Sidlaghatta : ಶಿಡ್ಲಘಟ್ಟ ನಗರದಲ್ಲಿ ಸೋಮವಾರದಿಂದ ಬುಧವಾರದವರೆಗೂ ಮೂರು ದಿನಗಳ ಕಾಲ ನಡೆದ ಊರಜಾತ್ರೆಗೆ ಆಗಮಿಸಿದ್ದ ವಾಹನಸವಾರರಿಗೆ ನಗರದಲ್ಲಿ ಹಲವು ಕಡೆ ಟ್ರಾಫಿಕ್ ಜಾಮ್‌ನ ಬಿಸಿ ತಟ್ಟಿತು.
ನಗರದ ದಿಬ್ಬೂಹರಳ್ಳಿ ಬೈಪಾಸ್, ಬಸ್ ನಿಲ್ಧಾಣ, ಉಲ್ಲೂರುಪೇಟೆ ಮುಂತಾದ ಕಡೆ ಗಂಟೆ ಗಟ್ಟಲೆ ಟ್ರಾಫಿಕ್ ಜಾಮ್ ಸಮಸ್ಯೆ ಎದುರಾಯಿತು.
ಸುಮಾರು ಹತ್ತು ವರ್ಷಗಳ ನಂತರ ಇಡೀ ನಗರದಲ್ಲಿನ ಎಲ್ಲರೂ ಒಟ್ಟುಗೂಡಿ ಹಬ್ಬದ ಜಾತ್ರೆಯನ್ನು ಸಂಭ್ರಮದಿಂದ ಆಚರಿಸಿದರು. ಮೂರು ದಿನಗಳ ಕಾಲ ಊರಲ್ಲಿನ ಎಲ್ಲ ಗ್ರಾಮ ದೇವರುಗಳಿಗೂ ಮನೆ ಮನೆಯಿಂದಲೂ ತಂಬಿಟ್ಟಿದ ಆರತಿ ದೀಪಗಳನ್ನು ಬೆಳಗಲಾಯಿತು. ಊರ ದೇವರುಗಳ ಮೆರವಣಿಗೆಯನ್ನೂ ಸಹ ನಗರದಲ್ಲಿನ ಎಲ್ಲ ಮುಖ್ಯ ಬೀದಿಗಳಲ್ಲೂ ನಡೆಸಲಾಯಿತು.
ದಶಕದ ನಂತರ ನಡೆದ ಊರ ಜಾತ್ರೆಗೆ ಬಂಧು ಬಳಗ ಸ್ನೇಹಿತರನ್ನು ಕರದು ಭರ್ಜರಿ ಬಾಡೂಟ ಹಾಕಿದರು.
ಈ ವೇಳೆ ಶಿಡ್ಲಘಟ್ಟ ನಗರಕ್ಕೆ ಅಂದಾಜಿನಂತೆ ಸಾವಿರಾರು ಸಂಖ್ಯೆಯಲ್ಲಿ ಬಂಧು ಬಳಗ ಸ್ನೇಹಿತರು ಆಗಮಿಸಿದ್ದು ನೂರಾರು ವಾಹನಗಳು ನಗರಕ್ಕೆ ಲಗ್ಗೆಯಿಟ್ಟಿದ್ದವು.
ಅದರಲ್ಲೂ ಊಟದ ಸಮಯ ಮದ್ಯಾಹ್ನವಂತೂ ಒಂದೇ ಸಮಯಕ್ಕೆ ವಾಹನಗಳು ನಗರದೊಳಗೆ ಪ್ರವೇಶಿಸಿದ್ದು ಈ ವೇಳೆ ನಗರದ ಆಯಕಟ್ಟಿನ ಸ್ಥಳ, ರಸ್ತೆ, ವೃತ್ತಗಳಲ್ಲಿ ಎರಡು ಗಂಟೆಗಳಿಗೂ ಹೆಚ್ಚು ಸಮಯ ಟ್ರಾಫಿಕ್ ಜಾಮ್ ಉಂಟಾಯಿತು.
ಈ ವೇಳೆ ಟ್ರಾಫಿಕ್ ಜಾಮ್‌ನ್ನು ನಿಭಾಯಿಸಬೇಕಾದ ಶಿಡ್ಲಘಟ್ಟ ನಗರದ ಪೊಲೀಸರು ಅತ್ತ ಸುಳಿಯಲಿಲ್ಲ. ಟ್ರಾಫಿಕ್‌ಜಾಮ್‌ಗೂ ನಮಗೂ ಸಂಬಂಧವೇ ಇಲ್ಲವೇನೋ ಎಂಬಂತೆ ಪೊಲೀಸರು ಅವರ ಪಾಡಿಗೆ ಅವರಿದ್ದರು.
ಹೊರಗಿನಿಂದ ಬಂದಿದ್ದ ಅತಿಥಿಗಳು, ಬಂಧು ಬಳಗದವರು ತಮ್ಮ ತಮ್ಮ ಕಾರು ಮುಂತಾದ ವಾಹನಗಳಲ್ಲೆ ಟ್ರಾಫಿಕ್‌ನಲ್ಲಿ ಸಿಕ್ಕಿಹಾಕಿಕೊಂಡು ಪರಿತಪಿಸುವಂತಾಯಿತು.