Sidlaghatta : ಮಕ್ಕಳಿಗೆ ಶಾಲೆಯಲ್ಲಿ ಸಿಗುವ ಪಠ್ಯ ಶಿಕ್ಷಣದ ಜತೆಗೆ ಮನೆಯಲ್ಲಿ ಪಾಲಕರು ಕಲಿಸುವ ಸಂಸ್ಕಾರದ ಶಿಕ್ಷಣ ಅತಿ ಮುಖ್ಯ ಎಂದು ಚಿಕ್ಕಬಳ್ಳಾಪುರ ಶಾಖಾ ಮಠದ ಶ್ರೀ ಮಂಗಳನಾಥ ಸ್ವಾಮೀಜಿ ಹೇಳಿದರು.
ನಗರದ ಹೊರವಲಯದ ಹಂಡಿಗನಾಳದ ಕೆ.ವಿ.ಭವನದಲ್ಲಿ ಗುರುವಾರ ಆಯೋಜಿಸಲಾಗಿದ್ದ ಜ್ಞಾನಾಂಕುರ – 2024 ಕಾರ್ಯಕ್ರಮದಲ್ಲಿ ಮಕ್ಕಳಿಗೆ ಅಕ್ಷರಭ್ಯಾಸ ಮಾಡಿಸಿ ಮಾತನಾಡಿದರು.
ಮಕ್ಕಳು ದೇಶದ ಆಸ್ತಿಯಾಗಿದ್ದು ಅವರ ಭವಿಷ್ಯ ರೂಪಿಸುವ ಆಸೆ ಎಲ್ಲ ಪಾಲಕರಿಗಿರುತ್ತದೆ. ಅದಕ್ಕೆ ಪೂರಕವಾಗಿ ಆಧುನಿಕ ಜಗತ್ತಿನ ಪ್ರವೇಶಕ್ಕೆ ಮಕ್ಕಳನ್ನು ಪ್ರಾಥಮಿಕ ಹಂತದಲ್ಲಿಯೇ ಅಣಿಗೊಳಿಸುವುದು ಶ್ರೀಮಠದ ಉದ್ದೇಶವಾಗಿದೆ. ಹುಟ್ಟಿದ ಮಕ್ಕಳಿಗೆ ಅಕ್ಷರಾಭ್ಯಾಸ ಮಾಡಿಸುವ ಮೂಲಕ ಸಮಾಜದ ಉತ್ತಮ ಪ್ರಜೆಗಳನ್ನಾಗಿ ಮಾಡಬೇಕಿದೆ ಎಂದರು. ಮಕ್ಕಳು ಶಾಲೆಯಲ್ಲಿ ಗುರುಗಳು ಹೇಳಿದ್ದನ್ನು ಕೇಳುವುದಕ್ಕಿಂತ ಹೆಚ್ಚಾಗಿ ಪೋಷಕರನ್ನು ಅನುಕರಣೆ ಮಾಡಿ ಕಲಿಯುವುದು ಹೆಚ್ಚು ಹಾಗಾಗಿ ಪ್ರತಿಯೊಬ್ಬ ಪೋಷಕರು ಮಕ್ಕಳ ಮುಂದೆ ಸಂಸ್ಕಾರಯುತವಾಗಿ ನಡೆದುಕೊಳ್ಳಬೇಕು ಎಂದರು.
ಬಿಜಿಎಸ್ ವಿದ್ಯಾಸಂಸ್ಥೆಗಳ ಆಡಳಿತಾಧಿಕಾರಿ ಡಾ.ಎನ್.ಶಿವರಾಮರೆಡ್ಡಿ ಮಾತನಾಡಿ, ಯಾವುದೇ ಕಾರಣಕ್ಕೂ. ಮನೆಯಲ್ಲಿರುವ ಮಕ್ಕಳಲ್ಲಿ ಗಂಡು ಹೆಣ್ಣು ಎಂಬ ತಾರತಮ್ಯ ಮಾಡದೇ ಎಲ್ಲಾ ಸಮಯದಲ್ಲಿ ಎಲ್ಲಾ ಕೆಲಸಗಳನ್ನು ಎಲ್ಲಾ ಮಕ್ಕಳ ಕೈಯ್ಯಲ್ಲಿ ಮಾಡಿಸಬೇಕು. ಮಕ್ಕಳನ್ನು ಅವರ ಸಮಸ್ಯೆಗಳಿಗೆ ಅವರೇ ಪರಿಹಾರ ಕಂಡುಕೊಳ್ಳುವ ರೀತಿ ಬೆಳೆಸಬೇಕು. ವಿದ್ಯಾವಂತ ಕೆಡಬಹುದು ಆದರೆ ಸಂಸ್ಕಾರವಂತ ಕೆಡುವುದಿಲ್ಲ. ಹಾಗಾಗಿ ಮಕ್ಕಳಿಗೆ ಮನೆಯಿಂದಲೇ ಸಂಸ್ಕಾರ ಕಲಿಸುವ ಕೆಲಸ ಪೋಷಕರಿಂದ ಆಗಬೇಕಿದೆ. ಒಂದು ಮಗು ಪದವಿ ಪಡೆಯಬೇಕಾದರೆ ಸುಮಾರು 19 ವರ್ಷ ಶಾಲಾ, ಕಾಲೇಜುಗಳಲ್ಲಿ ಕಲಿಯಬೇಕಿದೆ. ಹಾಗಾಗಿ ಪೋಷಕರು ತಿಂಗಳಿಗೊಮ್ಮೆಯಾದರೂ ಮಗು ಓದುತ್ತಿರುವ ಶಾಲೆಗೆ ಭೇಟಿ ನೀಡಿ ಶಿಕ್ಷಕರೊಂದಿಗೆ ಮಾತುಕತೆ ನಡೆಸುವುದನ್ನು ರೂಡಿಸಿಕೊಳ್ಳಬೇಕು ಎಂದರು.
ನಗರದ ಬಿಜಿಎಸ್ ಪಬ್ಲಿಕ್ ಶಾಲೆ ಹಾಗೂ ತಾಲ್ಲೂಕಿನ ದಿಬ್ಬೂರಹಳ್ಳಿಯ ಬಿಜಿಎಸ್ ಇಂಗ್ಲೀಷ್ ಮಾಧ್ಯಮ ಶಾಲೆಯ ಮಕ್ಕಳಿಗೆ ಶ್ರೀಗಳು ಅಕ್ಷರಭ್ಯಾಸ ಮಾಡಿಸಿದರು.
ಶ್ರೀಕೆಂಪಣ್ಣಸ್ವಾಮಿ ಶ್ರೀವೀರಣ್ಣಸ್ವಾಮಿ ದೇವಾಲಯ ಟ್ರಸ್ಟ್ ನ ಅಧ್ಯಕ್ಷ ಎನ್.ನಾಗರಾಜ್, ಉಪಾಧ್ಯಕ್ಷ ಬಿಳಿಶಿವಾಲೆ ರವಿ, ಖಜಾಂಚಿ ಮುನಿಶಾಮಿಗೌಡ, ಬಿಜಿಎಸ್ ಪಬ್ಲಿಕ್ ಶಾಲೆಯ ಪ್ರಾಂಶುಪಾಲ ಆರ್.ಮಹದೇವ್, ಮಾಜಿ ತಾ.ಪಂ ಸದಸ್ಯ ಡಿ.ಎಸ್.ಎನ್.ರಾಜು ಹಾಜರಿದ್ದರು.