್ನೆ ಹಾಸನದಲ್ಲಿ, ದೇವೇಗೌಡ ಬಿಜೆಪಿಯ ಬಿ ಟೀಮ್ ಎನ್ನುತ್ತಾರೆ ಎಂದು ವ್ಯಂಗ್ಯವಾಗಿ ಹೇಳಿದರು.
ನನಗೀಗ ವಯಸ್ಸು 91. ಆದರೂ ರಾಜ್ಯದ 28 ಕ್ಷೇತ್ರಗಳಲ್ಲಿ ಮೈತ್ರಿ ಅಭ್ಯರ್ಥಿಗಳ ಪರವಾಗಿ ಪ್ರಚಾರ ಮಾಡಲು ನಿರ್ಧರಿಸಿದ್ದೇನೆ. ಮೋದಿಯವರು ಮತ್ತೊಮ್ಮೆ ಪ್ರಧಾನಿ ಆಗಬೇಕು ಎನ್ನುವುದರಲ್ಲಿ ನನ್ನ ಸ್ವಾರ್ಥವಿಲ್ಲ. ರಾಷ್ಟ್ರದ ಹಿತಕ್ಕಾಗಿ, ದೇಶವನ್ನು ಆರ್ಥಿಕವಾಗಿ ಸದೃಢಗೊಳಿಸಲು ಅವರ ನಾಯಕತ್ವದ ಅಗತ್ಯವಿದೆ ಎಂದರು.
2014 ರಲ್ಲಿ ಬಿಜೆಪಿ ನಿಚ್ಚಳ ಬಹುಮತ ಪಡೆದು ಮೋದಿ ಪ್ರಧಾನಿ ಆದರೆ ನನ್ನ ಸ್ಥಾನಕ್ಕೆ ರಾಜೀನಾಮೆ ನೀಡಿ ರಾಜಕೀಯ ನಿವೃತ್ತಿ ಆಗುತ್ತೇನೆಂದು ನಾನು ಹೇಳಿದ್ದೆ. ಬಿಜೆಪಿ ಅಧಿಕಾರಕ್ಕೆ ಬಂತು, ಮೋದಿ ಅವರು ಪ್ರಧಾನಿಯೂ ಆದರು. ಆಗ ನಾನು ರಾಜೀನಾಮೆ ನೀಡಲು ಹೋದಾಗ ಮೋದಿ ಅವರು ನಿಮ್ಮಂತ ರಾಜಕೀಯ ಮುತ್ಸದ್ದಿಗಳ ಮಾರ್ಗದರ್ಶನ ನನಗೆ ಅಗತ್ಯವಿದೆ. ಚುನಾವಣೆ ಸಮಯದಲ್ಲಿ ಆರೋಪ ಪ್ರತ್ಯಾರೋಪ ಸಹಜ, ಆ ಮಾತನ್ನೆ ಗಂಭೀರವಾಗಿ ತೆಗೆದುಕೊಳ್ಳುವುದು ಬೇಡವೆಂದು ಹೇಳಿ ನನ್ನನ್ನು ಕಳುಹಿಸಿದ ದೊಡ್ಡ ಮನುಷ್ಯ ಮೋದಿ ಎಂದರು.
ಬಿ.ಆರ್.ಅಂಬೇಡ್ಕರ್ ಅವರು ನಮ್ಮ ದೇಶಕ್ಕೆ ಉತ್ತಮ ಸಂವಿಧಾನವನ್ನು ನೀಡಿ ಈ ದೇಶದಲ್ಲಿ ಹೇಗೆ ಆಡಳಿತ ನಡೆಸಬೇಕೆಂದು ಮಾರ್ಗದರ್ಶನ ನೀಡಿದ ಮಹಾನುಭಾವ. ಅಂತಹವರನ್ನು ಸಂಸತ್ತಿಗೆ ಬಿಡದೆ ಮಾಡಿದವರು ಕಾಂಗ್ರೆಸ್ಸಿಗರು ಎಂದು ಕಾಂಗ್ರೆಸ್ಸಿಗರ ವಿರುದ್ದ ಹರಿಹಾಯ್ದರು.
