Devaramallur, Sidlaghatta : ರಾಷ್ಟ್ರೀಯ ಜಾನುವಾರು ರೋಗ ನಿಯಂತ್ರಣ ಕಾರ್ಯಕ್ರಮದಡಿ 6 ನೇ ಸುತ್ತಿನ ಕಾಲುಬಾಯಿ ರೋಗ ಲಸಿಕಾ ಕಾರ್ಯಕ್ರಮವು (FMD Vaccination) ಇದೇ ಅಕ್ಟೋಬರ್ 21 ರಿಂದ ನವೆಂಬರ್ 20 ರವರೆಗೆ ನಡೆಯಲಿದೆ. ಎಲ್ಲಾ ಮಾಲೀಕರು ತಮ್ಮ ಹಸುಗಳು, ಎಮ್ಮೆಗಳಿಗೆ ಲಸಿಕೆಯನ್ನು ಹಾಕಿಸಬೇಕು. ಮುಂದೆ ಕಾಲು ಬಾರಿ ರೋಗಕ್ಕೆ ಸಿಲುಕಿ ಆಗುವ ಅನಾಹುತವನ್ನು ತಪ್ಪಿಸಲು ಕ್ರಮ ವಹಿಸಬೇಕು ಎಂದು ಕೆ.ಎಂ.ಎಫ್ ನಿರ್ದೇಶಕ ಆರ್.ಶ್ರೀನಿವಾಸ್ ತಿಳಿಸಿದರು.
ತಾಲ್ಲೂಕಿನ ದೇವರಮಳ್ಳೂರು ಗ್ರಾಮದಲ್ಲಿ ಸೋಮವಾರ ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆ ಹಾಗೂ ಕೋಲಾರ ಚಿಕ್ಕಬಳ್ಳಾಪುರ ಜಿಲ್ಲಾ ಸಹಕಾರ ಹಾಲು ಒಕ್ಕೂಟದ ಸಹಯೋಗದಲ್ಲಿ ಸುಮಾರು ಒಂದು ತಿಂಗಳ ಕಾಲ ನಡೆಯುವ ಆರನೇ ಸುತ್ತಿನ ಕಾಲು ಬಾಯಿ ಜ್ವರದ ವಿರುದ್ಧ ಸಾಮೂಹಿಕ ಲಸಿಕಾ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಕಾಲುಬಾಯಿ ರೋಗಒಂದು ಸಾಂಕ್ರಾಮಿಕ ಮತ್ತು ಕೆಲವೊಮ್ಮೆ ಮಾರಣಾಂತಿಕ ವೈರಲ್ ಕಾಯಿಲೆಯಾಗಿದ್ದು , ಇದು ದೇಶೀಯ ಹಸುಗಳು ಒಳಗೊಂಡಂತೆ ಸೀಳು-ಗೊರಸುಳ್ಳ ಪ್ರಾಣಿಗಳ ಮೇಲೆ ಪರಿಣಾಮ ಬೀರುತ್ತದೆ . ವೈರಸ್ ಎರಡರಿಂದ ಆರು ದಿನಗಳ ಕಾಲ ತೀವ್ರವಾದ ಜ್ವರವನ್ನು ಉಂಟುಮಾಡುತ್ತದೆ. ನಂತರ ಬಾಯಿಯೊಳಗೆ ಮತ್ತು ಗೊರಸಿನ ಬಳಿ ಗುಳ್ಳೆಗಳು ಛಿದ್ರವಾಗಬಹುದು ಮತ್ತು ಕುಂಟತನವನ್ನು ಉಂಟುಮಾಡಬಹುದು. ಕೊನೆಗೆ ಜೀವವನ್ನೂ ಕಳೆಯಬಹುದು. ಮುನ್ನೆಚ್ಚರಿಕೆಯ ಕ್ರಮವಾಗಿ ಲಸಿಕೆ ಹಾಕಿಸುವುದೊಂದೇ ಇದಕ್ಕೆ ಪರಿಹಾರ ಎಂದರು.
ಕೋಚಿಮುಲ್ ಉಪವ್ಯವಸ್ಥಾಪಕ ಡಾ.ರವಿಕಿರಣ್, ವಿಸ್ತರಣಾಧಿಕಾರಿ ಶ್ರೀನಿವಾಸ್, ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ಎಂ.ದೇವರಾಜ್, ಉಪಾಧ್ಯಕ್ಷ ಕೇಶವರೆಡ್ಡಿ, ಕಾರ್ಯದರ್ಶಿ ಮಂಜುನಾಥ, ನಿರ್ದೇಶಕರು, ಪಶುಪಾಲನಾ ಇಲಾಖೆಯ ಸಹಾಯಕ ನಿರ್ದೇಶಕ ಡಾ.ಶ್ರೀನಿವಾಸರೆಡ್ಡಿ, ಮುಖ್ಯ ಪಶು ವೈದ್ಯಾಧಿಕಾರಿ ಡಾ.ಪ್ರಶಾಂತ್, ಪಶುವೈದ್ಯಾಧಿಕಾರಿ ಡಾ.ಮಾದೇಶ್ ಹಾಜರಿದ್ದರು.