Sidlaghatta : ಶಿಡ್ಲಘಟ್ಟ ತಾಲ್ಲೂಕಿನ ತಾತಹಳ್ಳಿಯ ಸರ್ಕಾರಿ ಶಾಲೆಯ ಶಿಕ್ಷಕರು ಬುಧವಾರ ತಮ್ಮ ಶಾಲೆಯ ಮಕ್ಕಳನ್ನು ನಗರದ ವೆಂಕಟೇಶ್ವರ ಚಿತ್ರಮಂದಿರದಲ್ಲಿ “ಗಂಧದಗುಡಿ” ಸಿನಿಮಾಗೆ ಕರೆದೊಯ್ದು ವಿನೂತನ ಪ್ರಯೋಗವೊಂದನ್ನು ಕೈಗೊಂಡರು. ಚಲನಚಿತ್ರವೂ ಕಲಿಕಾ ಮಾಧ್ಯಮ ಎಂಬುದನ್ನು ಅವರು ಅಕ್ಷರಶಃ ರುಜುವಾತುಪಡಿಸಿದ್ದಾರೆ.
ಶಿಕ್ಷಕರು ಮಕ್ಕಳಿಗೆ ಈ ಚಲನಚಿತ್ರಕ್ಕೆ ಸಂಬಂಧಿಸಿದಂತೆ 30 ಅಂಕಗಳ ಪ್ರಶ್ನೆಪತ್ರಿಕೆಯೊಂದನ್ನು ಸಿದ್ಧಪಡಿಸಿದ್ದು, ಚಿತ್ರ ವೀಕ್ಷಿಸಿ ಬಂದ ಮಕ್ಕಳು ಅದಕ್ಕೆ ಉತ್ತರಿಸಬೇಕು.
“ಗಂಧದಗುಡಿ” ಈ ಸಿನಿಮಾದ ಪ್ರಮುಖ ಎರಡು ಪಾತ್ರಧಾರಿಗಳು ಯಾರು? ಈ ಸಿನಿಮಾದ ನಿರ್ದೇಶಕರು ಯಾರು? ಈ ಸಿನಿಮಾದಲ್ಲಿ ಯಾಯ ಯಾವ ಪ್ರಕಾರದ ಕಾಡುಗಳನ್ನು ತೋರಿಸಲಾಗಿದೆ? ಈ ಸಿನಿಮಾದಲ್ಲಿ ಯಾವ ಯಾವ ನದಿಗಳನ್ನು ತೋರಿಸಲಾಗಿದೆ? ಡಾ.ರಾಜಕುಮಾರ್ ರವರು ಹುಟ್ಟಿದ ಸ್ಥಳ ಯಾವುದು? ಈ ಸಿನಿಮಾದಲ್ಲಿ ತೋರಿಸಲಾದ ದ್ವೀಪ ಯಾವುದು? ಈ ಸಿನಿಮಾದಲ್ಲಿ ತೋರಿಸಲಾದ ಸರ್ಕಾರಿ ಶಾಲೆ ಎಲ್ಲಿದೆ? ಕರ್ನಾಟಕದಲ್ಲಿ ಈಗ ಇರುವ ಅಂದಾಜು ಹುಲಿಗಳ ಸಂಖ್ಯೆ ಎಷ್ಟು? ಈ ಸಿನಿಮಾದ ಪ್ರಕಾರ ನಾಯಕ ಎಂದರೆ ಯಾರು? ಪುನೀತ್ ರಾಜಕುಮಾರ್ ರವರು ಬಾಲನಟನಾಗಿ ನಟಿಸಿದ ಒಂದು ಚಲನಚಿತ್ರವನ್ನು ಹೆಸರಿಸಿ? ಈ ಸಿನಿಮಾದಲ್ಲಿ ತೋರಿಸಲಾದ ಜಲಪಾತ ಯಾವುದು? ಎಂಬ ಒಂದು ಅಂಕಗಳ ಪ್ರಶ್ನೆಗಳು.
