Sidlaghatta : ಶಿಡ್ಲಘಟ್ಟ ತಾಲ್ಲೂಕಿನ ನಾನಾ ಕಡೆ ಅರಣ್ಯ ಇಲಾಖೆ ಅಧಿಕಾರಿಗಳು ರೈತರ ಮೇಲೆ ನಡೆಸುತ್ತಿರುವ ದಬ್ಬಾಳಿಕೆ, ರೈತರ ಜಮೀನುಗಳಿಗೆ ಬೇಲಿ ಹಾಕುತ್ತಿರುವುದನ್ನು ಖಂಡಿಸಿ ಜೂ.21ರ ಶುಕ್ರವಾರ ಬೃಹತ್ ಪ್ರತಿಭಟನೆ ನಡೆಸುವುದಾಗಿ ಹಸಿರು ಸೇನೆ ರೈತ ಸಂಘದ ರಾಜ್ಯ ಕಾರ್ಯಾಧ್ಯಕ್ಷ ಭಕ್ತರಹಳ್ಳಿ ಬೈರೇಗೌಡ ತಿಳಿಸಿದರು.
ನಗರದಲ್ಲಿನ ಹಸಿರು ಸೇನೆ ರೈತ ಸಂಘದ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಜೂ.21 ರ ಶುಕ್ರವಾರ ದಿಬ್ಬೂರಹಳ್ಳಿಯ ವೃತ್ತದಿಂದ ದಿಬ್ಬೂರಹಳ್ಳಿ ಪೊಲೀಸ್ ಠಾಣೆಯವರೆಗೂ ರೈತರ ಬೃಹತ್ ಪ್ರತಿಭಟನೆ ನಡೆಸಲಾಗುವುದು ಎಂದು ಹೇಳಿದರು.
ಬಶೆಟ್ಟಹಳ್ಳಿ ಹೋಬಳಿಯ ಕರಿಯಪ್ಪನಹಳ್ಳಿ ಹಾಗೂ ಸುತ್ತ ಮುತ್ತಲ ರೈತರಿಗೆ 1979 ರಲ್ಲಿ ಸರ್ಕಾರವೇ ಬಗರ್ ಹುಕುಂ ಸಾಗುವಳಿ ಚೀಟಿ ನೀಡಲಾಗಿದೆ. ಪಹಣಿ ವಿತರಿಸಿದ್ದು ತಾತ ಮುತ್ತಾತಂದಿರ ಕಾಲದಿಂದಲೂ ಆ ಜಮೀನಿನಲ್ಲಿ ಉಳುಮೆ ಮಾಡಿಕೊಂಡು ಬದುಕನ್ನು ಕಟ್ಟಿಕೊಂಡಿದ್ದಾರೆ.
ಆದರೆ ಅರಣ್ಯ ಇಲಾಖೆ ಅಧಿಕಾರಿಗಳು ಇದು ಡೀಮ್ಡ್ ಅರಣ್ಯ ಎಂದು ಹೇಳಿ ಏಕಾ ಏಕಾ ರೈತರ ಜಮೀನುಗಳಿಗೆ ಬೇಲಿ ಹಾಕಿ ಜಮೀನಿನಲ್ಲಿ ಬೆಳೆದಿದ್ದ ಹೂ ಹಣ್ಣ ತರಕಾರಿಗಳ ಫಸಲು ಸಿಗದಂತೆ ಮಾಡಿದ್ದಾರೆ. ಅರಣ್ಯ ಇಲಾಖೆಯ ಈ ಕ್ರಮವನ್ನು ಪ್ರಶ್ನಿಸಿದ 20 ರೈತರ ಮೇಲೆ ಕೇಸನ್ನು ದಾಖಲಿಸಿದ್ದಾರೆ ಎಂದು ದೂರಿದರು.
ಈ ಸಮಸ್ಯೆ ಕುರಿತು ಈ ಹಿಂದೆಯೆ ಶಾಸಕರು ಹಾಗೂ ಅರಣ್ಯ ಇಲಾಖೆ ಅಧಿಕಾರಿಗಳು ಸ್ಥಳೀಯ ರೈತರೊಂದಿಗೆ ಒಮ್ಮೆ ಸಭೆ ನಡೆಸಿದ್ದರೂ ಉಪಯೋಗವಿಲ್ಲದಾಗಿದೆ. ಅರಣ್ಯ ಇಲಾಖೆ ಅಧಿಕಾರಿಗಳು ಇನ್ನಿಲ್ಲದ ಪಿತೂರಿ ನಡೆಸಿ ರೈತರ ಉಳುಮೆ ಜಮೀನನ್ನು ವಶಪಡಿಸಿಕೊಂಡು ಒಕ್ಕಲೆಬ್ಬಿಸಲು ಮುಂದಾಗಿದ್ದಾರೆ ಎಂದು ಆಪಾದಿಸಿದರು.
ಅರಣ್ಯ ಇಲಾಖೆ ಅಧಿಕಾರಿಗಳ ಈ ವರ್ತನೆ ಖಂಡಿಸಿ ಜೂನ್ 21ರ ಶುಕ್ರವಾರ ಬೃಹತ್ ಪ್ರತಿಭಟನೆ ನಡೆಸುತ್ತೇವೆ. ರೈತರ ಜಮೀನನ್ನು ರೈತರಿಗೆ ಉಳಿಸಿಕೊಳ್ಳುವ ತನಕ ನಮ್ಮ ಹೋರಾಟ ಯಾವುದೆ ಕಾರಣಕ್ಕೂ ನಿಲ್ಲುವುದಿಲ್ಲ ಎಂದು ಸ್ಪಷ್ಟಪಡಿಸಿದರು.
ರೈತ ಸಂಘದ ಜಿಲ್ಲಾ ಉಪಾಧ್ಯಕ್ಷ ವೀರಾಪುರ ಮುನಿನಂಜಪ್ಪ, ಹಿತ್ತಲಹಳ್ಳಿ ರಮೇಶ್, ದೇವರಾಜ್, ನಾಗರಾಜ್ ಇನ್ನಿತರೆ ರೈತ ಮುಖಂಡರು ಹಾಜರಿದ್ದರು.