
Jangamakote, Sidlaghatta : ಶಿಡ್ಲಘಟ್ಟ ತಾಲ್ಲೂಕಿನ ಜಂಗಮಕೋಟೆ ಹೋಬಳಿಯ 2823 ಎಕರೆ ಜಮೀನನ್ನು ಕರ್ನಾಟಕ ಕೈಗಾರಿಕಾ ಪ್ರದೇಶ ಅಭಿವೃದ್ಧಿ ಮಂಡಳಿ (ಕೆಐಎಡಿಬಿ) ಸ್ವಾಧೀನಪಡಿಸಿಕೊಳ್ಳಲು ಅಧಿಸೂಚನೆ ಹೊರಡಿಸಲಾಗಿದ್ದು, ನಮ್ಮ ಮಕ್ಕಳ ಉಜ್ವಲ ಭವಿಷ್ಯಕ್ಕಾಗಿ ನಾವು ಜಮೀನು ಹಸ್ತಾಂತರಿಸಲು ಸಿದ್ಧವಿದ್ದೇವೆ ಎಂದು ಕೆಐಎಡಿಬಿ ಜಮೀನುಗಳ ರೈತರ ಹೋರಾಟ ಸಮಿತಿಯ ರಾಮಾಂಜಿ ಹೇಳಿದರು.
ನಗರದ ಪ್ರವಾಸಿ ಮಂದಿರದಲ್ಲಿ ಶನಿವಾರ ಜಮೀನು ನೀಡಲು ಸಿದ್ಧರಿರುವ ರೈತರೊಂದಿಗೆ ಸುದ್ದಿಗೋಷ್ಠಿ ನಡೆಸಿ ಅವರು ಮಾತನಾಡಿದರು. ಜಂಗಮಕೋಟೆ ಹೋಬಳಿಯ 13 ಹಳ್ಳಿಗಳ ವ್ಯಾಪ್ತಿಯಲ್ಲಿ 2823 ಎಕರೆ ಜಮೀನು ಕೆಐಎಡಿಬಿ ಸ್ವಾಧೀನಕ್ಕೆ ಒಳಗಾಗಿದ್ದು, ಈ ಕುರಿತು ಈಗಾಗಲೇ 1200 ಕ್ಕೂ ಹೆಚ್ಚು ರೈತರಿಗೆ ನೋಟಿಸ್ ಜಾರಿಯಾಗಿದೆ. ಇದರಲ್ಲಿ 860 ಕ್ಕೂ ಹೆಚ್ಚು ರೈತರು ಜಮೀನು ನೀಡಲು ಒಪ್ಪಿಕೊಂಡು ಒಪ್ಪಿಗೆ ಪತ್ರ ನೀಡಿದ್ದಾರೆ. ಆದರೆ ಕೆಲ ರೈತ ಸಂಘಟನೆಗಳ ಮುಖಂಡರು ಅದನ್ನು ವಿರೋಧಿಸುತ್ತಿದ್ದು, ಆಯುಕ್ತರು ಹಾಗೂ ವಿಶೇಷ ಭೂಸ್ವಾಧೀನ ಅಧಿಕಾರಿಯನ್ನು ಭೇಟಿಯಾದವರ ಪೈಕಿ ಬೆರಳೆಣಿಕೆಯಷ್ಟು ರೈತರಿದ್ದಾರೆ, ಉಳಿದವರು ಭೂದಲ್ಲಾಳಿಗಳಾಗಿದ್ದಾರೆ ಎಂದು ಅವರು ವಾಗ್ದಾಳಿ ನಡೆಸಿದರು.
“ನಿಮಗೆ ಇಷ್ಟವಿಲ್ಲದಿದ್ದರೆ ನಿಮ್ಮ ಭೂಮಿ ನೀಡಬೇಡಿ. ಆದರೆ ನಮ್ಮ ಭೂಮಿಯ ಬಗ್ಗೆ ನಿರ್ಧಾರ ತೆಗೆದುಕೊಳ್ಳುವುದು ನಮ್ಮ ಹಕ್ಕು, ಇದರಲ್ಲಿ ಅನಗತ್ಯ ಹಸ್ತಕ್ಷೇಪ ಬೇಡ” ಎಂದು ಹೇಳಿದರು. ಜಂಗಮಕೋಟೆ ಹೋಬಳಿಯಲ್ಲಿ ಖಾಸಗಿ ರಿಯಲ್ ಎಸ್ಟೇಟ್ ಉದ್ಯಮಿಗಳು ಕೃಷಿ ಭೂಮಿ ಖರೀದಿಸಿ ಲೇಔಟ್ ಮಾಡುತ್ತಿರುವಾಗ ಇದನ್ನು ಪ್ರಶ್ನಿಸದವರು, ಈಗ ಸರ್ಕಾರ ಕೈಗಾರಿಕೆ ಸ್ಥಾಪನೆಗಾಗಿ ರೈತರಿಗೆ ಹೆಚ್ಚಿನ ಹಣ ನೀಡಿದಾಗ ಮಾತ್ರ ವಿರೋಧಿಸುತ್ತಿದ್ದಾರೆ ಎಂದು ದೂರಿದರು.
