Sidlaghatta : ಗ್ರಾಮ ಪಂಚಾಯಿತಿ ಕಾರ್ಯಾಲಯಗಳಿಗೆ ಅಗತ್ಯವಾದ ಮೂಲಭೂತ ಸವಲತ್ತುಗಳು ಕಲ್ಪಿಸುವುದು ಸೇರಿದಂತೆ ಗ್ರಾ.ಪಂ ಅಧಿಕಾರಿಗಳು ಹಾಗು ಸಿಬ್ಬಂದಿ ಕರ್ತವ್ಯ ನಿರ್ವಹಿಸಲು ಮುಕ್ತ ವಾತಾವರಣ ಕಲ್ಪಿಸಬೇಕು ಎಂದು ಪಂಚಾಯಿತಿ ಅಭಿವೃದ್ದಿ ಅಧಿಕಾರಿಗಳ ಕ್ಷೇಮಾಭಿವೃದ್ದಿ ಸಂಘದ ಅಧ್ಯಕ್ಷ ಕೆ.ಎಸ್.ಮಧು ಒತ್ತಾಯಿಸಿದರು.
ಗ್ರಾಮೀಣಾಭಿವೃದ್ದಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಅಧಿಕಾರಿಗಳು ಮತ್ತು ನೌಕರರ ಎಲ್ಲಾ ವೃಂದ ಸಂಘಗಳ ನೇತೃತ್ವದಲ್ಲಿ ಬೆಂಗಳೂರಿನ ಫ್ರೀಡಂ ಪಾರ್ಕಲ್ಲಿ ನಡೆಯುತ್ತಿರುವ ಅನಿರ್ಧಿಷ್ಠಾವಧಿ ಮುಷ್ಕರದಲ್ಲಿ ಭಾಗವಹಿಸಲು ಶುಕ್ರವಾರ ಹೊರಟ ವಿವಿಧ ನೌಕರರ ಸಂಘಗಳ ನೇತೃತ್ವ ವಹಿಸಿ ಅವರು ಮಾತನಾಡಿದರು.
ಕರ್ನಾಟಕ ಗ್ರಾಮಸ್ವರಾಜ್ ಮತ್ತು ಪಂಚಾಯತ್‌ರಾಜ್ ಕಾಯಿದೆಯಲ್ಲಿರುವ ಜವಾಬ್ದಾರಿ ನಕ್ಷೆಯಂತೆ ಗ್ರಾ.ಪಂ ಗಳಿಗೆ ಅಧಿಕಾರ ನೀಡುವುದು. ಅಭಿವೃದ್ದಿ ಸಭೆಗಳ ಬಲವರ್ಧನೆ ಮಾಡುವುದು, ಸ್ಥಾಯಿ ಸಮಿತಿಗಳಿಗೆ ಹೆಚ್ಚಿನ ಅಧಿಕಾರ ನೀಡುವುದು, ಪಿಡಿಓ ಹುದ್ದೆಗಳನ್ನು ಬಿ ದರ್ಜೆಗೇರಿಸುವುದು ಸೇರಿದಂತೆ ವಿವಿಧ ವೃಂದಗಳ ನೌಕರರಿಗೆ ಸಕಾಲಕ್ಕೆ ಬಡ್ತಿ ನೀಡಬೇಕು ಎಂಬಿತ್ಯಾದಿ ಬೇಡಿಕೆಗಳನ್ನು ಕಳೆದ ಹಲವು ವರ್ಷಗಳಿಂದ ಸರ್ಕಾರಕ್ಕೆ ಒತ್ತಾಯಿಸಲಾಗುತ್ತಿದೆಯಾದರೂ ಯಾವುದೇ ಸರ್ಕಾರಗಳು ಈ ಬಗ್ಗೆ ಗಮನಹರಿಸಿಲ್ಲ. ಹಾಗಾಗಿ ನಮ್ಮ ಬೇಡಿಕೆಗಳು ಈಡೇರುವವರೆಗೂ ರಾಜ್ಯಾಧ್ಯಂತ ಇರುವ ಎಲ್ಲಾ ನೌಕರರು ಇಂದಿನಿಂದ ಅನಿರ್ಧಿಷ್ಟಾವಧಿ ಮುಷ್ಕರ ನಡೆಸುತ್ತಿದ್ದೇವೆ ಎಂದರು.
ಈ ಸಂದರ್ಭದಲ್ಲಿ ಪಿಡಿಓಗಳಾದ ಶ್ರೀನಿವಾಸ್, ವಜ್ರೇಶ್, ಅರುಣಕುಮಾರಿ, ಗ್ರಾ.ಪಂ ನೌಕರರ ಸಂಘದ ಸುದರ್ಶನ್, ಪ್ರಸನ್ನ ಹಾಜರಿದ್ದರು.