ಅಂಬೇಡ್ಕರ್ ಅವರು ಸಂಸತ್ತಿಗೆ ಆಯ್ಕೆ ಆಗದಂತೆ ಮಾಡಿದ ಪರಿಣಾಮ ಇಂದು ಉತ್ತರ ಪ್ರದೇಶದಿಂದಲೆ ಕಾಂಗ್ರೆಸ್ ಮಾಯವಾಗುವ ಪರಿಸ್ಥಿತಿ ನಿರ್ಮಾಣವಾಗಿದೆ. ನೆಹರು, ಇಂದಿರಾಗಾಂಧಿ, ರಾಜೀವ್ ಗಾಂಧಿ ಅವರು ಸತತ 40 ವರ್ಷಗಳ ಕಾಲ ಪ್ರತಿನಿಧಿಸಿದ ಉತ್ತರ ಪ್ರದೇಶದಲ್ಲಿ ಚುನಾವಣೆಗೆ ನಿಲ್ಲಲು ರಾಹುಲ್ ಗಾಂಧಿಗೆ ಸಾಧ್ಯವಾಗುತ್ತಿಲ್ಲ. ಬೇರೆ ಕ್ಷೇತ್ರವನ್ನ ಹುಡುಕಿಕೊಂಡಿದ್ದು ಕೇರಳಕ್ಕೆ ಹೋಗಿದ್ದಾನೆಂದರು.
ಅಷ್ಟೇ ಅಲ್ಲ ಸಂಸತ್ತಿನಲ್ಲಿ ವಿರೋಧ ಪಕ್ಷ ಸ್ಥಾನ ಮಾನವನ್ನು ಪಡೆಯಲು ಸಾಕಾಗುವಷ್ಟು ಸ್ಥಾನಗಳನ್ನು ಕೂಡ ಕಾಂಗ್ರೆಸ್ ಪಡೆಯದಷ್ಟು ದುಸ್ಥಿತಿಗೆ ಇಳಿದಿದೆ ಎಂದು ವ್ಯಂಗ್ಯವಾಡಿದರು.
ಕಾಂಗ್ರೆಸ್ ನವರ 2 ಸಾವಿರ ರೂಪಾಯಿಯ ಒಂದು ಗ್ಯಾರಂಟಿಗೆ ನಮ್ಮ ಕುಮಾರಣ್ಣನ ಪಂಚರತ್ನ ಯೋಜನೆಗಳನ್ನು ಮರೆತುಬಿಟ್ಟಿರಿ. ರೈತರ 25 ಸಾವಿರ ಕೋಟಿ ರೂ.ಗಳ ರೈತರ ಸಾಲ ಮನ್ನಾ ಮಾಡಿದ್ದನ್ನೂ ಮರೆತು ಹೋದ್ರಿ, ಬಸವರಾಜು ಬೊಮ್ಮಾಯಿ, ಸದಾನಂದಗೌಡ, ಜಗಶ್ ಶೆಟ್ಟರು, ಯಡಿಯೂರಪ್ಪ ಅವಧಿಯಲ್ಲಿ ಆದ ಕೆಲಸ ಕಾರ್ಯಗಳನ್ನೂ ಮರೆತು ಹೋಯ್ತು ಎಂದು ಬೇಸರ ವ್ಯಕ್ತಪಡಿಸಿದರು.
