Sidlaghatta : ಶಿಥಿಲಗೊಂಡಿರುವ ಶಾಲಾ ಕಟ್ಟಡ ತೆರವು ಮಾಡಿ ನೂತನ ಕಟ್ಟಡ ನಿರ್ಮಾಣ ಮಾಡಲು ವಿನಾಕಾರಣ ನಿರ್ಲಕ್ಷ್ಯ ಮಾಡುತ್ತಿರುವ ಅಧಿಕಾರಿಗಳ ವಿರುದ್ಧ ಕರ್ತವ್ಯ ಸರಿಯಾಗಿ ನಿಭಾಯಿಸುತ್ತಿಲ್ಲ ಎಂದು ಲೋಕಾಯುಕ್ತಕ್ಕೆ ಬರೆಯುವುದಾಗಿ ತಾಲ್ಲೂಕು ಕಾನೂನು ಸೇವಾ ಸಮಿತಿ ಅಧ್ಯಕ್ಷ ಹಾಗೂ ಹಿರಿಯ ಸಿವಿಲ್ ನ್ಯಾಯಾಧೀಶರಾದ ಯಮನಪ್ಪ ಕರೆ ಹನುಮಂತಪ್ಪ ಎಚ್ಚರಿಸಿದರು.
ಶಿಡ್ಲಘಟ್ಟ ನಗರದ ಹೊರವಲಯದ ಇದ್ಲೂಡು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಸೋಮವಾರ ಭೇಟಿ ನೀಡಿ ಪರಿಶೀಲನೆ ನಡೆಸಿ ಅವರು ಮಾತನಾಡಿದರು.
ತಾಲ್ಲೂಕಿನ ದೇವರಮಳ್ಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ, ನಗರಕ್ಕೆ ಹತ್ತಿರದಲ್ಲಿಯೇ ಇರುವ ಇದ್ಲೂಡು ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 105 ಮಕ್ಕಳ ಹಾಜರಾತಿಯಿದ್ದು, ಇರುವ ಐದು ಕೊಠಡಿಗಳ ಪೈಕಿ ಒಂದು ಕೊಠಡಿ ಸಂಪೂರ್ಣ ಶಿಥಿಲಗೊಂಡಿದ್ದು ಬೀಳುವ ಹಂತದಲ್ಲಿದೆ. ಉಳಿದ ನಾಲ್ಕು ಕೊಠಡಿಗಳಲ್ಲಿ ತರಗತಿ ನಡೆಸುವ ಸ್ಥಿತಿ ನಿರ್ಮಾಣವಾಗಿತ್ತು. ಈ ಬಗ್ಗೆ ಶಾಲೆಗೆ ಭೇಟಿ ನೀಡಿ ಶಾಲೆಯಲ್ಲಿರುವ ಸಮಸ್ಯೆಗಳ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಚರ್ಚಿಸಿದರು.
ಈ ಹಿಂದೆ ಇದೇ ಶಾಲೆಯಲ್ಲಿ ತಾಲ್ಲೂಕು ಕಾನೂನು ಸೇವಾ ಸಮಿತಿ ವತಿಯಿಂದ ಹಮ್ಮಿಕೊಂಡಿದ್ದ ಕಾನೂನು ಅರಿವು ನೆರವು ಕಾರ್ಯಕ್ರಮಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಸ್ವತಃ ತಾವೇ ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಮಾತನಾಡಿ, ಶಿಥಿಲಗೊಂಡಿರುವ ಶಾಲಾ ಕಟ್ಟಡ ತೆರವುಗೊಳಿಸಿ ನೂತನ ಕಟ್ಟಡ ನಿರ್ಮಾಣ ಮಾಡಲು ಸೂಚಿಸಲಾಗಿತ್ತು. ಆದರೆ ವರ್ಷವಾದರೂ ಈ ಬಗ್ಗೆ ಯಾವುದೇ ಕ್ರಮ ಜರುಗಿಸಿದ ನಿಮ್ಮಗಳ ವಿರುದ್ದ ಖುದ್ದು ಲೋಕಾಯುಕ್ತರಿಗೆ ತಾವೇ ಬರೆಯುವುದಾಗಿ ಎಚ್ಚರಿಸಿದರು.
