Sidlaghatta : ಸರ್ಕಾರವೇ ಬಗರ್ ಹುಕುಂ ಸಾಗುವಳಿ ಚೀಟಿ ವಿತರಿಸಿ ಪಹಣಿ ಇರುವ ಜಮೀನುಗಳಲ್ಲಿ ರೈತರು ಕೃಷಿ ಮಾಡಲು ಅಡ್ಡಿಪಡಿಸುತ್ತಿರುವ ಅರಣ್ಯ ಇಲಾಖೆ ಅಧಿಕಾರಿಗಳ ವಿರುದ್ದ ಹಸಿರು ಸೇನೆ ರೈತ ಸಂಘದ ಕೋಡಿಹಳ್ಳಿ ಚಂದ್ರಶೇಖರ್ ಬಣದ ನೂರಾರು ರೈತರು ಸಿಡಿದೆದ್ದಿದ್ದು ದಿಬ್ಬೂರಹಳ್ಳಿ ವೃತ್ತದಲ್ಲಿ ಶುಕ್ರವಾರ ಬೃಹತ್ ಪ್ರತಿಭಟನೆ ನಡೆಸಿದರು.
ತಾಲ್ಲೂಕಿನ ಬಶೆಟ್ಟಹಳ್ಳಿ ಹೋಬಳಿಯ ಕರಿಯಪ್ಪನಹಳ್ಳಿ, ತಲಕಾಯಲಬೆಟ್ಟದ ಆಸುಪಾಸಿನಲ್ಲಿ ರೈತರು ಹಲವು ವರ್ಷಗಳಿಂದಲೂ ಉತ್ತಿ ಬಿತ್ತಿ ಬೆಳೆ ಬೆಳೆಯುತ್ತಿದ್ದ ಜಮೀನುಗಳಿಗೆ ಏಕಾ ಏಕಿ ಬೇಲಿ ಸುತ್ತಿ ಅಕ್ರಮವಾಗಿ ಪ್ರವೇಶ ಮಾಡಿ ಬೆಳೆ ನಷ್ಟ ಮಾಡಿದ ಅರಣ್ಯ ಅಧಿಕಾರಿಗಳ ವಿರುದ್ದ ಮೊಕದ್ದಮೆ ದಾಖಲಿಸಬೇಕೆಂದು ಆಗ್ರಹಿಸಿದರು.
ದಿಬ್ಬೂರಹಳ್ಳಿಯ ವೃತ್ತದಲ್ಲಿ ಜಮಾಯಿಸಿದ ನೂರಾರು ರೈತರು ದಿಬ್ಬೂರಹಳ್ಳಿಯಿಂದ ದಿಬ್ಬೂರಹಳ್ಳಿ ಪೊಲೀಸ್ ಠಾಣೆಯವರೆಗೂ ಕಾಲ್ನಡಿಗೆ ಮೂಲಕ ಸಾಗಿ ದೂರು ನೀಡಲು ಮುಂದಾದ ರೈತರನ್ನು ದಾರಿ ಮಧ್ಯೆಯೆ ಪೊಲೀಸರು ತಡೆದರು.
ಆಗ ರೈತರು ರಸ್ತೆಯಲ್ಲೇ ಕುಳಿತು ಪ್ರತಿಭಟನೆ ನಡೆಸಿದರು. ರೈತರನ್ನು ಒಕ್ಕಲೆಬ್ಬಿಸುತ್ತಿರುವ ಅರಣ್ಯ ಇಲಾಖೆ ಅಧಿಕಾರಿಗಳ ವಿರುದ್ದ ಘೋಷಣೆಗಳನ್ನು ಕೂಗಿದರು. ಅರಣ್ಯ ಇಲಾಖೆ ಅಧಿಕಾರಿಗಳು ರೈತರ ವಿರುದ್ದ ಕೊಟ್ಟ ದೂರನ್ನು ದಾಖಲಿಸಿಕೊಂಡ ಪೊಲೀಸರು ಅರಣ್ಯ ಇಲಾಖೆ ಅಧಿಕಾರಿಗಳ ವಿರುದ್ದ ರೈತರು ಕೊಟ್ಟ ದೂರನ್ನು ದಾಖಲಿಸದೆ ನಿರ್ಲಕ್ಷ್ಯ ಮಾಡಿದ ಪೊಲೀಸರ ಕಾರ್ಯವೈಖರಿ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದರು.
ಈ ವೇಳೆ ಮಾತನಾಡಿದ ರೈತ ಸಂಘದ ರಾಜ್ಯ ಕಾರ್ಯಾಧ್ಯಕ್ಷ ಭಕ್ತರಹಳ್ಳಿ ಬೈರೇಗೌಡ ಅವರು, ಸರ್ಕಾರವು ಜಮೀನು ಮಂಜೂರು ಮಾಡಿ ಪಹಣಿಯೂ ಇದೆ. ತಾತ ಮುತ್ತಾತಂದಿರ ಕಾಲದಿಂದಲೂ ಕೃಷಿ ನಡೆಸುತ್ತಿದ್ದಾರೆ. ಆದರೆ ಅರಣ್ಯ ಇಲಾಖೆ ಅಧಿಕಾರಿಗಳು ಇದೀಗ ಏಕಾ ಏಕಿ ಕೆಲ ಜಮೀನುಗಳಿಗೆ ಬೇಲಿ ಹಾಕುತ್ತಿದ್ದಾರೆ.
