Sidlaghatta : ಮುಂಬರುವ ವಿಧಾನ ಸಭಾ ಚುನಾವಣೆಯಲ್ಲಿ ಹೆಚ್ಚೆಚ್ಚು ಜನ ಮತದಾನ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳಲು ಅನುಕೂಲವಾಗುವ ದೃಷ್ಟಿಯಿಂದ ಮಹಾನಗರ ಪಾಲಿಕೆ ಕಚೇರಿ ಬಲಭಾಗದಲ್ಲಿರುವ ನೌಕರರ ಸಭಾಂಗಣದ ಕಟ್ಟಡದಲ್ಲಿ ವಿದ್ಯುನ್ಮಾನ ಮತ ಯಂತ್ರ ಮತದಾನ ಪ್ರಾತ್ಯಕ್ಷಿಕೆ ಆರಂಭಿಸಲಾಗಿದೆ ಎಂದು ನಗರಸಭೆ ಪೌರಾಯುಕ್ತ ಶ್ರೀಕಾಂತ್ ತಿಳಿಸಿದರು.
ನಗರಸಭೆಯಲ್ಲಿ ನಡೆಸುತ್ತಿರುವ ವಿದ್ಯುನ್ಮಾನ ಮತ ಯಂತ್ರ ಮತದಾನ ಪ್ರಾತ್ಯಕ್ಷಿಕೆಯ ಕುರಿತಾಗಿ ಅವರು ಮಾತನಾಡಿದರು.
ಸುಮಾರು ಹತ್ತು ದಿನಗಳ ಕಾಲ ಪ್ರತಿ ದಿನ ಬೆಳಿಗ್ಗೆ 10.30ರಿಂದ ಸಂಜೆ 5.30ರವರೆಗೆ ಈ ಪ್ರಾತ್ಯಕ್ಷಿಕೆ ನಡೆಯಲಿದೆ.
ಚುನಾವಣಾ ಆಯೋಗದ ಮಾರ್ಗಸೂಚಿಯಂತೆ ರಾಜಕೀಯ ಮುಖಂಡರು, ವಿವಿಧ ಸಂಘ-ಸಂಸ್ಥೆಗಳು ಹಾಗೂ ನಗರಸಭೆ ವ್ಯಾಪ್ತಿಯ ಸಾರ್ವಜನಿಕರಿಗಾಗಿ ಮಾದರಿ ಮತಗಟ್ಟೆ ಕೇಂದ್ರಗಳನ್ನು ರಚಿಸಿ, ವಿದ್ಯುನ್ಮಾನ ಮತ ಯಂತ್ರ ಪ್ರಾತ್ಯಕ್ಷಿಕೆ ನೀಡಲಾಗುತ್ತಿದೆ ಎಂದು ಹೇಳಿದರು.
ಪ್ರಾತ್ಯಕ್ಷಿಕೆ ವೇಳೆ ನುರಿತ ತರಬೇತಿದಾರರು ಸಾರ್ವಜನಿಕರಿಗೆ ಮತಯಂತ್ರ ಬಳಕೆ ಕುರಿತು ಹಾಗೂ ಮತದಾನವನ್ನು ಖಚಿತಪಡಿಸಿಕೊಳ್ಳುವ ಬಗ್ಗೆ ತಿಳಿಸಿಕೊಡುತ್ತಾರೆ ಎಂದರು.
ತರಬೇತುದಾರ ತಾಲ್ಲೂಕು ಕಚೇರಿಯ ಪ್ರಥಮ ದರ್ಜೆ ಸಹಾಯಕ ರವಿ ಹಾಗೂ ನಗರಸಭೆ ಸಿಬ್ಬಂದಿ ಹಾಜರಿದ್ದರು.