ಶಿಡ್ಲಘಟ್ಟ ತಾಲ್ಲೂಕಿನ ಸುಗಟೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಆವರಣದಲ್ಲಿ ನವದೆಹಲಿಯ ರಾಷ್ಟ್ರೀಯ ಯುವಯೋಜನೆ, ಕರ್ನಾಟಕ ಗಾಂಧಿಸ್ಮಾರಕ ನಿಧಿ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ಶಿಕ್ಷಕರ ದಿನಾಚರಣೆ, ಸರ್ವೆಪಲ್ಲಿ ಡಾ.ಎಸ್.ರಾಧಾಕೃಷ್ಣನ್ ಜಯಂತಿ ಕಾರ್ಯಕ್ರಮದಲ್ಲಿ ಶಿಕ್ಷಕ ಎಚ್.ಎಸ್.ರುದ್ರೇಶಮೂರ್ತಿ ಮಾತನಾಡಿದರು.
ಪ್ರತಿಯೊಬ್ಬ ವ್ಯಕ್ತಿಯ ವ್ಯಕ್ತಿತ್ವ ನಿರ್ಮಾಣ ಮಾಡುವಲ್ಲಿ ಶಿಕ್ಷಕರ ಪಾತ್ರವಿದೆ. ಶಿಕ್ಷಕರು ಮತ್ತಷ್ಟು ಜವಾಬ್ದಾರಿಯುತವಾಗಿ ಕಾರ್ಯನಿರ್ವಹಿಸುವ ಮೂಲಕ ಭವಿಷ್ಯ ಭಾರತದ ಅಭಿವೃದ್ಧಿಗೆ ಗಮನಹರಿಸಬೇಕಿದೆ. ಪ್ರಜ್ಞಾವಂತ ಶಿಕ್ಷಕರು ದೇಶದ ಆಸ್ತಿ. ಮಕ್ಕಳನ್ನು ತಿದ್ದಿತೀಡುವ ಕಾರ್ಯಕ್ಕಾಗಿ ಶಿಕ್ಷಕರಲ್ಲಿ ತಾಳ್ಮೆ, ಮಕ್ಕಳಾಟಗಳನ್ನೆಲ್ಲಾ ತಡೆದುಕೊಳ್ಳುವ ಮನೋಧರ್ಮ, ಮಾತೃಹೃದಯವಿರಬೇಕು. ಉತ್ತಮ ಪ್ರಜೆಗಳನ್ನು ನಿರ್ಮಾಣ ಮಾಡುವ ಮೂಲಕ ದೇಶಕಟ್ಟುವ ಕಾರ್ಯದಲ್ಲಿ ಶಿಕ್ಷಕರದ್ದೇ ಪ್ರಮುಖ ಪಾತ್ರ ಎಂದು ಅವರು ತಿಳಿಸಿದರು.
ನವದೆಹಲಿಯ ರಾಷ್ಟ್ರೀಯ ಯುವಯೋಜನೆ ರಾಜ್ಯ ಸಂಯೋಜಕ ಡಾ.ವಿ.ಪ್ರಶಾಂತ್ ಮಾತನಾಡಿ, ಉತ್ತಮ ಸಮಾಜವನ್ನು ನಿರ್ಮಿಸಿ, ಸುಸ್ಥಿತಿಯಲ್ಲಿಡಲು ಶಿಕ್ಷಕರ ಕಾರ್ಯವು ಮಹತ್ತರವಾದುದು. ಯುವಪೀಳಿಗೆಯನ್ನು ಜಾಗರೂಕತೆಯಿಂದ ಉಪಯೋಗಿಸಿಕೊಳ್ಳುವ ಕಾರ್ಯವಾಗಬೇಕಿದೆ. ಮಕ್ಕಳ ಮನಸ್ಸು ಬಿಳಿಹಾಳೆಯಂತಿದ್ದು ವಿಸರಣೆ ಮತ್ತು ಅಭಿಸರಣೆಯ ರೂಪದಲ್ಲಿ ಮಕ್ಕಳು ಶಿಕ್ಷಕರಲ್ಲಿನ ಉತ್ತಮ ನಡಾವಳಿಗಳನ್ನು ಅನುಕರಣೆ ಮಾಡುವಂತಾಗಬೇಕು. ಮಕ್ಕಳಲ್ಲಿ ಕಡಿಮೆಯಾಗುತ್ತಿರುವ ಸಂವಹನಾಕೌಶಲವನ್ನು ವೃದ್ಧಿಸಿಕೊಳ್ಳಲು ಪೂರಕ ಚಟುವಟಿಕೆಗಳನ್ನು ಶಿಕ್ಷಕರು ಯೋಜಿಸಬೇಕು ಎಂದರು.