ಈ ಸಿನಿಮಾದಲ್ಲಿ ನಿಮಗೆ ಏನೇನು ಒಳ್ಳೆಯ ಸಂದೇಶಗಳು ಕಂಡುಬಂದವು? ಈ ಸಿನಿಮಾದಲ್ಲಿ ತೋರಿಸಲಾದ ವಿವಿಧ ಸ್ಥಳಗಳ ಹೆಸರುಗಳನ್ನು ಬರೆಯಿರಿ ಹಾಗೂ ಅವುಗಳಲ್ಲಿ ನಿಮಗೆ ಬಹಳ ಇಷ್ಟವಾದ ಒಂದು ಸ್ಥಳದ ಬಗ್ಗೆ ಐದಾರು ವಾಕ್ಯಗಳನ್ನು ಬರೆಯಿರಿ ; ಈ ಸಿನಿಮಾದಲ್ಲಿ ತೋರಿಸಲಾದ ವಿವಿಧ ಪ್ರಾಣಿಗಳ ಹೆಸರುಗಳನ್ನು ಬರೆಯಿರಿ ಹಾಗೂ ಅವುಗಳಲ್ಲಿ ನಿಮಗೆ ಬಹಳ ಇಷ್ಟವಾದ ಒಂದು ಸ್ಥಳದ ಬಗ್ಗೆ ಐದಾರು ವಾಕ್ಯಗಳನ್ನು ಬರೆಯಿರಿ ; ಈ ಗಂಧದಗುಡಿ ಸಿನಿಮಾದ ಕುರಿತಾಗಿ ನಿಮಗೆ ಅನಿಸಿದ್ದನ್ನು ಐದಾರು ವಾಕ್ಯಗಳಲ್ಲಿ ಬರೆಯಿರಿ – ಎಂಬ ನಾಲ್ಕು ಅಂಕೆಗಳ ಪ್ರಶ್ನೆಗಳನ್ನು ಮಕ್ಕಳಿಗೆ ಕೊಡಲಾಗಿದೆ.
ತಾತಹಳ್ಳಿಯ ಸರ್ಕಾರಿ ಶಾಲೆಯ 3 ನೇ ತರಗತಿಯಿಂದ 8 ನೇ ತರಗತಿ ವರೆಗಿನ 80 ವಿದ್ಯಾರ್ಥಿಗಳನ್ನು ಮುಖ್ಯ ಶಿಕ್ಷಕಿ ಸರಸ್ವತಮ್ಮ, ಶಿಕ್ಷಕರಾದ ಪಿ.ಸುದರ್ಶನ, ಕೆ.ಎ.ನಾಗರಾಜ, ವಿ.ಶಾಂತಮ್ಮ, ಎಸ್. ಕಲಾಧರ್, ಅಡುಗೆ ಸಿಬ್ಬಂದಿ ಶಾಂತಮ್ಮ ಮತ್ತು ಗಂಗಮ್ಮ ಕರೆದುಕೊಂಡು ಹೋಗಿದ್ದರು.