ಇದು ಡೀಮ್ಡ್ ಫಾರೆಸ್ಟ್ ಎಂದು ಸಬೂಬು ಹೇಳಿ ಜಮೀನಿನಲ್ಲಿ ಹೂ ಹಣ್ಣು ತರಕಾರಿ ಬೆಳೆಗಳಿದ್ದರೂ ಅವುಗಳನ್ನು ನಾಶ ಮಾಡಿ, ಡ್ರಿಪ್ ಪೈಪುಗಳನ್ನು ನಾಶ ಮಾಡಿ ಬೇಲಿ ಸುತ್ತುತ್ತಿದ್ದಾರೆ. ಅರಣ್ಯ ಇಲಾಖೆ ಅಧಿಕಾರಿಗಳ ಧೌರ್ಜನ್ಯವನ್ನು ಪ್ರಶ್ನಿಸಿದ ಎಂಟು ಮಂದಿ ರೈತರ ಮೇಲೆ ಅರಣ್ಯ ಇಲಾಖೆ ಅಧಿಕಾರಿಗಳು ಕೊಟ್ಟ ದೂರನ್ನು ಪೊಲೀಸರು ದಾಖಲಿಸಿದ್ದಾರೆ.
ಆದರೆ ಸರ್ಕಾರವೇ ಜಮೀನು ಮಂಜೂರು ಮಾಡಿ ಪಹಣಿ ಇರುವ ಜಮೀನಿನಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳು ಏಕಾ ಏಕಿ ಅಕ್ರಮ ಪ್ರವೇಶ ಮಾಡಿ ಬೆಳೆ ನಾಶ ಮಾಡಿ ಬೇಲಿ ಸುತ್ತಿರುವ ಬಗ್ಗೆ ರೈತರು ದೂರು ಕೊಟ್ಟರೆ ಪೊಲೀಸರು ಏನೂ ಮಾಡದೆ ಅರಣ್ಯ ಅಧಿಕಾರಿಗಳ ಪರ ನಿಂತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಅರಣ್ಯ ಇಲಾಖೆ ಅಧಿಕಾರಿ ಸುಧಾಕರ್ ಹಾಗೂ ಜಯಚಂದ್ರ ಅವರ ವಿರುದ್ದ ನಾವು ಕೊಟ್ಟ ದೂರನ್ನು ದಾಖಲಿಸಬೇಕು. ರೈತರ ಜಮೀನುಗಳಲ್ಲಿ ಆದ ನಷ್ಟದ ಪರಿಹಾರವನ್ನು ಅವರಿಂದ ಕಟ್ಟಿಸಿಕೊಳ್ಳಲು ಕ್ರಮ ತೆಗೆದುಕೊಳ್ಳಬೇಕು. ಅದುವರೆಗೂ ಇಲ್ಲಿಂದ ಕದಲುವುದಿಲ್ಲ ಎಂದು ರಸ್ತೆಯಲ್ಲೇ ಕುಳಿತು ಪ್ರತಿಭಟನೆಯನ್ನು ನಡೆಸಿದರು.
ಸ್ಥಳಕ್ಕೆ ಆಗಮಿಸಿದ ಡಿವೈಎಸ್ಪಿ ಮುರಳೀಧರ್, ಸಿಪಿಐ ಶ್ರೀನಿವಾಸ್ ಅವರು, ಶಿಡ್ಲಘಟ್ಟ ಗ್ರಾಮಾಂತರ ಠಾಣೆಯ ಎಸ್.ಐ ಸತೀಶ್ ಅವರು ರಸ್ತೆ ತಡೆ ಮಾಡಿ ಪ್ರತಿಭಟನೆ ಮಾಡುವುದನ್ನು ಕೈ ಬಿಡುವಂತೆ ಮನವಿ ಮಾಡಿದರೂ ಒಪ್ಪದ ರೈತರು ಸುಮಾರು ಒಂದು ಗಂಟೆ ಕಾಲ ಪ್ರತಿಭಟನೆ ನಡೆಸಿದರು.
ಅಂತಿಮವಾಗಿ ರೈತರಿಂದ ದೂರು ಸ್ವೀಕರಿಸಿದ ಡಿವೈಎಸ್ಪಿ ಮುರಳೀಧರ್ ಇಲಾಖೆಯ ಹಿರಿಯ ಅಧಿಕಾರಿಗಳ ಜತೆ ಚರ್ಚಿಸಿ ಕಾನೂನು ತಜ್ಞರ ಸಲಹೆ ಪಡೆದು ದೂರು ದಾಖಲಿಸುವ ಮತ್ತು ಮುಂದಿನ ಕ್ರಮ ಜರುಗಿಸುವ ಭರವಸೆ ನೀಡಿದರು.
ರೈತ ಸಂಘದ ಜಿಲ್ಲಾಧ್ಯಕ್ಷ ರಾಮನಾಥ್, ಜಿಲ್ಲಾ ಉಪಾಧ್ಯಕ್ಷ ವೀರಾಪುರ ಮುನಿನಂಜಪ್ಪ, ವೇಣುಗೋಪಾಲ್, ತಾದೂರು ಮಂಜುನಾಥ್, ಬಿ.ನಾರಾಯಣಸ್ವಾಮಿ, ಅಶ್ವತ್ಥರೆಡ್ಡಿ, ಎ.ಜಿ.ನಾರಾಯಣಸ್ವಾಮಿ, ಬೀರಪ್ಪ ಇನ್ನಿತರೆ ಮುಖಂಡರು ಪ್ರತಿಭಟನೆಯ ನೇತೃತ್ವವಹಿಸಿದ್ದರು.