H Cross, Sidlaghatta : ಶಿಡ್ಲಘಟ್ಟ ತಾಲ್ಲೂಕಿನ ಎಚ್.ಕ್ರಾಸ್(ಕುಂಭಿಗಾನಹಳ್ಳಿ)ನಲ್ಲಿ ನಡೆಯುವ ವಾರದ ಸಂತೆಯಲ್ಲಿ ರೈತರು ತರುವ ಹೂವು ಹಣ್ಣು ತರಕಾರಿ ಮೂಟೆಗಳಿಗೆ ಸುಂಕ ವಿಧಿಸುವುದನ್ನು ವಿರೋಧಿಸಿ ಹಸಿರು ಸೇನೆ ರೈತ ಸಂಘದ ಸದಸ್ಯರು ಗ್ರಾಮ ಪಂಚಾಯಿತಿ ಎದುರು ಮಂಗಳವಾರ ಪ್ರತಿಭಟನೆ ನಡೆಸಿ ಮನವಿ ಸಲ್ಲಿಸಿದರು.
ಪ್ರತಿ ವರ್ಷವೂ ವಾರದ ಸಂತೆಯ ಸುಂಕ ವಸೂಲಿಯ ಹರಾಜು ನಡೆಯಲಿದ್ದು ಅದರಂತೆ ಈ ವರ್ಷದ ಸುಂಕ ವಸೂಲಿಯ ಹರಾಜು ನಡೆಸಲು ಗ್ರಾಮ ಪಂಚಾಯಿತಿಯು ಕರ ಪತ್ರ ಮುದ್ರಿಸಿ ಪ್ರಚಾರ ನಡೆಸಿ ಇದೆ ಜೂನ್ 19 ರ ಬುಧವಾರ ಬಹಿರಂಗ ಹರಾಜಿಗೆ ಮುಂದಾಗಿತ್ತು.
ವಿಚಾರ ತಿಳಿದು ಹಸಿರು ಸೇನೆ ರೈತ ಸಂಘದ ಕೋಡಿಹಳ್ಳಿ ಚಂದ್ರಶೇಖರ್ ಬಣದ ರೈತರು ಎಚ್.ಕ್ರಾಸ್ ಗ್ರಾಮ ಪಂಚಾಯಿತಿಗೆ ತೆರಳಿ ಪಂಚಾಯಿತಿ ಆವರಣದಲ್ಲಿ ಪ್ರತಿಭಟನೆ ನಡೆಸಿದರು.
ರೈತರು ಬೆಳೆಯುವ ಹೂ ಹಣ್ಣು ತರಕಾರಿಗಳಿಗೆ ಯಾವುದೆ ರೀತಿಯ ಸುಂಕ ವಿಧಿಸಬಾರದು, ವಾರದ ಸಂತೆಯ ಸುಂಕ ವಸೂಲಿಯ ಕರಪತ್ರದಲ್ಲಿ ರೈತರ ಉತ್ಪನ್ನಗಳಿಗೆ ಸುಂಕ ವಿಧಿಸಿರುವುದನ್ನು ಕೈ ಬಿಡಬೇಕೆಂದು ಆಗ್ರಹಿಸಿ ಮನವಿ ಸಲ್ಲಿಸಿದರು.
ಎಪಿಎಂಸಿ ಕಾಯಿದೆಯಲ್ಲೂ ಈ ವಿಷಯವಿದ್ದು ಅದರಂತೆ ಸುಂಕ ವಸೂಲಿ ಕೈ ಬಿಡಬೇಕು ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಪ್ರತಿಭಟನೆಯನ್ನು ಮಾಡಬೇಕಾದೀತೆಂದು ಎಚ್ಚರಿಸಿದರು.
ಮನವಿಯನ್ನು ಸ್ವೀಕರಿಸಿದ ಪಿಡಿಒ ಎಂ.ಸಿ.ಪ್ರಶಾಂತ್ ಕುಮಾರ್ ಮಾತನಾಡಿ, ಪ್ರತಿ ವರ್ಷವೂ ವಾರದ ಸಂತೆಯ ಸುಂಕ ವಸೂಲಿಯ ಬಿಡ್ ನ ಬಹಿರಂಗ ಹರಾಜಿಗೆ ಮುದ್ರಿಸುವ ಕರಪತ್ರದಲ್ಲಿ ಕಳೆದ ವರ್ಷದಂತೆಯೆ ಈ ವರ್ಷವೂ ಹೂ ಹಣ್ಣೂ ತರಕಾರಿಯ ಪ್ರತಿ ಮೂಟೆಗೂ ಐದು ರೂ.ಸುಂಕವನ್ನು ವಸೂಲಿ ಮಾಡುವುದಾಗಿ ಮುದ್ರಿಸಲಾಗಿದೆ.
ಆದರೆ ಕಳೆದ ವರ್ಷವೇ ಸುಂಕ ವಸೂಲಿ ಮಾಡಿಲ್ಲ. ಈ ವರ್ಷವೂ ಸುಂಕ ವಸೂಲಿ ಮಾಡುವುದಿಲ್ಲ. ಈ ಬಗ್ಗೆ ಮುಂದಿನ ಗ್ರಾಮ ಪಂಚಾಯಿತಿ ಸಭೆಯಲ್ಲಿ ವಿಷಯ ಪ್ರಸ್ತಾಪಿಸಿ ಈ ಕುರಿತು ನಿರ್ಣಯವನ್ನು ಕೈಗೊಳ್ಳಲಾಗುವುದು ಎಂದು ರೈತರಿಗೆ ಭರವಸೆ ನೀಡಿದರು.
ರೈತ ಸಂಘದ ತಾಲೂಕು ಅಧ್ಯಕ್ಷ ತಾದೂರು ಮಂಜುನಾಥ್, ಜಿಲ್ಲಾ ಉಪಾಧ್ಯಕ್ಷ ವೀರಾಪುರ ಮುನಿನಂಜಪ್ಪ, ಜಂಗಮಕೋಟೆ ಹೋಬಳಿ ಅಧ್ಯಕ್ಷ ದೇವರಾಜ್, ಸುಂಡ್ರಹಳ್ಳಿ ಬೀರಪ್ಪ, ಆಂಜಿನಪ್ಪ, ಸುರೇಶ್, ಸುಬ್ರಮಣಿ ಇನ್ನಿತರೆ ರೈತ ಮುಖಂಡರು ಹಾಜರಿದ್ದರು.