Sidlaghatta : ಶಿಡ್ಲಘಟ್ಟದ ಸಾರ್ವಜನಿಕ ಆಸ್ಪತ್ರೆಗೆ (Government Hospital) ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷರೂ ಆದ ಹೈಕೋರ್ಟ್‌ನ (High Court) ಹಿರಿಯ ನ್ಯಾಯಾಧೀಶ (Judge) ಬಿ.ವೀರಪ್ಪ (B. Veerappa) ನೇತೃತ್ವದ ತಂಡವು ಭೇಟಿ ನೀಡಿ ಸರ್ವಜನಿಕರಿಗೆ ಸಿಗುತ್ತಿರುವ ವೈದ್ಯಕೀಯ ಸವಲತ್ತುಗಳ ಬಗ್ಗೆ ಪರಿಶೀಲನೆ ನಡೆಸಿದರು. ಆಸ್ಪತ್ರೆಯಲ್ಲಿನ ಅವ್ಯವಸ್ಥೆಗಳನ್ನು ಕಂಡು ಅಸಮಾಧಾನ ವ್ಯಕ್ತಪಡಿಸಿದರು.
ನ್ಯಾಯಾಧೀಶರ ಭೇಟಿ ವೇಳೆ ಶೌಚಾಲಯದಲ್ಲಿ ಸ್ವಚ್ಚತೆ ಇಲ್ಲದೆ ಇದ್ದದ್ದು, ಹಾಸಿಗೆಗಳ ಮೇಲೆ ಹೊದಿಕೆ ಬಟ್ಟೆ ಇಲ್ಲದಿರುವುದು ಕಂಡು ಬೇಸರ ವ್ಯಕ್ತಪಡಿಸಿದರು.
ಅವಧಿ ಮೀರಿದ ಮಾತ್ರೆಗಳನ್ನು ಕಂಡು ನ್ಯಾಯಾಧೀಶರೆ ಹೌಹಾರಿದರು. ಈ ತಿಂಗಳಿಗೆ ಕೊನೆಯಾಗುವ ಮಾತ್ರೆಗಳನ್ನು ಸಹ ವಿತರಣೆ ಮಾಡುತ್ತಿದ್ದನ್ನು ಕಂಡ ಬಿ.ವೀರಪ್ಪ ಅವರು ಇದೇನಿದು ರೋಗಿಗಳನ್ನು ವಾಸಿ ಮಾಡಲು ನೀವು ಮಾತ್ರೆಗಳನ್ನು ನೀಡುತ್ತಿದ್ದೀರೋ ಇಲ್ಲವೇ ಸಾಯಿಸಲು ಕೊಡುತ್ತಿದ್ದೀರೊ ಎಂದು ಕಿಡಿ ಕಾರಿದರು.
ಮಾತ್ರೆಗಳನ್ನು ಡಬ್ಬವೊಂದರಲ್ಲಿ ಗುಡ್ಡೆಹಾಕಿ ಅದು ಸೇವನೆ ಅವಧಿ ಮುಕ್ತಾಯದ ಹಂತದಲ್ಲಿದ್ದ ಕಾರಣ ಕೈಗೆ ಜಿಡ್ಡು ಜಿಡ್ಡು ಅಂಟು ಅಂಟಿಕೊಂಡಿದ್ದನ್ನು ಕಂಡು ವೈದ್ಯರು ಹಾಗೂ ಸಿಬ್ಬಂದಿಯನ್ನು ತರಾಟೆಗೆ ತೆಗೆದುಕೊಂಡರು. ನಿಮ್ಮ ಮಕ್ಕಳಿಗೆ ಇದೇ ಅವಧಿ ಮೀರಿದ ಮಾತ್ರೆ ಔಷಧಿಗಳನ್ನು ಕೊಡುತ್ತೀರಾ ಎಂದು ಪ್ರಶ್ನಿಸಿದರು. ಜನೌಷಧಿ ಕೇಂದ್ರ ಬಾಗಿಲು ಮುಚ್ಚಿರುವುದನ್ನು ಕಂಡು ಅವರು ಕಿಡಿಕಾರಿದರು.
ನಂತರ ವೈದ್ಯರು ಹಾಗು ಸಿಬ್ಬಂದಿಯ ಹಾಜರಾತಿ ವಹಿಯನ್ನು ಪರಿಶೀಲಿಸಿದಾಗ ಚಿಕ್ಕಬಳ್ಳಾಪುರ ಜಿಲ್ಲಾ ಕೇಂದ್ರದಲ್ಲಿ ನಡೆಯುತ್ತಿರುವ ಆರೋಗ್ಯ ಮೇಳದಲ್ಲಿ ಭಾಗವಹಿಸಿರುವುದಾಗಿ ಹೇಳಿ ಮೂವರು ವೈದ್ಯರು ಗೈರು ಹಾಜರಾಗಿದ್ದಕ್ಕೆ ಬೇಸರ ವ್ಯಕ್ತಪಡಿಸಿದರು. 18 ಮಂದಿ ವೈದ್ಯರು ಇರುವ ಆಸ್ಪತ್ರೆಯಲ್ಲಿ ಕೇವಲ ಇಬ್ಬರು ಮಾತ್ರ ಇದ್ದಾರೆ ಎಂದರೆ ಏನು ಅರ್ಥ ಎಂದರು.
ಸಾಕಷ್ಟು ವೈಧ್ಯರ ಕೊಠಡಿಗಳಿಗೆ ಬೀಗ ಜಡಿದಿರುವುದನ್ನು ಕಂಡ ನ್ಯಾಯಾಧೀಶರು ಸರ್ಕಾರ ಇಷ್ಟಲ್ಲಾ ಹಣ ಖರ್ಚು ಮಾಡುತ್ತಿದ್ದರೂ ವೈದ್ಯರೆ ಬರೊಲ್ಲ ಅಂದ್ರೆ ಹೇಗೆ, ಜನ ಸಾಮಾನ್ಯರಿಗೆ ಇನ್ನೆಷ್ಟು ಮಾತ್ರ ಸವಲತ್ತು ಇಲ್ಲಿ ಸಿಗಲಿದೆ ಎಂದರು.
ರಾಜ್ಯ ಕಾನೂನು ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಶಶಿಧರ್ ಶೆಟ್ಟಿ, ಜಿಲ್ಲಾ ಸದಸ್ಯ ಕಾರ್ಯದರ್ಶಿ ಲಕ್ಷ್ಮೀಕಾಂತ್ ಮಿಸ್ಕಿಲ್ ಹಾಗೂ ಸ್ಥಳೀಯ ನ್ಯಾಯಾಲಯದ ನ್ಯಾಯಾಧೀಶರು ಹಾಜರಿದ್ದರು.