E Timmasandra, Sidlaghatta : ಯಾವುದೇ ನಾಮಫಲಕವಿಲ್ಲದೆ ವೈದ್ಯಕೀಯ ಸೇವೆ ನೀಡುತ್ತಿದ್ದ ವ್ಯಕ್ತಿಗೆ ಎಚ್ಚರಿಕೆ ನೀಡಲು ತಾಲ್ಲೂಕು ಆರೋಗ್ಯ ಅಧಿಕಾರಿಗಳ ತಂಡ ಸೋಮವಾರ ಆ ಪ್ರದೇಶವನ್ನು ಭೇಟಿ ಮಾಡಿ, ಕ್ಲಿನಿಕ್ ಅನ್ನು ಮುಚ್ಚಿಸಿದೆ.
ತಾಲ್ಲೂಕಿನ ಈ ತಿಮ್ಮಸಂದ್ರ ಗ್ರಾಮದಲ್ಲಿ ವ್ಯಕ್ತಿಯೋರ್ವರು ಯಾವುದೇ ಪರವಾನಗಿ ಇಲ್ಲದೆ ಜನರಿಗೆ ವೈದ್ಯಕೀಯ ಚಿಕಿತ್ಸೆ ನೀಡುತ್ತಿರುವ ಬಗ್ಗೆ ದೂರು ಲಭ್ಯವಾಯಿತು. ಈ ಹಿನ್ನೆಲೆಯಲ್ಲಿ ತಾಲ್ಲೂಕು ಆರೋಗ್ಯಾಧಿಕಾರಿ ಡಾ. ವೆಂಕಟೇಶಮೂರ್ತಿ ಅವರ ನೇತೃತ್ವದ ತಂಡ ಕ್ಲಿನಿಕ್ ಪರಿಶೀಲನೆ ನಡೆಸಿತು.
ಪರಿಶೀಲನೆಯ ವೇಳೆ, ಬಾಗೇಪಲ್ಲಿಯ ಟಿ.ಬಿ. ರೋಡ್ ನಿವಾಸಿ ರಾಮಮೂರ್ತಿ ಎಂಬುವವರು ಪ್ರತಿದಿನ ಬಾಗೇಪಲ್ಲಿಯಿಂದ ತಿಮ್ಮಸಂದ್ರಕ್ಕೆ ಬಂದು, ಸುತ್ತಮುತ್ತಲಿನ ಗ್ರಾಮಸ್ಥರಿಗೆ ತಮ್ಮ ದ್ವಿಚಕ್ರ ವಾಹನದಲ್ಲಿ ಭೇಟಿ ನೀಡಿ ಚಿಕಿತ್ಸೆ ನೀಡುತ್ತಿರುವುದಾಗಿ ಒಪ್ಪಿಕೊಂಡಿದ್ದಾರೆ.
ಡಾ. ವೆಂಕಟೇಶಮೂರ್ತಿ ಅವರು ರಾಮಮೂರ್ತಿಗೆ ತಕ್ಷಣವೇ ಎಚ್ಚರಿಕೆ ನೀಡಿದರು ಮತ್ತು ಕಾನೂನುಬಾಹಿರವಾಗಿ ಕಾರ್ಯನಿರ್ವಹಿಸುತ್ತಿದ್ದ ಆ ಕ್ಲಿನಿಕ್ ಅನ್ನು ಬಂದ್ ಮಾಡಿದರು.
ಈ ಸಂದರ್ಭ ತಿಮ್ಮಸಂದ್ರ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯ ಡಾ. ರೋಷನ್ ಮತ್ತು ತಾಲ್ಲೂಕು ಆರೋಗ್ಯ ನಿರೀಕ್ಷಣಾಧಿಕಾರಿ ದೇವರಾಜ್ ಉಪಸ್ಥಿತರಿದ್ದರು.