“ನಮ್ಮ ಶಾಲೆಯ ಇಂಚರ ಇಕೊಕ್ಲಬ್ ವತಿಯಿಂದ ಈ ಸಿನಿಮಾ ವೀಕ್ಷಣೆ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು. ಮುಖ್ಯವಾಗಿ ಈಗ ಥಿಯೇಟರ್ ಗಳಲ್ಲಿ ಮಕ್ಕಳೊಂದಿಗೆ ಮುಜುಗುರವಿಲ್ಲದೆ ನೋಡಬಹುದಾದ ಸಿನಿಮಾಗಳು ಬರುತ್ತಿಲ್ಲ. ಆದರೆ ಗಂಧದಗುಡಿ ಮುಜುಗರವಿಲ್ಲದೇ ನೋಡಬಹುದಾದ ಸಿನಿಮಾ. ನಮ್ಮ ಶಾಲೆಯ ಮುಕ್ಕಾಲು ಭಾಗ ಮಕ್ಕಳು ಇದುವರೆಗೂ ಥಿಯೇಟರ್ ನೊಡದವರು. ಅವರಿಗೆ ಥಿಯೇಟರ್ ನ ಅನುಭವ ಹೊಂದಲು ಜೊತೆಗೆ ಒಂದೊಳ್ಳೆಯ ಸಿನಿಮಾ ತೋರಿಸಲು ಗಂಧದ ಗುಡಿ ಒಳ್ಳೆಯ ಸಾಧ್ಯತೆ ಅನಿಸಿತು. ಜೊತೆಗೆ ಈ ಸಿನಿಮಾ ಉತ್ತಮ ಸಂದೇಶಗಳನ್ನು ಕೂಡ ಹೊಂದಿದೆ. ವೆಂಕಟೇಶ್ವರ ಚಿತ್ರಮಂದಿರದ ಮಾಲೀಕ ಶಿವಕುಮಾರ ಹಾಗೂ ಸಿಬ್ಬಂದಿ ನಮ್ಮ ಮಕ್ಕಳಿಗೆಂದು ರಿಯಾಯಿತಿ ಕೊಟ್ಟಿರುವರು” ಎಂದು ಶಿಕ್ಷಕ ಕಲಾಧರ್ ತಿಳಿಸಿದರು.
ಶಿಡ್ಲಘಟ್ಟದ ಉಲ್ಲೂರುಪೇಟೆಯ ಸರ್ಕಾರಿ ಶಾಲೆಯ 60 ಮಕ್ಕಳಿಗೆ ಸ್ನೇಹ ಯುವಕರ ಸಂಘದ ಸದಸ್ಯರು ಉಚಿತವಾಗಿ ಗಂಧದಗುಡಿ ಚಲನಚಿತ್ರ ವೀಕ್ಷಣೆ ಮಾಡಿಸಿದರು. “ಮಕ್ಕಳಲ್ಲಿ ಪರಿಸರ ಕಾಳಜಿ ಬೆಳೆಸಲು ಈ ಚಲನಚಿತ್ರ ಪರಿಣಾಮಕಾರಿಯಾಗಿದೆ. ಅದಕ್ಕಾಗಿ ನಾನು ಓದಿದ ಸರ್ಕಾರಿ ಶಾಲೆಯ ಮಕ್ಕಳಿಗೆ ಈ ದಿನ ನಮ್ಮ ಸಂಘದ ಖರ್ಚಿನಲ್ಲಿ ಚಿತ್ರ ವೀಕ್ಷಣೆ ಮಾಡಿಸಿದೆವು. ಇತ್ತೀಚೆಗಷ್ಟೇ ನಾವು ಉಲ್ಲೂರುಪೇಟೆಯ ಪುನೀತ್ ರಾಜಕುಮಾರ್ ವೃತ್ತದಲ್ಲಿ ಪುನೀತ್ ರಾಜಕುಮಾರ್ ಪುತ್ಥಳಿಯನ್ನು ಪ್ರತಿಷ್ಟಾಪನೆ ಮಾಡಿದ್ದೆವು. ಇದೀಗ ಪುನೀತ್ ಅಬಿನಯದ ಗಂಧದಗುಡಿ ಚಲನಚಿತ್ರ ವೀಕ್ಷಣೆಗೆ ಸರ್ಕಾರಿ ಶಾಲೆಯ ಮಕ್ಕಳನ್ನು ಕರೆದುಕೊಂಡು ಬಂದಿದ್ದೇವೆ” ಎಂದು ಸ್ನೇಹ ಯುವಕರ ಸಂಘದ ಅಧ್ಯಕ್ಷ ಭರತ್ ತಿಳಿಸಿದರು. ಸ್ನೇಹ ಯುವಕರ ಸಂಘದ ಆಟೋ ಶ್ರೀನಿವಾಸ್, ಸುನಿಲ್ ಹಾಜರಿದ್ದರು.