
Sidlaghatta : “ಸ್ವಂತ ಉದ್ಯಮ ಆರಂಭಿಸುವುದು ಬಹಳವರ ಕನಸು. ಆದರೆ ಅದನ್ನು ಸಫಲವಾಗಿ ನಡಿಸಲು ಕಠಿಣ ಪರಿಶ್ರಮ, ತ್ಯಾಗ ಮತ್ತು ದೃಢಸಂಕಲ್ಪ ಅವಶ್ಯಕ. ಉದ್ಯಮ ಆರಂಭಿಸಿದ ತಕ್ಷಣ ಯಶಸ್ಸು ಸಿಗುತ್ತೆ ಅಂತ ತಕ್ಷಣ ನಿರೀಕ್ಷೆ ಬೇಡ. ಸಿದ್ಧತೆ ಮತ್ತು ತಾಳ್ಮೆ ಮುಖ್ಯ,” ಎಂದು ಜಿ.ಎಫ್.ಜಿ.ಸಿ ಕೋಲಾರದ ವಾಣಿಜ್ಯ ವಿಭಾಗದ ಮುಖ್ಯಸ್ಥ ಪ್ರೊ. ಎಸ್. ಮುರಳೀಧರ್ ಹೇಳಿದರು.
ಶಿಡ್ಲಘಟ್ಟದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಸೋಮವಾರ ನಡೆದ “ಕಾಮರ್ಸ್ ನೆಕ್ಸಸ್ 2025 ಮತ್ತು ಅಂತರಕಾಲೇಜು ಕಾಮರ್ಸ್ ಫೆಸ್ಟ್” ಕಾರ್ಯಕ್ರಮದಲ್ಲಿ ಅವರು ವಿದ್ಯಾರ್ಥಿಗಳೊಂದಿಗೆ ಮಾತನಾಡಿದರು.
“ಯಶಸ್ವಿ ಉದ್ಯಮಿಯೊಬ್ಬನು ನಿರಂತರ ಕಲಿಕೆ, ಹೊಸತನ್ನು ಹತ್ತಿರದಿಂದ ಅರ್ಥಮಾಡಿಕೊಳ್ಳುವ ಮನೋಭಾವ ಮತ್ತು ನಿರೀಕ್ಷೆಗಳಿಗೆ ತಕ್ಕಂತೆ ಬದಲಾಗುವ ಸಾಮರ್ಥ್ಯ ಬೆಳೆಸಿಕೊಳ್ಳಬೇಕು,” ಎಂದು ಅವರು ಸಲಹೆ ನೀಡಿದರು.
ಉದ್ಯಮ ಪ್ರಾರಂಭಿಸಲು ಅಗತ್ಯವಿರುವ ಕೆಲವು ಪ್ರಮುಖ ಅಂಶಗಳನ್ನೂ ಅವರು ವಿವರಿಸಿದರು:
- ಮಾರುಕಟ್ಟೆ ಸಂಶೋಧನೆ
- ವ್ಯವಹಾರ ಯೋಜನೆ
- ಹಣಕಾಸಿನ ವಿಶ್ಲೇಷಣೆ
- ಕಾನೂನು-ನಿಯಮಗಳ ಅಧ್ಯಯನ
- ಮಾರ್ಕೆಟಿಂಗ್ ತಂತ್ರಗಳು
- ಸವಾಲುಗಳ ಮೌಲ್ಯಮಾಪನ
ಈ ಎಲ್ಲ ಅಂಶಗಳ ಮೇಲೆ ಸದೃಢ ಅಡಿಪಾಯ ಹಾಕಿಕೊಂಡರೆ ಮಾತ್ರ ವ್ಯವಹಾರದಲ್ಲಿ ಸಫಲತೆ ಸಾಧ್ಯವಿದೆ ಎಂದರು.
ಕಾರ್ಯಕ್ರಮದಲ್ಲಿ ವಿವಿಧ ಕಾಲೇಜುಗಳಿಂದ ಬಂದಿದ್ದ ವಿದ್ಯಾರ್ಥಿಗಳಿಗಾಗಿ ಅಂತರಕಾಲೇಜು ಕ್ವಿಜ್, ಹೊಸ ಉದ್ಯಮದ ಪರಿಕಲ್ಪನೆ, ಜಾಹೀರಾತು ಕಲ್ಪನೆ ಮುಂತಾದ ಸ್ಪರ್ಧೆಗಳನ್ನು ಹಮ್ಮಿಕೊಳ್ಳಲಾಗಿತ್ತು. ವಿಜೇತರಿಗೆ ಬಹುಮಾನಗಳನ್ನು ಪ್ರದಾನ ಮಾಡಲಾಯಿತು.
ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಜಿ. ಮುರಳೀ ಆನಂದ್, ಪ್ರೊ. ಎ.ಸಾಯಿರಾಮ್, ಬಿ. ರವಿಕುಮಾರ್, ಎಂ. ಸುನೀತಾ, ವಿ.ಆರ್. ಶಿವಶಂಕರಿ, ಜಿ.ಬಿ. ವೆಂಕಟೇಶ್, ಶೋಭಾ, ಗೀತಾ ಹಾಗೂ ವಿವಿಧ ಕಾಲೇಜುಗಳ ಪ್ರಾಂಶುಪಾಲರು ಉಪಸ್ಥಿತರಿದ್ದರು.