ಶಾಲೆಯ ಶಿಕ್ಷಕ ಸಿಬ್ಬಂದಿಯನ್ನು ಸನ್ಮಾನಿಸಲಾಯಿತು. ಕಳೆದ ಏಪ್ರಿಲ್‌ನಿಂದ ಜೂನ್‌ವರೆಗೆ ಗ್ರಾಮಮಟ್ಟದ ಕೊರೊನಾ ತಡೆ ಟಾಸ್ಕ್ ಫೋರ್ಸ್‌ನಲ್ಲಿ ಕಾರ್ಯನಿರ್ವಹಿಸಿ ಕೊರೋರೊನಾಮುಕ್ತ ಗ್ರಾಮವನ್ನಾಗಿಸಲು ಶ್ರಮಿಸಿದ ಶಿಕ್ಷಕರು, ಅಂಗನವಾಡಿ ಕಾರ್ಯಕರ್ತೆಯರನ್ನು ಸನ್ಮಾನಿಸಲಾಯಿತು.
ಗಾಂಧಿ ಸದ್ಭಾವನಾ ಪುರಸ್ಕಾರ: ತಾಲೂಕಿನ ಸುಗಟೂರು ಸರ್ಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕ ಎಚ್.ಎಸ್.ರುದ್ರೇಶಮೂರ್ತಿ ಅವರಿಗೆ ಮಹಾರಾಷ್ಟ್ರದ ಜಾಲ್ಗಾನ್‌ನಲ್ಲಿರುವ ಗಾಂಧಿತೀರ್ಥ್‌ನ ಗಾಂಧಿ ರೀಸರ್ಚ್ ಫೌಂಡೇಶನ್ ವತಿಯಿಂದ ಗಾಂಧಿ ಸದ್ಭಾವನಾ ಪುರಸ್ಕಾರ ಲಭಿಸಿದೆ.
ಕಳೆದ ಕೊರೋನಾ ಲಾಕ್‌ಡೌನ್ ಸಂದರ್ಭದಲ್ಲಿಯೂ ವಿದ್ಯಾರ್ಥಿಗಳಿಗೆ ಗಾಂಧಿ ವಿಚಾರ್ ಸಂಸ್ಕಾರ್ ಪರೀಕ್ಷೆಗೆ ನೊಂದಾಯಿಸಿ ಗಾಂಧಿತತ್ವಗಳನ್ನು ಆನ್‌ಲೈನ್ ಮೂಲಕ ಬೋಧಿಸಿ ಉತ್ತಮ ಫಲಿತಾಂಶ ಪಡೆಯಲು ಪ್ರೇರಣೆ ನೀಡಿದ್ದಕ್ಕಾಗಿ ಫಲಕ, ಪ್ರಶಸ್ತಿಪತ್ರ ನೀಡಿ ಪುರಸ್ಕರಿಸಲಾಗಿದೆ. ಜೆ.ವೆಂಕಟಾಪುರ ಗ್ರಾಮಪಂಚಾಯಿತಿ ಅಧ್ಯಕ್ಷೆ ಶಾಂತಮ್ಮ ದೇವರಾಜು ಫಲಕ ಪ್ರದಾನ ಮಾಡಿದರು.
ಜೆ.ವೆಂಕಟಾಪುರ ಗ್ರಾಮಪಂಚಾಯಿತಿ ಅಧ್ಯಕ್ಷೆ ಶಾಂತಮ್ಮ ದೇವರಾಜು, ಸದಸ್ಯ ಎ.ಸತೀಶ್‌ಕುಮಾರ್, ನಾರಾಯಣಸ್ವಾಮಿ, ಎಂ.ನಾಗರಾಜು, ಮಾಜಿ ಸದಸ್ಯೆ ಭಾಗ್ಯಮ್ಮ ಅರುಣ್‌ಕುಮಾರ್, ಎಸ್‌ಡಿಎಂಸಿ ಸದಸ್ಯ ನಾರಾಯಣಸ್ವಾಂಮಿ, ಪುಷ್ಪಲತಾ, ಮುನಿರತ್ನಮ್ಮ, ರತ್ನಮ್ಮ, ಮಾಜಿ ಸದಸ್ಯ ಬಚ್ಚೇಗೌಡ, ಗ್ರಾಮಸ್ಥ ದೊಡ್ಡಮುನಿವೆಂಕಟಶೆಟ್ಟಿ, ಚಿಕ್ಕಮುನಿವೆಂಕಟಶೆಟ್ಟಿ, ಗುತ್ತಿಗೆದಾರ ಎಂ.ದೇವರಾಜು ಹಾಜರಿದ್ದರು.
Like, Follow, Share ನಮ್ಮ ಶಿಡ್ಲಘಟ್ಟ
Facebook: https://www.facebook.com/sidlaghatta
Instagram: https://www.instagram.com/sidlaghatta
Telegram: https://t.me/Sidlaghatta
Twitter: https://twitter.com/hisidlaghatta
ಸುದ್ದಿಗಳು ಹಾಗೂ ಮಾಹಿತಿಗಾಗಿ ಸಂಪರ್ಕಿಸಿ:
WhatsApp: https://wa.me/917406303366?text=Hi