Sidlaghatta : ಶಿಡ್ಲಘಟ್ಟ ನಗರದ ಸರ್ಕಾರಿ ಪ್ರೌಢಶಾಲೆಯಲ್ಲಿ ಭಾನುವಾರ ಶಿಡ್ಲಘಟ್ಟ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ಮತಗಟ್ಟೆಗಳ (Election Polling Booth) ಅಧಿಕಾರಿಗಳಿಗೆ ತರಬೇತಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಜಿಲ್ಲಾಧಿಕಾರಿ ಪಿ.ಎನ್.ರವೀಂದ್ರ ಭೇಟಿ ನೀಡಿ ತರಬೇತಿ ಪಡೆಯುತ್ತಿರುವ ಮತಗಟ್ಟೆ ಅಧಿಕಾರಿಗಳೊಂದಿಗೆ ಚರ್ಚಿಸಿದರು.
ಪಿ.ಆರ್.ಒ ಮತ್ತು ಎ.ಪಿ.ಆರ್.ಒ ಗಳಿಗೆ ಹಮ್ಮಿಕೊಂಡಿದ್ದ ತರಬೇತಿಯಲ್ಲಿ ಬೆಳಗಿನ ಅವಧಿಯಲ್ಲಿ ಪಿ.ಪಿ.ಟಿ ವಿವರಣೆಗಳ ಮೂಲಕ ವಿಷಯ ಪರಿಣಿತರು ಮಾಹಿತಿ ನೀಡಿದರೆ, ಮಧ್ಯಾಹ್ನದ ಅವಧಿಯಲ್ಲಿ EVM Machine ಗಳನ್ನು ಇಟ್ಟು ಪ್ರಾತ್ಯಕ್ಷಿಕವಾಗಿ ತರಬೇತಿಯನ್ನು ಕೊಡಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಸಹಾಯಕ ಚುನಾವಣಾಧಿಕಾರಿ ಜಾವಿದಾ ನಸೀಮಾ ಖಾನಂ, ಲೋಕಸಭಾ ಚುನಾವಣೆಯನ್ನು ಪಾರದರ್ಶಕ ಹಾಗೂ ನಿಷ್ಪಕ್ಷಪಾತವಾಗಿ ನಡೆಸಲು ಶಿಡ್ಲಘಟ್ಟ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಮತಗಟ್ಟೆ ಅಧಿಕಾರಿ ಹಾಗೂ ಸಹಾಯಕ ಮತಗಟ್ಟೆ ಅಧಿಕಾರಿಗಳಿಗೆ ಪ್ರಥಮ ಹಂತದ ತರಬೇತಿ ನೀಡಲಾಗುತ್ತಿದೆ.
ಚುನಾವಣೆ ದಿನದಂದು ಮತಗಟ್ಟೆಗಳಲ್ಲಿ ಅಧಿಕಾರಿಗಳು ಕರ್ತವ್ಯ ನಿರ್ವಹಿಸುವ ಬಗ್ಗೆ ಮೊದಲ ಹಂತದ ತರಬೇತಿ ನೀಡಲಾಗುತ್ತಿದೆ. ತರಬೇತಿಯಲ್ಲಿ 519 ಮಂದಿ ಪಾಲ್ಗೊಂಡಿದ್ದರು. ಇದರಲ್ಲಿ 235 ಮತಗಟ್ಟೆ ಅಧಿಕಾರಿಗಳು ಮತ್ತು 284 ಸಹಾಯಕ ಮತಗಟ್ಟೆ ಅಧಿಕಾರಿಗಳು ಎಂದರು.
ಮತದಾನ ನಡೆಯುವ ವೇಳೆ ಮತದಾರರಿಗೆ ಯಾವುದೇ ಅಡತಡೆಯಾಗದಂತೆ ಅಧಿಕಾರಿಗಳು ಕರ್ತವ್ಯ ನಿರ್ವಹಿಸುವಂತೆ ಪೂರ್ವಭಾವಿಯಾಗಿ ಎರಡು ಹಂತದ ತರಬೇತಿ ನೀಡಲಾಗುವುದು. ಮೊದಲ ಹಂತದಲ್ಲಿ ಪಾಲ್ಗೊಂಡಿರುವ ಅಧಿಕಾರಿಗಳು ಮತಯಂತ್ರಗಳ ಮಾದರಿ, ಬಳಕೆ ಮಾಡುವ ವಿಧಾನ ಕುರಿತು ನುರಿತ ತಜ್ಞರಿಂದ ತರಬೇತಿ ಪಡೆದುಕೊಳ್ಳಲಿದ್ದಾರೆ ಎಂದು ಹೇಳಿದರು.
ತಾಲ್ಲೂಕು SVEEP ಸಮಿತಿ ಅಧ್ಯಕ್ಷ ಜಿ.ಮುನಿರಾಜ, ತಹಶೀಲ್ದಾರ್ ಬಿ.ಎನ್.ಸ್ವಾಮಿ, ಕ್ಷೇತ್ರ ಶಿಕ್ಷಣಾಧಿಕಾರಿ ನರೇಂದ್ರಕುಮಾರ್ ಹಾಜರಿದ್ದರು.