Sidlaghatta : ಶಿಡ್ಲಘಟ್ಟ ನಗರಸಭೆ (City Municipal Council) ವತಿಯಿಂದ ಗುರುವಾರ “ಹರ್ ಘರ್ ತಿರಂಗ” (Har Ghar Tiranga) ಅಭಿಯಾನದ ಅಂಗವಾಗಿ ಕಾಲ್ನಡಿಗೆ ಜಾಥ ಕಾರ್ಯಕ್ರಮದಲ್ಲಿ ಭಾಗವಹಿಸಿ ನಗರಸಭೆ ಅಧ್ಯಕ್ಷೆ ಸುಮಿತ್ರಾ ರಮೇಶ್ ಅವರು ಮಾತನಾಡಿದರು.
ನಗರಸಭೆಯ ವತಿಯಿಂದ 12 ಸಾವಿರದಷ್ಟು ರಾಷ್ಟ್ರಧ್ವಜಗಳನ್ನು ಖರೀದಿಸಿದ್ದು, ಪ್ರತಿಯೊಂದು ಮನೆಗೂ ಉಚಿತವಾಗಿ ಹಂಚುತ್ತಿದ್ದೇವೆ. 5ನೇ ವರ್ಷದ ಸ್ವಾತಂತ್ರ್ಯ ಅಮೃತ ಮಹೋತ್ಸವದ ಪ್ರಯುಕ್ತ ಎಲ್ಲಾ ಸಾರ್ವಜನಿಕರು ಸ್ವಾತಂತ್ರ್ಯ ದಿನಾಚರಣೆಯನ್ನು ವಿಜೃಂಭಣೆಯಿಂದ ಹಬ್ಬದ ರೀತಿ ಆಚರಿಸಿ ದೇಶ ಭಕ್ತಿಯನ್ನು ವ್ಯಕ್ತಪಡಿಸಬೇಕು. ಸ್ವಾತಂತ್ರ್ಯದ ಅಮೃತ ಮಹೋತ್ಸವದ ಹಿನ್ನೆಲೆಯಲ್ಲಿ ಹಮ್ಮಿಕೊಳ್ಳಲಾಗಿರುವ ಮನೆ ಮನೆಯಲ್ಲಿ ರಾಷ್ಟ್ರ ಧ್ವಜ ಹಾರಿಸುವ “ಹರ್ ಘರ್ ತಿರಂಗ” ಅಭಿಯಾನವನ್ನು ಯಶಸ್ವಿಗೊಳಿಸುವಂತೆ ಅವರು ತಿಳಿಸಿದರು.
ನಗರಸಭೆ ಪೌರಾಯುಕ್ತ ಶ್ರೀಕಾಂತ್ ಮಾತನಾಡಿ, “ಹರ್ ಘರ್ ತಿರಂಗಾ” ಅಭಿಯಾನದ ಅಂಗವಾಗಿ ಪ್ರತಿ ಮನೆ ಮನೆಗಳ ಮೇಲೆಯೂ ತ್ರಿವರ್ಣ ಧ್ವಜ ಹಾರಿಸಿ ಗೌರವ ಸೂಚಿಸಬೇಕು. ಜಾತಿ, ಧರ್ಮ ಭೇದ ಮಾಡದೇ ಐಕ್ಯತೆಯಿಂದ ಎಲ್ಲರೂ ತಮ್ಮ ಮನೆಗಳ ಮೇಲೆ ರಾಷ್ಟ್ರಧ್ವಜವನ್ನು ಆಗಸ್ಟ್ 13 ರಿಂದ 15ರವರೆಗೆ ಹಾರಿಸಬೇಕು ಎಂದರು.
ಈ ಸಂಬಂಧ ಎಲ್ಲಾ ನಗರಸಭಾ ಸದಸ್ಯರು ಮತ್ತು ನಾಮ ನಿರ್ದೇಶಿತ ಸದಸ್ಯರು ಕಾರ್ಯಕ್ರಮದಲ್ಲಿ ಅಧಿಕಾರಿಗಳೊಂದಿಗೆ ಕೈಜೋಡಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕು. ದೇಶದ ಸ್ವಾತಂತ್ರ್ಯಕ್ಕಾಗಿ ಹಲವಾರು ಮಹಾನ್ ವ್ಯಕ್ತಿಗಳ ಬಲಿದಾನಗಳಿಂದ ಪಡೆದಂತಹ ದೇಶದ ಸ್ವಾತಂತ್ರ್ಯದ ಮಹತ್ವವನ್ನು ಅರಿತು ನಗರದ ಎಲ್ಲಾ ಸಾರ್ವಜನಿಕರು ವಿಜೃಂಬಣೆಯಿಂದ ಆಚರಿಸಿ ದೇಶ ಭಕ್ತಿಯನ್ನು ವ್ಯಕ್ತಪಡಿಸುವಂತೆ ಕೋರಿದರು.
ಈ ಸಂದರ್ಭದಲ್ಲಿ ನಗರಸಭಾ ಸದಸ್ಯರು, ಸಿಬ್ಬಂದಿ ಹಾಜರಿದ್ದರು.