Sidlaghatta : ವೈದ್ಯರ ನಿರ್ಲಕ್ಷದಿಂದ ಬಾಣಂತಿ ಮೃತಪಟ್ಟಿದ್ದಾರೆ ಎಂದು ಕುಟುಂಬದವರು ಹಾಗೂ ಗ್ರಾಮಸ್ಥರು ನಗರದ ಸಾರ್ವಜನಿಕ ಆಸ್ಪತ್ರೆಯ ವೈದ್ಯರು ಹಾಗೂ ಸಿಬ್ಬಂದಿ ವಿರುದ್ಧ ಮಂಗಳವಾರ ಪ್ರತಿಭಟನೆ ನಡೆಸಿದರು.
ತಾಲ್ಲೂಕಿನ ಅಬ್ಲೂಡು ಗ್ರಾಮದ ಮಧು ಅವರ ಪತ್ನಿ ಮೋನಿಕ ಮೃತಪಟ್ಟ ದುರ್ದೈವಿ. ಮಧು ಹಾಗೂ ಮೋನಿಕಾ ಅವರ ನವಜಾತ ಶಿಶು ಆರೋಗ್ಯವಾಗಿದೆ. ವೈದ್ಯರ ನಿರ್ಲಕ್ಷದಿಂದಾಗಿ ಆಗತಾನೆ ಹುಟ್ಟಿದ ಮಗು ತಾಯಿಯನ್ನು ಕಳೆದುಕೊಂಡ ತಬ್ಬಲಿಯಾಗಿದೆ ಎಂದು ಪ್ರತಿಭಟನಾಕಾರರು ಆರೋಪಿಸಿದರು.
ಮೋನಿಕಾಗೆ ಹೆರಿಗೆ ನೋವು ಕಾಣಿಸಿಕೊಂಡಿದ್ದು, ಶನಿವಾರ ಮಧ್ಯಾಹ್ನ ಶಿಡ್ಲಘಟ್ಟದ ಸಾರ್ವಜನಿಕ ಆಸ್ಪತ್ರೆಗೆ ಬಂದಾಗ ತಪಾಸನೆ ನಡೆಸಿದ ವೈದ್ಯರು ಹಾಗೂ ಸಿಬ್ಬಂದಿ ಸಹಜ ಹೆರಿಗೆ ಆಗುತ್ತದೆ ಯಾವುದೇ ಆತಂಕ ಬೇಡ ಎಂದಿದ್ದಾರೆ. ಹೆರಿಗೆ ಆಗುವುದು ರಾತ್ರಿ ಹಾಗಾಗಿ ನೀವು ಮನೆಗೆ ಹೋಗಿ ರಾತ್ರಿ ಬನ್ನಿ ಎಂದು ವಾಪಸ್ ಕಳುಹಿಸಿದ್ದಾರೆ. ವೈದ್ಯರ ಸೂಚನೆಯಂತೆ ಮನೆಗೆ ವಾಪಸ್ ತೆರಳಿದ ಮೋನಿಕ ಹಾಗೂ ಮಧು ಮರಳಿ ಸಂಜೆ ಆಸ್ಪತ್ರೆಗೆ ಬಂದಿದ್ದಾರೆ. ಆದರೆ ರಾತ್ರಿ ಕರ್ತವ್ಯಕ್ಕೆ ನಿಯೋಜಿತರಾದ ವೈದ್ಯರು ಹಾಜರಾಗಿರಲಿಲ್ಲ ಎನ್ನಲಾಗಿದೆ.