“ಬಡ ರೈತರು ಕೇವಲ 1-2 ಲಕ್ಷಕ್ಕೆ ನೋಂದಣಿ ಮಾಡಿಕೊಂಡ 520 ಎಕರೆ ಜಮೀನು ಈಗ ಪಿಎಸ್‌ಎಲ್ ಕಂಪನಿಯ ಹೆಸರಿನಲ್ಲಿದೆ. ಇಂತಹ ರಿಯಲ್ ಎಸ್ಟೇಟ್ ಕಂಪನಿಗಳ ಜೊತೆ ಗುರುತಿಸಿಕೊಂಡಿರುವವರು ನಿಜವಾದ ರೈತರ ಬಗ್ಗೆ ಲಘುವಾಗಿ ಮಾತನಾಡುವುದು ನಿಲ್ಲಿಸಬೇಕು” ಎಂದು ಒತ್ತಿಹೇಳಿದರು. ಕೆಐಎಡಿಬಿ ನಮ್ಮನ್ನು ರೈತರು ಎಂದು ಗುರುತಿಸಿ ನೋಟಿಸ್ ನೀಡಿರುವ ಕಾರಣ ನಾವು ಒಪ್ಪಿಗೆ ಪತ್ರ ಬರೆದುಕೊಂಡಿದ್ದೇವೆ. ಆದರೆ, ಕೆಐಎಡಿಬಿ ಹೆಸರು ನಮೂದಿಸಿರುವ ಕಾರಣ ನಮ್ಮ ಜಮೀನಿಗೆ ಬ್ಯಾಂಕಿನಿಂದ ಯಾವುದೇ ಸಾಲ ದೊರೆಯುತ್ತಿಲ್ಲ. ಈಗ ಹಣದ ಅಗತ್ಯವಿರುವ ಕಾರಣ ಡಿನೋಟೀಫಿಕೇಷನ್ ಮಾಡಿಸಲು ಅಥವಾ ನಮ್ಮ ಜಮೀನಿಗೆ ಎಕರೆಗೆ 20 ಲಕ್ಷ ಸಾಲ ಒದಗಿಸಲು ನೆರವಾಗಬೇಕು ಎಂದು ಅವರು ಆಗ್ರಹಿಸಿದರು.
“ಪರಿಶಿಷ್ಟ ಜಾತಿ, ಪಂಗಡ ಮತ್ತು ಸಾಮಾನ್ಯ ವರ್ಗದ ರೈತರ ಜಮೀನಿಗೆ ಸಮಾನ ಪರಿಹಾರ ನೀಡುವುದೇ ಕೆಐಎಡಿಬಿ ಭೂಸ್ವಾಧೀನ ವಿರೋಧಿಸುವ ನಿಮ್ಮ ಕಾಳಜಿಯ ನಿಜವಾದ ಕಾರಣ. ಈ ಹಿಂದೆ ತಾಲ್ಲೂಕಿನ ಸುಂಡ್ರಹಳ್ಳಿ ಬಳಿಯ ವಿಶ್ವವಿದ್ಯಾಲಯ ನಿರ್ಮಾಣ ಯೋಜನೆಯನ್ನು ಬೇರೆಡೆಗೆ ಸ್ಥಳಾಂತರಿಸಲು ಕಾರಣರಾದ ನಿಮ್ಮ ‘ರೈತಪರ’ ಕಾಳಜಿ ಜನರಿಗೆ ಈಗಲೂ ನೆನಪಿದೆ” ಎಂದು ಚುಚ್ಚುಮಾತುಹಾಕಿದರು.
ಈ ಸಂದರ್ಭದಲ್ಲಿ ಎನ್.ಸಿ.ಸುಬ್ರಮಣಿ, ವಾಸುದೇವ, ರಾಮದಾಸ, ಮುನೇಗೌಡ, ರವಿ, ಆಂಜಿನಪ್ಪ, ತಿಪ್ಪೇಗೌಡ, ಪ್ರಭು, ನರಸಿಂಹ ಸೇರಿದಂತೆ ಹಲವರು ಉಪಸ್ಥಿತರಿದ್ದರು.