Timmanayakanahalli, Sidlaghatta : ಶಿಡ್ಲಘಟ್ಟ ತಾಲ್ಲೂಕಿನ ಬಶೆಟ್ಟಹಳ್ಳಿ ಹೋಬಳಿಯ ತಿಮ್ಮನಾಯಕನಹಳ್ಳಿಯಲ್ಲಿ ರೈತರೊಬ್ಬರಿಗೆ ಗಂಗಾ ಕಲ್ಯಾಣ ಯೋಜನೆಯಡಿ ಮಂಜೂರಾಗಿದ್ದ ಕೊಳವೆ ಬಾವಿಗೆ ವಿದ್ಯುತ್ ಸಂಪರ್ಕ ನೀಡದಂತೆ ದೇವರಾಜು ಅರಸು ಅಭಿವೃದ್ದಿ ನಿಗಮದ ವ್ಯವಸ್ಥಾಪಕರು ತಡೆಯಿಡಿದಿದ್ದಾರೆ.
ತಿಮ್ಮನಾಯಕನಹಳ್ಳಿಯ ರೈತ ನಾರಾಯಣಸ್ವಾಮಿ ಎಂಬುವವರಿಗೆ ದೇವರಾಜು ಅರಸು ಅಭಿವೃದ್ದಿ ನಿಗಮದಿಂದ ಗಂಗಾ ಕಲ್ಯಾಣ ಯೋಜನೆಯಡಿ ಕೊಳವೆ ಬಾವಿ ಮಂಜೂರು ಆಗಿತ್ತು. ಕೊಳವೆಬಾವಿಯನ್ನು ಕೊರೆಸದೆ ಹತ್ತು ಅಡಿ ಆಳಕ್ಕೆ ಕೇಸಿಂಗ್ ಪೈಪನ್ನು ನಿಲ್ಲಿಸಿ ಸುತ್ತಲೂ ಮಣ್ಣು ರಾಶಿ ಹಾಕಿ ಕೊಳವೆಬಾವಿ ಕೊರೆಸಿದಂತೆ ಮಾಡಿದ್ದರು.
ಈ ಕೊರೆಯದ ಕೊಳವೆಬಾವಿಗೆ ಬೆಸ್ಕಾಂ ನವರು ವಿದ್ಯುತ್ ಸಂಪರ್ಕ ನೀಡಲು ಮುಂದಾಗಿದ್ದರು. ಗ್ರಾಮಸ್ಥರಿಗೆ ಅನುಮಾನ ಮೂಡಿದ್ದು ಸಂಬಂಧಿಸಿದ ಇಲಾಖೆಯವರಿಗೆ ಗ್ರಾಮದ ರೈತ ಮುಖಂಡ ಅರುಣ್ ಕುಮಾರ್ ಮತ್ತಿತರರು ಮೌಖಿಕವಾಗಿ ದೂರನ್ನು ನೀಡಿದ್ದರು.
ಈ ಹಿನ್ನಲೆಯಲ್ಲಿ ಸ್ಥಳಕ್ಕೆ ಸೋಮವಾರ ಭೇಟಿ ನೀಡಿದ ದೇವರಾಜು ಅರಸು ಅಭಿವೃದ್ದಿ ನಿಗಮದ ವ್ಯವಸ್ಥಾಪಕ ಶಿವಾನಂದ, ಬೆಸ್ಕಾಂನ ಅಧಿಕಾರಿಗಳು, ಗಂಗಾ ಕಲ್ಯಾಣ ಯೋಜನೆಯಡಿ ನಾರಾಯಣಸ್ವಾಮಿ ಅವರು ಕೊರೆಸಿದ್ದ ಕೊಳವೆಬಾವಿಯ ಆಳವನ್ನು ಪರಿಶೀಲಿಸಿದ್ದಾರೆ.
ಈ ವೇಳೆ ಕೇವಲ ಎಂಟು ಅಡಿಯಷ್ಟು ಆಳಕ್ಕೆ ರಂಧ್ರ ಮಾಡಿ ಹತ್ತು ಅಡಿ ಉದ್ದದ ಕೇಸಿಂಗ್ ಪೈಪನ್ನು ನಿಲ್ಲಿಸಿದ್ದು ಬೆಳಕಿಗೆ ಬಂದಿದ್ದು ಅಧಿಕಾರಿಗಳೆ ಬೆರಗಾಗಿದ್ದಾರೆ. ಕೊಳವೆ ಬಾವಿಯನ್ನು ಕೊರೆಸದೆ ಕೊರೆಸಿರುವುದಾಗಿ ದಾಖಲೆಗಳನ್ನು ಸೃಷ್ಟಿಸಿ ಡ್ರಿಲ್ಲಿಂಗ್‌ನ ಹಣ ಲಪಟಾಯಿಸಿದ ರೈತ, ಡ್ರಿಲ್ಲಿಂಗ್ ಮಾಡಿದ ಬೋರ್ ವೆಲ್ ಏಜೆನ್ಸಿಯವರ ಪಿತೂರಿ ಬಯಲಾಗಿದೆ.
2017-18ನೇ ಸಾಲಿನಲ್ಲಿ ರೈತ ನಾರಾಯಣಸ್ವಾಮಿಯು ಗಂಗಾ ಕಲ್ಯಾಣ ಯೋಜನೆಯಡಿ ಕೊಳವೆಬಾವಿಗೆ ಅರ್ಜಿ ಸಲ್ಲಿಸಿದ್ದು 2022 ರಲ್ಲಿ ಕೊಳವೆಬಾವಿ ಮಂಜೂರಾಗಿತ್ತು. ಸುಮಾರು 3.5 ಲಕ್ಷ ರೂ.ಘಟಕ ವೆಚ್ಚದ ಈ ಯೋಜನೆಯಡಿ ಕೊಳವೆಬಾವಿ ಕೊರೆಸಿ ನೀರು ದೊರೆತರೆ ಪಂಪು ಮೋಟಾರು ಕೇಬಲ್ ಅಳವಡಿಸಿ ವಿದ್ಯುತ್ ಸಂಪರ್ಕವನ್ನು ನೀಡಲಾಗುತ್ತದೆ.