ಆಸ್ಪತ್ರೆಯಲ್ಲಿನ ಸಿಬ್ಬಂದಿಯೇ ಮೋನಿಕಾಳನ್ನು ತಪಾಸಣೆ ನಡೆಸಿದ್ದು ರಾತ್ರಿ ಕರ್ತವ್ಯಕ್ಕೆ ಹಾಜರಿ ಆಗಬೇಕಿದ್ದ ವೈದ್ಯರೊಂದಿಗೆ ಮೊಬೈಲ್ ಮೂಲಕ ಮಾಹಿತಿ ಪಡೆದು ಸಿಬ್ಬಂದಿಯೇ ಹೆರಿಗೆ ಮಾಡಿಸಲು ಮುಂದಾಗಿದ್ದಾರೆ. ಆಗ ಮೋನಿಕಾಳ ಪತಿ ಮಧು ಹಾಗೂ ಕುಟುಂಬದವರು ವೈದ್ಯರು ಇಲ್ಲದೆ ಇರುವುದನ್ನು ಪ್ರಶ್ನಿಸಿದ್ದಾರಲ್ಲದೆ ಬೇರೆ ಕಡೆಗೆ ಹೋಗುವುದಾಗಿ ಹೇಳಿದ್ದಾರೆ. ಆದರೆ ಆಗಲೂ ಅಲ್ಲಿನ ಸಿಬ್ಬಂದಿ ಏನೂ ತೊಂದರೆ ಇಲ್ಲ ಸಹಜ ಹೆರಿಗೆ ಆಗುತ್ತದೆ ಆತಂಕ ಬೇಡ ಎಂದು ರಾತ್ರಿ ಪೂರ ಸಮಯ ಕಳೆದಿದ್ದಾರೆ. ಭಾನುವಾರ ಬೆಳಗ್ಗೆ 9 ಸುಮಾರಿಗೆ ಹೆರಿಗೆ ಆಗಿದೆಯಾದರೂ, ತೀವ್ರ ರಕ್ತಸ್ರಾವ ಉಂಟಾಗಿದೆ. ಆತಂಕಗೊಂಡ ಸಿಬ್ಬಂದಿ ಮೋನಿಕಾಳನ್ನು ಚಿಕ್ಕಬಳ್ಳಾಪುರ ಜಿಲ್ಲಾ ಆಸ್ಪತ್ರೆಗೆ ಕರೆದೊಯ್ಯಲು ಮೋನಿಕಾಳ ಕುಟುಂಬದವರಿಗೆ ಸೂಚಿಸಿದ್ದಾರೆ. ಆದರೆ ಮೋನಿಕಾಳಿಗೆ ಚಿಕ್ಕಬಳ್ಳಾಪುರ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಯಿತಾದರೂ ವಿಧಿ ಕೈ ಕೊಟ್ಟಿತ್ತು. ಮೋನಿಕಾಳು ಮೃತ ಪಟ್ಟಿರುವುದನ್ನು ಜಿಲ್ಲಾ ಆಸ್ಪತ್ರೆ ವೈದ್ಯರು ದೃಢಪಡಿಸಿದ್ದಾರೆ.
ಇದರಿಂದ ರೊಚ್ಚಿಗೆದ್ದ ಮೋನಿಕಾಳ ಕುಟುಂಬದವರು ಗ್ರಾಮಸ್ಥರು ಹಾಗೂ ಸಂಘ ಸಂಸ್ಥೆಗಳ ಮುಖಂಡರು ಶಿಡ್ಲಘಟ್ಟ ಸಾರ್ವಜನಿಕ ಆಸ್ಪತ್ರೆಗೆ ಮುತ್ತಿಗೆ ಹಾಕಿ ವೈದ್ಯರು ಹಾಗು ಸಿಬ್ಬಂದಿ ವಿರುದ್ಧ ಕಿಡಿಕಾರಿದರು.
ಸ್ಥಳಕ್ಕೆ ಬಂದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಅಧಿಕಾರಿ ಮಹೇಶ್ ಕುಮಾರ್ ಅವರು ಈ ಘಟನೆ ಕುರಿತು ತನಿಖೆ ನಡೆಸಲು ರಾಜ್ಯಮಟ್ಟದ ಸಮಿತಿ ಆಗಮಿಸಿ ನೀಡುವ ವರದಿ ಮೇಲೆ ಇಲ್ಲಿನ ವೈದ್ಯರು ಹಾಗೂ ಸಿಬ್ಬಂದಿ ವಿರುದ್ಧ ಕಠಿಣ ಕ್ರಮ ಜರುಗಿಸುವುದಾಗಿ ಪ್ರತಿಭಟನಾಕಾರರಿಗೆ ಬರವಸೆ ನೀಡಿದರು.
ಈ ಕುರಿತು ಶಿಡ್ಲಘಟ್ಟ ನಗರ ಪೊಲೀಸ್ ಠಾಣೆಯಲ್ಲಿ ಶಿಡ್ಲಘಟ್ಟ ಸಾರ್ವಜನಿಕ ಆಸ್ಪತ್ರೆಯ ವೈದ್ಯರು ಹಾಗೂ ಸಿಬ್ಬಂದಿ ವಿರುದ್ಧ ದೂರು ನೀಡಲಾಗಿದೆ.