ಅಸಮರ್ಪಕ ವಿದ್ಯುತ್ ಸರಬರಾಜು ಮತ್ತು ಟಿ.ಸಿ ಗಳನ್ನು ಸಮಯಕ್ಕೆ ಸರಿಯಾಗಿ ಸರಬರಾಜು ಮಾಡದಿರುವುದು ಮತ್ತು ಜೋತುಬಿದ್ದ ವಿದ್ಯುತ್ ಲೈನುಗಳನ್ನು ಸರಿಪಡಿಸದಿರುವುದನ್ನು ಖಂಡಿಸಿ, ಸರಿಪಡಿಸುವಂತೆ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಸದಸ್ಯರು ಗುರುವಾರ ತಾಲ್ಲೂಕಿನ ಜಂಗಮಕೋಟೆ BESCOM ಎಂಜಿನಿಯರ್ ಗೆ ಮನವಿ ಸಲ್ಲಿಸಿದರು.
ಸರ್ಕಾರ 7 ಗಂಟೆ 3 ಫೇಸ್ ಕರೆಂಟ್ ಕೊಡಲು ಆದೇಶಿಸಿದ್ದರೂ, ತಾವುಗಳು ಸರಿಯಾಗಿ 3 ಗಂಟೆ ಹೊತ್ತು ಕೂಡ ಕರೆಂಟ್ ಕೊಡುತ್ತಿಲ್ಲ ಮತ್ತು ಕೆಟ್ಟು ನಿಂತ ಟಿ.ಸಿ ಗಳನ್ನು ತಕ್ಷಣ ಸರಬರಾಜು ಮಾಡದೆ ವಿಳಂಬ ಮಾಡುತ್ತಿರುವುದರಿಂದ ರೈತರು ಬೆಳೆದ ಬೆಳೆಗಳು ನಾಶವಾಗಿ ಆರ್ಥಿಕವಾಗಿ ನಷ್ಟಕ್ಕೆ ಒಳಗಾಗುತ್ತಿದ್ದಾರೆ. ಇದಲ್ಲದೆ ಸಿಂಗಲ್ ಫೇಸ್ ಕರೆಂಟ್ ಕೂಡ ಸರಿಯಾಗಿ ಕೊಡದಿರುವುದರಿಂದ ರೈತರು ದನಕರುಗಳಿಗೆ ಮೇವು ಸಹ ಹಾಕಲಾಗದೆ ಹಾಲು ಕರೆಯಲು ಕತ್ತಲಲ್ಲೆ ಹೋಗಿ ತೊಂದರೆಗೊಳಗಾಗುತ್ತಿದ್ದಾರೆ. ಪರೀಕ್ಷೆಗಳು ಹತ್ತಿರ ಬರುತ್ತಿರುವುದರಿಂದ ವಿದ್ಯಾರ್ಥಿಗಳು ಓದಿಕೊಳ್ಳಲು ಸಹ ಆಗುತ್ತಿಲ್ಲ. ಜೋತು ಬಿದ್ದ ವಿದ್ಯುತ್ ಲೈನ್ ಗಳನ್ನು ಸಹ ಸರಿಪಡಿಸದಿರುವುದರಿಂದ ರೈತರು ದನಕರುಗಳನ್ನು ಮೇಯಿಸಲು ಹೋದಾಗ ತೊಂದರೆಗೆ ಒಳಗಾಗುತ್ತಿದ್ದಾರೆ. ಕಬ್ಬಿಣದ ಕಂಬಗಳನ್ನು ಬದಲಾಯಿಸಿ, ಸಿಮೆಂಟ್ ಕಂಬಗಳನ್ನು ಅಳವಡಿಸಬೇಕು. ಈ ಎಲ್ಲಾ ತೊಂದರೆಗಳನ್ನು ಕೂಡಲೇ ಸರಿಪಡಿಸದ ಹೋದಲ್ಲಿ ರೈತಸಂಘದಿಂದ ಉಗ್ರ ಹೋರಾಟವನ್ನು ಎದುರಿಸಬೇಕಾಗುತ್ತದೆ ಎಂದು ಜಂಗಮಕೋಟಿ ಹೋಬಳಿಯ ಎಲ್ಲಾ ಪಂಚಾಯತಿಯ ರೈತರು ಮತ್ತು ಸಾರ್ವಜನಿಕರ ಪರವಾಗಿ ಎಚ್ಚರಿಕೆ ನೀಡಿದರು.
ರೈತಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಭಕ್ತರಹಳ್ಳಿ ಬೈರೇಗೌಡ, ತಾಲ್ಲೂಕು ಅಧ್ಯಕ್ಷ ತಾದೂರು ಮಂಜುನಾಥ್, ಮುನಿನಂಜಪ್ಪ, ರಮೇಶ್, ಶಿವಮೂರ್ತಿ, ನಾಗರಾಜ್ ಹಾಜರಿದ್ದರು.