
Jangamakote, Sidlaghatta : “ಮನುಷ್ಯನ ಜೀವನದಲ್ಲಿ ಸಂಪತ್ತು, ಹುದ್ದೆ, ಸ್ಥಾನವೆಲ್ಲ ತಾತ್ಕಾಲಿಕ. ಆದರೆ ಗುರುಗಳಿಂದ ಕಲಿತ ವಿದ್ಯೆ ಹಾಗೂ ಶಿಷ್ಯನೊಂದಿಗೆ ಇರುವ ಬಂಧ ಮಾತ್ರ ಶಾಶ್ವತವಾಗಿ ಉಳಿಯುತ್ತದೆ,” ಎಂದು ಶಿಕ್ಷಕ ಎಚ್.ಎನ್. ನಾಗರಾಜ್ ಹೇಳಿದರು.
ತಾಲ್ಲೂಕಿನ ಜಂಗಮಕೋಟೆ ಸರ್ಕಾರಿ ಪ್ರೌಢಶಾಲೆ 1988-89ನೇ ಸಾಲಿನ ಎಸ್.ಎಸ್.ಎಲ್.ಸಿ ಹಳೆಯ ವಿದ್ಯಾರ್ಥಿಗಳಿಂದ ಹಮ್ಮಿಕೊಂಡ 36ನೇ ವರ್ಷದ ಸವಿನೆನಪು ಮತ್ತು ಸ್ನೇಹ ಸಮ್ಮಿಲನ, ಗುರುವಂದನಾ ಕಾರ್ಯಕ್ರಮದಲ್ಲಿ ಅವರು ಆಶೀರ್ವಚನ ನೀಡಿದರು.
“ಜೀವನದಲ್ಲಿ ಗುರಿ, ಛಲ ಮತ್ತು ಗುರುಗಳ ಆಶೀರ್ವಾದ ಇದ್ದರೆ ಮಾತ್ರ ವಿದ್ಯಾರ್ಥಿಯು ಉನ್ನತಿಗೆ ಏರಬಹುದು. ಶಿಷ್ಯನ ಯಶಸ್ಸಿನಲ್ಲಿ ಗುರುಗೆ ಆಗುವ ಸಂತೋಷ ಅತಿಶಯವಾದದ್ದು,” ಎಂದು ನಾಗರಾಜ್ ಹೇಳಿದರು.
ಕಾರ್ಯಕ್ರಮದಲ್ಲಿ ಹಳೆ ವಿದ್ಯಾರ್ಥಿಗಳು ತಮ್ಮ ಬಾಲ್ಯ ಸ್ನೇಹಿತರನ್ನು ನೋಡಿಕೊಂಡು ಸಂತಸಪಟ್ಟರು. ತಮ್ಮ ಹಳೆಯ ಗುರುಗಳನ್ನು ಕಂಡ ವಿದ್ಯಾರ್ಥಿಗಳು ಪಾದಸ್ಪರ್ಶ ಮಾಡಿ ಆಶೀರ್ವಾದ ಪಡೆದುಕೊಳ್ಳುವ ದೃಶ್ಯಗಳು ಎಲ್ಲರ ಮನಸ್ಸನ್ನು ಮುಟ್ಟಿದವು.
ಹಳೆಯ ವಿದ್ಯಾರ್ಥಿಗಳಿಂದ ಗುರುಗಳಿಗೆ ಗೌರವ ಸಮರ್ಪಿಸಲಾಯಿತು.
ಕಾರ್ಯಕ್ರಮದಲ್ಲಿ ಗುರುಗಳು ಚಿಕ್ಕಪ್ಪಯ್ಯ, ಎಸ್.ಚಂದ್ರಶೇಖರ್, ಎ.ರಾಜಪ್ಪ, ನಂದೀಶ್, ಎಸ್.ವಿ.ರಾಜಗೋಪಾಲ್, ಹಳೆಯ ವಿದ್ಯಾರ್ಥಿಗಳಾದ ಗ್ರಾಮ ಪಂಚಾಯಿತಿ ಕಾರ್ಯದರ್ಶಿ ರಾಜಣ್ಣ, ಆಂಜನೇಯ, ಪ್ರಕಾಶ್ ಮತ್ತಿತರರು ಭಾಗವಹಿಸಿದ್ದರು.