ವಾಯುಭಾರ ಕುಸಿತದಿಂದ ಎಡೆಬಿಡದೆ ಸುರಿಯುತ್ತಿರುವ ಮಳೆಯಿಂದ ಟೊಮೇಟೊ ಬೆಳೆ ನೆಲಕಚ್ಚಿದೆ. ಕೆಲವೆಡೆ ಟೊಮೇಟೊ ಬೆಳೆ ಜಿಟಿ ಜಿಟಿ ಮಳೆಗೆ ನಾಶವಾಗಿವೆ. ಹೀಗಾಗಿ ಮಾರುಕಟ್ಟೆಗೆ ಹೆಚ್ಚಿನ ಪ್ರಮಾಣದಲ್ಲಿ ಟೊಮೇಟೊ ಸರಬರಾಜು ಆಗದಿರುವುದು ಬೇಡಿಕೆ ಸೃಷ್ಟಿಗೆ ಕಾರಣವಾಗಿದೆ. ಅಲ್ಲದೆ ಮದುವೆ ಹಾಗೂ ಶುಭ ಸಮಾರಂಭಗಳು ಹೆಚ್ಚಿನ ಸಂಖ್ಯೆಯಲ್ಲಿ ನಡೆಯುತ್ತಿರುವುದು ಬೇಡಿಕೆ ಹೆಚ್ಚಾಗಲು ಮತ್ತೊಂದು ಕಾರಣವಾಗಿದೆ.
ಸೃಷ್ಟಿಯಾದ ಈ ಬೇಡಿಕೆಯಿಂದಾಗಿ ಗುಜರಾತ್, ಒರಿಸ್ಸಾ, ನಾಸಿಕ್ ಮುಂತಾದೆಡೆಗಳಿಂದ ವ್ಯಾಪಾರಿಗಳು ಟೊಮೇಟೊ ತರಿಸಿದ್ದಾರೆ. ಸ್ವಲ್ಪ ಕಡಿಮೆ ಗುಣಮಟ್ಟವಿರುವ ಈ ಟೊಮೇಟೊ ನಗರದಲ್ಲಿ ಸೋಮವಾರ ಒಂದು ಕೇಜಿಗೆ 40 ರೂ, ಮೂರು ಕೇಜಿಗೆ 100 ರೂಗಳಂತೆ ಮಾರಾಟ ಮಾಡುತ್ತಿದ್ದರು. ಬೆಲ್ಲಕ್ಕೆ ಮುತ್ತಿದ್ದ ನೊಣಗಳಂತೆ ಜನರು ಟೊಮೇಟೊ ಗಾಡಿಗೆ ಮುತ್ತಿಗೆ ಹಾಕಿ ನಾಮುಂದು ತಾಮುಂದು ಎಂದು ಕೊಳ್ಳಲು ಮುಂದಾಗಿದ್ದರು.
“ನಾಟಿ ಟೊಮೇಟೊ ಹಣ್ಣಿನ 12 ಕೇಜಿಯ ಒಂದು ಬಾಕ್ಸ್ 1000 ದಿಂದ 1200 ರೂಗಳಷ್ಟಿದೆ. ಅಷ್ಟು ಬೆಲೆ ಸಿಕ್ಕರೂ ರೈತರಿಗೆ ಬೆಳೆ ತೆಗೆಯುವುದು ಸಾಕಷ್ಟು ಕಷ್ಟಕರವಾಗಿಯೇ ಇದೆ. ಈ ಜಡಿ ಮಳೆಗೆ, ಮೋಡದ ವಾತಾವರಣಕ್ಕೆ ಬರುವ ಅಂಗಮಾರಿ ಚುಕ್ಕೆ ರೋಗಕ್ಕೆ ಪ್ರತಿದಿನ ಔಷಧಿ ಸಿಂಪಡಿಸಬೇಕು. ಟೊಮೇಟೊ ತೋಟದ ನಿರ್ವಹಣೆ ಬಹಳ ಕಷ್ಟಕರ” ಎನ್ನುತ್ತಾರೆ ಪಿಡಿಪಾಪನಹಳ್ಳಿಯ ರೈತ ಕಿಶೋರ್.
ಉತ್ತಮ ಗುಣಮಟ್ಟದ ಟೊಮೇಟೊ 100 ರೂ ಗಳಷ್ಟು ಏರಿ ನಿಂತಿತ್ತು. ಸಣ್ಣ ಟೊಮೇಟೊ 70 ರಿಂದ 80 ರೂ.ಗಳಿಗೆ ತಲಾ ಒಂದು ಕೆಜಿಗೆ ಬಿಕರಿಯಾಗಿದೆ. ದಿನೇ ದಿನೇ ಟೊಮೇಟೊ ದರದಲ್ಲಿ ಏರಿಕೆ ಕಾಣುವ ಮೂಲಕ ಬೆಳೆಗಾರರಲ್ಲಿ ಹರ್ಷ ಮೂಡಿಸಿದರೆ ಗ್ರಾಹಕರ ಒಡಲನ್ನು ಹಿಂಡಿ ಹಿಪ್ಪೆ ಮಾಡುತ್ತಿದೆ. ಬೆಲೆ ಇಳಿಕೆಯಿಂದ ಆಗಾಗ್ಗೆ ರೈತರನ್ನು ಕಾಡುವ ಟೊಮೇಟೊ ಇದೀಗ ಬೆಲೆಯಲ್ಲಿ ಭಾರೀ ಏರಿಕೆ ಕಂಡು ಗ್ರಾಹಕರನ್ನು ಕಂಗಾಲಾಗಿಸಿದೆ. ಈ ಸಂದರ್ಭದಲ್ಲಿ ಹೊರ ರಾಜ್ಯಗಳಿಂದ ವ್ಯಾಪಾರಿಗಳು ತರಿಸಿರುವ ಟೊಮೇಟೊ ಕಂಡು ಗ್ರಾಹಕರು ಮುಗಿಬಿದ್ದು ಕೊಳ್ಳುತ್ತಿದ್ದಾರೆ.
ಕಳೆದ ವರ್ಷ ಕೋವಿಡ್-19 ಹೊಡೆತದಿಂದ ಮಕಾಡೆ ಮಲಗಿದ್ದ ಪೇಟೆ ಬೀದಿ ವ್ಯಾಪಾರ ಕೆಲವು ತಿಂಗಳಿನಿಂದ ಕುದುರಿದೆ. ಕೋವಿಡ್ ಎರಡನೇ ಅಲೆ ಕಡಿಮೆಯಾದ ನಂತರ ಅಗತ್ಯ ವಸ್ತುಗಳ ಬೆಲೆಯಲ್ಲಿ ಗಣನೀಯ ಏರಿಕೆ ಕಂಡಿದೆ. ಈ ಸನ್ನಿವೇಶದಲ್ಲಿ ಜನ ಸಾಮಾನ್ಯರ ಆರ್ಥಿಕ ಸ್ಥಿತಿ ಡೋಲಾಯಮಾನ ಆಗಿದ್ದರೂ ಸಹ ಹಬ್ಬಗಳು ಹಾಗೂ ಶುಭ ಸಮಾರಂಭಗಳು ಅದ್ಧೂರಿಯಾಗಿಯೇ ನಡೆಯುತ್ತಿವೆ. ಇದರಿಂದ ಪೇಟೆ ಬೀದಿಯ ವ್ಯಾಪಾರ ವಹಿವಾಟು ಕೂಡಾ ಸುಧಾರಣೆ ಕಂಡಿದೆ.