ಶಿಡ್ಲಘಟ್ಟ ನಗರದ ಸಹಾಯಕ ಕೃಷಿ ನಿರ್ದೇಶಕರ ಕಚೇರಿಯ ಬಳಿ ನೂರಾರು ಮಂದಿ ರೈತರು ಸೋಮವಾರ ಬೆಳಗ್ಗೆಯಿಂದಲೇ ಸಾಲುಗಟ್ಟಿ ನಿಂತಿದ್ದರು. ರಾಜ್ಯ ಸಹಕಾರ ಮಾರಾಟ ಮಂಡಳಿ ನಿಯಮಿತ ವತಿಯಿಂದ 2021-22 ನೇ ಸಾಲಿನಲ್ಲಿ ಸರ್ಕಾರದ ಬೆಂಬಲ ಬೆಲೆ ಯೋಜನೆಯಡಿ ತಾಲ್ಲೂಕು ಕೇಂದ್ರಗಳಲ್ಲಿ ರಾಗಿ ಖರೀದಿ ಕೇಂದ್ರ ಸ್ಥಾಪನೆ ಮಾಡಿರುವರು. ಪ್ರತಿ ಕ್ವಿಂಟಾಲ್ ಗೆ ರಾಗಿ ದರ 3377 ರೂ ನಿಗದಿ ಮಾಡಿದ್ದಾರೆ.
“ಸರ್ಕಾರದ ಆದೇಶದ ಪ್ರಕಾರ ಬೆಳಗ್ಗೆ 8 ಗಂಟೆಯಿಂದಲೂ ರಾಗಿ ಮಾರಲು ನೋಂದಣಿ ಮಾಡಿಸಲೆಂದು ನೂರಾರು ಮಂದಿ ರೈತರು ಬಂದು ಕಾದಿದ್ದೇವೆ. ಆದರೆ ಇಲ್ಲಿ ಮಧ್ಯಾಹ್ನವಾದರೂ ವೆಬ್ ಸೈಟ್ ಓಪನ್ ಆಗುತ್ತಿಲ್ಲ ಎನ್ನುತ್ತಿದ್ದಾರೆ. ತಿಂಡಿ, ಊಟ ಮತ್ತು ನೀರಿಲ್ಲದೇ ಬಿಸಿಲಿನಲ್ಲಿ ಸಾಲುಗಟ್ಟಿ ಸುಮಾರು ಆರುನೂರು ಮಂದಿ ರೈತರು ಇಲ್ಲಿ ನಿಂತಿದ್ದೇವೆ. ಇದೀಗ ನಂಬರ್ ಹಾಕಿ ಒಂದು ಚೀಟಿ ಬರೆದುಕೊಡುತ್ತೇವೆ. ನಾಳೆ ಬನ್ನಿ ಅನ್ನುತ್ತಿದ್ದಾರೆ. ಆ ಚೀಟಿಯಲ್ಲಿ ಸೀಲಿಲ್ಲ ಏನಿಲ್ಲ, ನಂಬರನ್ನು ಬೇರೆ ಯಾರು ಬೇಕಾದರೂ ಬರೆದುಕೊಳ್ಳಬಹುದಲ್ಲವಾ. ಕೆಲವೇ ಕೆಲವು ರೈತರದ್ದು ಮಾತ್ರ ಖರೀದಿ ಮಾಡಿ ಉಳಿದವರನ್ನು ವಾಪಸ್ ಕಳಿಸಬಹುದೆಂಬ ಆತಂಕ ರೈತರದ್ದು. ಹಿಂಡಿ, ಬೇಸಾಯ, ಆಹಾರ ಪದಾರ್ಥಗಳ ಬೆಲೆ ಏರಿದೆ. ಆದರೆ ರೈತರ ಪರಿಸ್ಥಿತಿ ಅಧೋಗತಿ ತಲುಪಿದೆ. ಈ ಪರಿಸ್ಥಿತಿಯಲ್ಲಿ ರಾಗಿ ಬೆಳೆದ ಎಲ್ಲಾ ರೈತರಿಂದ ಸರ್ಕಾರ ಕೊಳ್ಳಬೇಕು” ಎಂದು ರೈತ ತ್ಯಾಗರಾಜ್ ಒತ್ತಾಯಿಸಿದರು.