ದೇಶವನ್ನು ಜಗತ್ತಿನಲ್ಲೆ ಮುಂಚೂಣಿ ಸ್ಥಾನಕ್ಕೆ ತರಲು ಯತ್ನಿಸುತ್ತಿರುವ ಮೋದಿಯಂತ ನಾಯಕನ ವಿರುದ್ದ ನಮ್ಮ ಸಿಎಂ ಏನೇನೋ ಹೇಳ್ತಾರೆ. ದೇಶದ ಒಕ್ಕೂಟದ ವ್ಯವಸ್ಥೆಯಲ್ಲಿ ಪಿಎಂ ಆದವರ ವಿರುದ್ದ ಒಂದು ರಾಜ್ಯದ ಮುಖ್ಯಮಂತ್ರಿ ಆದವರು ಅಯ್ಯೋ ಏನು ಹೇಳೋದು ಎಂದು ವ್ಯಂಗ್ಯವಾಡಿದರು.
ಚಿಕ್ಕಬಳ್ಳಾಪುರಕ್ಕೆ ಶನಿವಾರ ಪ್ರಧಾನಿ ಮೋದಿ ಅವರು ಬರುತ್ತಾರೆ. ನನಗೆ ಬರಲೇಬೇಕೆಂದು ಐದು ನಿಮಿಷ ಮಾತನಾಡಬೇಕೆಂದು ಕೇಳಿದ್ದಾರೆ. ನಾನು ಚಿಕ್ಕಬಳ್ಳಾಪುರಕ್ಕೆ ಹೋಗುತ್ತೇನೆ. ಪ್ರಧಾನಿ ಮೋದಿ ಅವರ ರಾಷ್ಟ್ರ ನಿರ್ಮಾಣದ ಕೆಲಸದ ಒತ್ತಡದ ಅರಿವು ನನಗಿದೆ. ಅವರ ಸಮಯವನ್ನು ನಾನು ವ್ಯರ್ಥ ಮಾಡೊಲ್ಲ. ಆದರೂ ನಾನು ಐದು ನಿಮಿಷಕ್ಕಿಂತ ಹೆಚ್ಚು ಸಮಯ ತೆಗೆದೇ ತೆಗೆದುಕೊಳ್ಳುತ್ತೇನೆ ಬಿಡುವುದಿಲ್ಲ ಜಾಸ್ತಿ ಮಾತನಾಡುವುದಿದೆ ಎಂದು ಹೇಳಿದರು.
ಚೊಂಬು :
ಮಾಜಿ ಮುಖ್ಯಮಂತ್ರಿ ಸದಾನಂದಗೌಡ ಮಾತನಾಡಿ, ಶುಕ್ರವಾರ ಕಾಂಗ್ರೆಸ್ ನವರು ಚೊಂಬಿನ ಜಾಹೀರಾತನ್ನು ಕೊಟ್ಟಿದ್ದಾರೆ. ಹೌದು ಕಾಂಗ್ರೆಸ್ ನವರ ಯೊಗ್ಯತೆಗೆ ಚೊಂಬು ಮಾತ್ರ ಕೊಡಲು ಸಾಧ್ಯವಿದೆ. ಅದೇ ನರೇಂದ್ರ ಮೋದಿಯವರು ಪ್ರತೀ ಮನೆಗೂ ಶುದ್ಧ ಕುಡಿಯುವ ನೀರಿನ ನಲ್ಲಿ ಅಳವಡಿಸುವ ಯೋಜನೆ ಮಾಡಿ ತೋರಿಸಿಕೊಟ್ಟಿದ್ದಾರೆ ಎಂದು ಹೇಳಿದರು.