ಕಳೆದ ಒಂದು ವರ್ಷದಿಂದ ಸುಮಾರು ಭಾರಿ ಮೇಲಾಧಿಕಾರಿಗಳು ಸೇರಿದಂತೆ ಸಂಬಂಧಪಟ್ಟ ಇಲಾಖೆಗೆ ಪತ್ರ ಬರೆಯಲಾಗಿದೆ ಎಂಬ ಮುಖ್ಯೋಪಾಧ್ಯಾಯರ ಮಾತಿಗೆ ಉತ್ತರಿಸಿದ ಅವರು, ಮೇಷ್ಟೇ ಈ ಹಿಂದೆ ನೀವು ಅವರಿಗೆಲ್ಲಾ ಸುಮಾರು ಪತ್ರಗಳನ್ನು ಬರೆದಿರಬಹುದು, ಇದೀಗ ತಾಲ್ಲೂಕು ಕಾನೂನು ಸೇವಾ ಸಮಿತಿಗೆ ಒಂದು ಪತ್ರ ಕೊಡಿ, ಮುಂದಿನ ಒಂದು ವಾರದೊಳಗೆ ಶಿಥಿಲಗೊಂಡಿರುವ ಕಟ್ಟಡ ತೆರವುಗೊಳಿಸಿ ನೂತನ ಕಟ್ಟಡ ನಿರ್ಮಾಣ ಮಾಡಿಸಲು ಕ್ರಮ ಜರುಗಿಸಲಾಗುವುದು ಎಂದರು.
ಶಾಲಾ ಕೊಠಡಿ ತೆರವುಗೊಳಿಸುವ ಜೊತೆಗೆ ಶಾಲೆಗೆ ಕೂಡಲೇ ಗ್ರಾಮ ಪಂಚಾಯಿತಿ ವತಿಯಿಂದ ಕಾಂಪೌಂಡ್ ನಿರ್ಮಾಣ ಮಾಡಲು ತಾಲ್ಲೂಕು ಪಂಚಾಯಿತಿ ಸಹಾಯಕ ನಿರ್ದೇಶಕ ಚಂದ್ರಪ್ಪ ಅವರಿಗೆ ಸೂಚಿಸಿದರು.
ತಾಲ್ಲೂಕು ಪಂಚಾಯಿತಿ ನರೇಗಾ ಸಹಾಯಕ ನಿರ್ದೇಶಕ ಚಂದ್ರಪ್ಪ ಮಾತನಾಡಿ, ಶಾಲಾ ಆವರಣಕ್ಕೆ ದನ, ಕರು ಕಟ್ಟುವವರ ವಿರುದ್ದ ಕಠಿಣ ಕ್ರಮ ಜರುಗಿಸಲು ಅಗತ್ಯ ಬಿದ್ದಲ್ಲಿ ಪೊಲೀಸ್ ಸಹಕಾರ ಪಡೆಯುವಂತೆ ಪಿಡಿಓ ಸುಧಾಮಣಿಗೆ ಸೂಚಿಸಿದರು.
ಈ ಸಂದರ್ಭದಲ್ಲಿ ಅಪರ ಸಿವಿಲ್ ನ್ಯಾಯಾಧೀಶರಾದ ಚಂದ್ರಶೇಖರ ಅಲ್ಬೂರ್, ತಾಲ್ಲೂಕು ಪಂಚಾಯಿತಿ ನರೇಗಾ ಸಹಾಯಕ ನಿರ್ದೇಶಕ ಚಂದ್ರಪ್ಪ, ಶಿಕ್ಷಣ ಸಂಯೋಜಕ ಭಾಸ್ಕರಗೌಡ, ಪಿಡಿಓ ಸುಧಾಮಣಿ, ಕಾರ್ಯದರ್ಶಿ ಗೋಪಾಲ್, ಬಿ.ಆರ್.ಪಿ ಲಕ್ಷ್ಮಿನಾರಾಯಣ, ಮುಖ್ಯಶಿಕ್ಷಕ ಮನ್ನಾರ್‌ಸ್ವಾಮಿ, ನ್ಯಾಯಾಲಯದ ಸಿಬ್ಬಂದಿ ಗೀತಾ ಹಾಜರಿದ್ದರು.