Sidlaghatta : ವಿದ್ಯಾರ್ಥಿಗಳು ಅಮೂಲ್ಯವಾದ ಸಮಯವನ್ನು ಮೊಬೈಲ್ ಬಳಕೆ ಮಾಡುವುದರಲ್ಲಿ ವ್ಯರ್ಥ ಮಾಡದೆ, ತಮ್ಮ ಜೀವನವನ್ನು ರೂಪಿಸುವಂತಹ ಜ್ಞಾನವನ್ನು ಹೆಚ್ಚಿಸಿಕೊಂಡು ಕೌಶಲ್ಯವನ್ನು ಬೆಳೆಸಿಕೊಳ್ಳಬೇಕೆಂದು ಗೌರಿಬಿದನೂರು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ವಾಣಿಜ್ಯ ವಿಭಾಗದ ಮುಖ್ಯಸ್ಥ ಮಧುಸೂದನ್ ರೆಡ್ಡಿ ತಿಳಿಸಿದರು.
ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಗುರುವಾರ ವಾಣಿಜ್ಯ ವಿಭಾಗದ ಆಶ್ರಯದಲ್ಲಿ ಆಯೋಜಿಸಿದ ಕಾಮರ್ಸ್ ನೆಕ್ಸೆಸ್ ಕಾಮರ್ಸ್ ಫೆಸ್ಟ್ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಅವರು ಮಾತನಾಡಿದರು.
ವಿದ್ಯಾರ್ಥಿಗಳು ತಮ್ಮ ಅಮೂಲ್ಯ ಸಮಯವನ್ನು ವ್ಯರ್ಥ ಮಾಡದೆ ಜೀವನದಲ್ಲಿ ಶಿಸ್ತು ಮೈಗೂಡಿಸಿಕೊಂಡು ಜ್ಞಾನವನ್ನು ಹೆಚ್ಚಿಸಿಕೊಂಡು ಕೌಶಲ್ಯವನ್ನು ಬೆಳೆಸಿಕೊಂಡು ಜನ್ಮ ನೀಡಿದ ತಂದೆ ತಾಯಿ, ವಿದ್ಯೆ ನೀಡುವ ಅಧ್ಯಾಪಕರು ಮತ್ತು ಕಾಲೇಜಿಗೆ ಕೀರ್ತಿ ತರುವಂತಹ ಕೆಲಸವನ್ನು ಮಾಡಬೇಕೆಂದು ಹೇಳಿದರು.
ಹಣವನ್ನು ಕಳೆದುಕೊಂಡರೆ ಪುನಃ ಸಂಪಾದಿಸಬಹುದು ಆದರೆ ಹೋದ ಸಮಯ ಪುನಃ ಸಂಪಾದಿಸಲು ಸಾಧ್ಯವಿಲ್ಲ. ಈ ವಿಚಾರವನ್ನು ಗಂಭೀರವಾಗಿ ಸ್ವೀಕರಿಸಿ ತಮ್ಮ ಮುಂದೆ ಇರುವ ಸವಾಲುಗಳನ್ನು ಎದುರಿಸಲು ಮೊದಲು ಶಿಸ್ತು ಬೆಳೆಸಿಕೊಳ್ಳಬೇಕು. ಅದರ ಮೂಲಕ ಜ್ಞಾನ ಮತ್ತು ಕೌಶಲ್ಯವನ್ನು ಹೆಚ್ಚಿಸಿಕೊಂಡು ಆದರ್ಶ ನಾಗರಿಕರಾಗಿ ಸಮಾಜದಲ್ಲಿ ಬೆಳೆಯಬೇಕು ಎಂದರು.
ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಡಾ.ವಿ. ವೆಂಕಟೇಶ್ ಮಾತನಾಡಿ, ನಮ್ಮ ಸರ್ಕಾರಿ ಕಾಲೇಜಿನಲ್ಲಿ ಯಾವುದೇ ಖಾಸಗಿ ಕಾಲೇಜಿಗಿಂತಲೂ ಕಡಿಮೆ ಇಲ್ಲದಂತೆ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸಲಾಗಿದೆ. ವಿದ್ಯಾರ್ಥಿಗಳು ಈ ಸೌಲಭ್ಯವನ್ನು ಸದುಪಯೋಗ ಮಾಡಿಕೊಳ್ಳಬೇಕೆಂದು ಹೇಳಿದರು.
ಇತಿಹಾಸ ವಿಭಾಗದ ಮುಖ್ಯಸ್ಥ ಶಫೀಉಲ್ಲಾ, ವಾಣಿಜ್ಯ ವಿಭಾಗದ ಮುಖ್ಯಸ್ಥೆ ಎಂ.ಸುನೀತ, ಐಕ್ಯೂಎಸಿ ಮುಖ್ಯಸ್ಥ ಡಾ. ಉಮೇಶ್ ರೆಡ್ಡಿ, ಡಾ. ರವಿಕುಮಾರ್, ಮೊಹಮ್ಮದ್ ಸಾದತ್, ಶೋಭಾ, ಶಿವಶಂಕರಿ, ವೆಂಕಟೇಶ್ ಹಾಜರಿದ್ದರು.