
Sidlaghatta : ಶಿಡ್ಲಘಟ್ಟ ನಗರದ ವಾಸವಿ ಶಾಲೆ ಆವರಣದಲ್ಲಿ ಫೆಬ್ರವರಿ 22 ಶನಿವಾರ ಬೆಳಗ್ಗೆ 9ರಿಂದ ಸಂಜೆ 5ರವರೆಗೆ ಬೃಹತ್ ಉದ್ಯೋಗ ಮೇಳವನ್ನು ಆಯೋಜಿಸಲಾಗಿದೆ ಎಂದು ಲಿಯೋ ಕ್ಲಬ್‌ನ ಅಧ್ಯಕ್ಷ ಎಸ್.ಶ್ರೀಕಾಂತ್ ತಿಳಿಸಿದ್ದಾರೆ.
ನಗರದ ವಾಸವಿ ಶಾಲೆಯಲ್ಲಿ ಬುಧವಾರ ನಡೆದ ಪತ್ರಿಕಾ ಗೋಷ್ಠಿಯಲ್ಲಿ ಅವರು ಮಾತನಾಡಿ, ಲಿಯೋ ಕ್ಲಬ್ ಆಫ್ ಕಿರಣ ಮತ್ತು ವಿವಿಧ ಸಂಘ ಸಂಸ್ಥೆಗಳ ಆಶ್ರಯದಲ್ಲಿ ಈ ಉದ್ಯೋಗ ಮೇಳವನ್ನು ಆಯೋಜಿಸಲಾಗಿದೆ. ರಾಜ್ಯದ 50ಕ್ಕೂ ಹೆಚ್ಚು ಪ್ರತಿಷ್ಠಿತ ಕಂಪನಿಗಳು ಭಾಗವಹಿಸುವ ಈ ಮೇಳವು ನಿರುದ್ಯೋಗಿ ಯುವಕರಿಗೆ ಉತ್ತಮ ಅವಕಾಶವನ್ನು ಒದಗಿಸಲಿದೆ ಎಂದರು.
ಎಸ್ಸೆಸ್ಸೆಲ್ಸಿ, ಪಿಯುಸಿ, ಪದವಿ, ಐಟಿಐ, ಡಿಪ್ಲೊಮಾ ಹಾಗೂ ತತ್ಸಮಾನ ಪದವಿ ಪಡೆದ ನಿರುದ್ಯೋಗಿಗಳು ಈ ಉದ್ಯೋಗ ಮೇಳದಲ್ಲಿ ಭಾಗವಹಿಸಬಹುದು. ನೋಂದಣಿಗಾಗಿ ಕ್ಯೂಆರ್ ಕೋಡ್ ನೀಡಲಾಗಿದ್ದು, ಆನ್‌ಲೈನ್ ಅಥವಾ ಸ್ಥಳದಲ್ಲಿಯೇ ಹೆಸರು ನೋಂದಾಯಿಸಲು ಅವಕಾಶವಿದೆ ಎಂದು ಅವರು ವಿವರಿಸಿದರು.
ತಾಲೂಕಿನ ನಿರುದ್ಯೋಗಿ ಯುವಕರು ಈ ಉದ್ಯೋಗ ಮೇಳದ ಸದುಪಯೋಗವನ್ನು ಪಡೆದುಕೊಳ್ಳಬೇಕೆಂದು ಮನವಿ ಮಾಡಿದರು. ಹೆಚ್ಚಿನ ಮಾಹಿತಿಗೆ ಲೋಕೇಶ್ (8431775911) ಮತ್ತು ದುರ್ಗಾ ಪ್ರಸಾದ್ (9663871469) ಅವರನ್ನು ಸಂಪರ್ಕಿಸಲು ಕರೆ ನೀಡಿದರು.
ಈ ಸಂದರ್ಭದಲ್ಲಿ ಲಿಯೋ ಕ್ಲಬ್‌ನ ಕಾರ್ಯದರ್ಶಿ ಲೋಕೇಶ್, ನಿರ್ದೇಶಕರಾದ ಗೋವರ್ಧನ್, ಅಕ್ಷಿತ್, ಮುರಳಿ, ಕಾರ್ತಿಕ್, ಕಸ್ತೂರಿ ಕರ್ನಾಟಕ ಜನಪರ ವೇದಿಕೆ ಜಿಲ್ಲಾಧ್ಯಕ್ಷ ರಾಮಾಂಜನೇಯ, ಹಾಗೂ ವಿವಿಧ ಸಂಘಟನೆಗಳ ಮುಖಂಡರಾದ ನಾಗೇಶ್, ಭಗತ್, ಸುರೇಶ್, ಸುನಿಲ್, ಪಾರ್ಥಸಾರಥಿ, ಸೋಮು ಮತ್ತಿತರರು ಹಾಜರಿದ್ದರು.