Sidlaghatta : ಯೋಗದಿಂದ ಮಾನಸಿಕ ಮತ್ತು ಶಾರೀರಿಕ ಸಾಧನೆ ಸಾಧ್ಯವಾಗಿ ಆರೋಗ್ಯ ಸಂವರ್ಧನೆ ಸುಲಭವಾಗಬಲ್ಲದು. ಯೋಗವು ಭಾವನಾತ್ಮಕ ಚೈತನ್ಯವನ್ನು ಒದಗಿಸಿ ಆಧ್ಯಾತ್ಮಿಕ ಸಾಧನೆಗೆ ಪೂರಕವಾಗಿ ಎಡೆಮಾಡಿಕೊಡುತ್ತದೆ ಎಂದು ಪ್ರಧಾನ ಸಿವಿಲ್ ನ್ಯಾಯಾಧೀಶೆ ಹಾಗೂ ತಾಲ್ಲೂಕು ಕಾನೂನು ಸೇವಾ ಸಮಿತಿ ಸದಸ್ಯ ಕಾರ್ಯದರ್ಶಿ ಪೂಜಾ ಜೆ ತಿಳಿಸಿದರು.
ನಗರದ ದಿಬ್ಬೂರಹಳ್ಳಿ ರಸ್ತೆಯಲ್ಲಿನ ನ್ಯಾಯಾಲಯ ಸಂಕೀರ್ಣದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಯೋಗದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಯೋಗಾಭ್ಯಾಸವೆಂಬುದು ಕೇವಲ ಆಸನ ಅಥವಾ ಪ್ರಾಣಾಯಾಮಗಳಿಗೆ ಮೀಸಲಾಗದೇ ಭೌದ್ಧಿಕ ಮತ್ತು ಅಧ್ಯಾತ್ಮಿಕ ಬೆಳವಣಿಗೆಯ ಹಾದಿಯಾಗಿದೆ. ಯೋಗಶಿಕ್ಷಣವು ಇಡೀ ವಿಶ್ವದ ಮಾನವಕೋಟಿಗೆ ಭಾರತದ ಅತ್ಯಮೂಲ್ಯವಾದ ಕೊಡುಗೆಯಾಗಿದೆ ಎಂದರು.
ಯೋಗ ಶಿಕ್ಷಕ ರಾಜ ಮೋಹನ್, ತಾಲ್ಲೂಕು ವಕೀಲರ ಸಂಘದ ಅಧ್ಯಕ್ಷ ಎ.ನಾರಾಯಣಸ್ವಾಮಿ, ಪ್ರಧಾನ ಕಾರ್ಯದರ್ಶಿ ಭಾಸ್ಕರ್, ನ್ಯಾಯಾಲಯ ಸಿಬ್ಬಂದಿ ಹಾಗೂ ವಕೀಲರು ಹಾಜರಿದ್ದರು.
ಶಿಡ್ಲಘಟ್ಟ ನಗರದ ಬಿಜೆಪಿ ಸೇವಾ ಸೌಧದಲ್ಲಿ ಬಿಜೆಪಿ ಕಾರ್ಯಕರ್ತರು ಶುಕ್ರವಾರ ಅಂತರರಾಷ್ಟ್ರೀಯ ಯೋಗ ದಿನಾಚರಣೆ ಅಂಗವಾಗಿ ಯೋಗಾಭ್ಯಾಸ ನಡೆಸಿದರು.
ಬಿಜೆಪಿ ಮುಖಂಡ ಸೀಕಲ್ ರಾಮಚಂದ್ರಗೌಡ ಮಾತನಾಡಿ, ಯೋಗಾಭ್ಯಾಸ, ಪ್ರಾಣಾಯಾಮ ಮತ್ತು ಧ್ಯಾನ ಪ್ರತಿಯೊಬ್ಬರಿಗೂ ಅತ್ಯವಶ್ಯಕ. ಒತ್ತಡ ಹಾಗೂ ಮಾನಸಿಕ ಅಸಮತೋಲನ ತಡೆಗಟ್ಟುವಲ್ಲಿ ಧ್ಯಾನ ಮತ್ತು ಯೋಗ ನೆರವಾಗುತ್ತದೆ ಎಂದು ಹೇಳಿದರು.
ಮಾಜಿ ಶಾಸಕ ಎಂ.ರಾಜಣ್ಣ, ಜಿಲ್ಲಾ ಬಿಜೆಪಿ ಕಾರ್ಯದರ್ಶಿ ಸೀಕಲ್ ಆನಂದ ಗೌಡ, ತಾಲ್ಲೂಕು ಅಧ್ಯಕ್ಷ ಸುರೇಂದ್ರಗೌಡ, ಕನಕಪ್ರಸಾದ್, ಪತಂಜಲಿ ಯೋಗ ಶಿಕ್ಷಣ ಸಮಿತಿ ಯೋಗಗುರು ಶ್ರೀಕಾಂತ್ ಹಾಜರಿದ್ದರು.