ಸಿದ್ಧರಾಮಯ್ಯನವರನ್ನು ಜೈಲಿಗೆ ಕಳುಹಿಸಬೇಕು :
ಚಿಂತಾಮಣಿ ಮಾಜಿ ಶಾಸಕ ಎಂ.ಕೃಷ್ಣಾರೆಡ್ಡಿ ಮಾತನಾಡಿ, ಯಾವುದೇ ಸರ್ಕಾರ ಬಂದರೂ ದೀನದಲಿತರ ಉದ್ಧಾರಕ್ಕಾಗಿ ಹಣ ಮೀಸಲಿಟ್ಟಿರುತ್ತಾರೆ. ಆದರೆ ಈಗಿನ ಕಾಂಗ್ರೆಸ್ ಸರ್ಕಾರ ಎಸ್ಸಿಎಸ್ಟಿಗೆ ಮೀಸಲಾದ 11,300 ಸಾವಿರ ಕೋಟಿ ರೂಗಳನ್ನು ಗ್ಯಾರಂಟಿ ಯೋಜನೆಗಳಿಗೆ ದುರುಪಯೋಗ ಮಾಡಿಕೊಂಡಿದ್ದಾರೆ. ಎಸ್ಸಿಎಸ್ಟಿ ಹಣವನ್ನು ದುರುಪಯೋಗ ಮಾಡಿಕೊಂಡ ಮುಖ್ಯಮಂತ್ರಿ ಸಿದ್ಧರಾಮಯ್ಯನವರನ್ನು ಜೈಲಿಗೆ ಕಳುಹಿಸಬೇಕು. ರಾಜ್ಯದ ಎಸ್ಸಿಎಸ್ಟಿ ಜನಾಂಗದವರು ಕಾಂಗ್ರೆಸ್ ಗೆ ಬುದ್ದಿ ಕಲಿಸಬೇಕಿದೆ ಎಂದರು.
ಕೋಲಾರದ ಸಂಸದ ಮುನಿಸ್ವಾಮಿ, ಮುಳಬಾಗಿಲು ಶಾಸಕ ಸಮೃದ್ದಿ ಮಂಜುನಾಥ್, ಮಾಜಿ ಸಚಿವ ಬಂಡೆಪ್ಪ ಕಾಶೆಂಪುರ, ಅರವಿಂದ ಲಿಂಬಾವಳಿ, ಶಿಡ್ಲಘಟ್ಟದ ಬಿಜೆಪಿ ಮುಖಂಡ ಸೀಕಲ್ ರಾಮಚಂದ್ರಗೌಡ, ಮಾಜಿ ಶಾಸಕ ಚಿಂತಾಮಣಿಯ ಜೆ.ಕೆ.ಕೃಷ್ಣಾರೆಡ್ಡಿ, ಶಿಡ್ಲಘಟ್ಟದ ಎಂ.ರಾಜಣ್ಣ ಮಾತನಾಡಿ ಜನವಿರೋಧಿ ಕಾಂಗ್ರೆಸ್ ಪಕ್ಷಕ್ಕೆ ತಕ್ಕ ಪಾಠ ಕಲಿಸುವಂತೆ ಕರೆ ನೀಡಿದರು.
ಶಿಡ್ಲಘಟ್ಟದ ಶಾಸಕ ಬಿ.ಎನ್.ರವಿಕುಮಾರ್, ಎಮ್ಮೆಲ್ಸಿ ಇಂಚರಗೋವಿಂದರಾಜು, ವೈ.ಎ.ನಾರಾಯಣಸ್ವಾಮಿ, ಶಿಡ್ಲಘಟ್ಟದ ಬಿಜೆಪಿ ಮುಖಂಡ ಸೀಕಲ್ ರಾಮಚಂದ್ರಗೌಡ, ಕೋಚಿಮುಲ್ ಮಾಜಿ ನಿರ್ದೇಶಕ ಕೆ.ವಿ.ನಾಗರಾಜ್, ಚಿಂತಾಮಣಿ ಬಿಜೆಪಿ ಮುಖಂಡ ವೇಣು, ಡಿ.ವಿ.ವೆಂಕಟೇಶ್, ಸೀಕಲ್ ಆನಂದಗೌಡ, ಕಂಬದಹಳ್ಳಿ ಸುರೇಂದ್ರಗೌಡ, ತಾದೂರು ರಘು, ಉಮೇಶ್, ನಂಜಪ್ಪ ಇನ್ನಿತರೆ ಜೆಡಿಎಸ್ ಮತ್ತು ಬಿಜೆಪಿ ಮುಖಂಡರು ಹಾಜರಿದ್ದರು.