Sidlaghatta : ಶಿಡ್ಲಘಟ್ಟ ತಾಲೂಕಿನ ಶೇಕಡ 60 ರಿಂದ 70 ರಷ್ಟು ವಾಹನಗಳಿಗೆ ವಿಮೆ ಸೌಲಭ್ಯವಿಲ್ಲ ಚಾಲಕರ ಬಳಿ ಪರವಾನಿಗೆ ಇಲ್ಲ ಎಂಬುದು ಇಲಾಖೆಯ ಗಮನಕ್ಕೆ ಬಂದಿದೆ ಚಾಲಕರು ಮತ್ತು ವಾಹನಗಳ ಮಾಲೀಕರು ವಿಮೆ ಮತ್ತು ಚಾಲನಾ ಪರವಾನಿಗೆಯನ್ನು ಪಡೆಯದಿದ್ದ ಪಕ್ಷದಲ್ಲಿ ಕಠಿಣ ಕಾನೂನು ಕ್ರಮ ಜರುಗಿಸುವ ಜೊತೆಗೆ ದಂಡ ವಿಧಿಸಲಾಗುವುದು ಎಂದು ಚಿಂತಾಮಣಿ ಉಪ ವಿಭಾಗದ ಡಿವೈಎಸ್‌ಪಿ ಮುರಳೀಧರ್ ಎಚ್ಚರಿಸಿದರು.
ನಗರದ ಗ್ರಾಮಂತರ ಪೊಲೀಸ್ ಠಾಣಾ ಆವರಣದಲ್ಲಿ ವಾಹನ ಚಾಲಕರಿಗೆ ಸಂಚಾರದ ನಿಯಮಗಳ ಕುರಿತು ಅರಿವು ಮತ್ತು ಜಾಗೃತಿ ಮೂಡಿಸಿ ಅವರು ಮಾತನಾಡಿದರು.
ಶಿಡ್ಲಘಟ್ಟದಲ್ಲಿ ರಸ್ತೆ ಸಂಚಾರ ನಿಯಮಗಳ ಪಾಲನೆ ಸಮರ್ಪಕವಾಗಿ ಆಗುತ್ತಿಲ್ಲ ಅದನ್ನು ಇಲಾಖೆ ಗಂಭೀರವಾಗಿ ಪರಿಗಣಿಸಿದೆ. ದ್ವಿಚಕ್ರ ವಾಹನ ಸವಾರರು ಕಡ್ಡಾಯವಾಗಿ ಹೆಲ್ಮೆಟ್ ಧರಿಸಬೇಕು ಆಟೋ ಟ್ರ್ಯಾಕ್ಟರ್ ಮತ್ತು ಇನ್ನಿತರೆ ವಾಹನ ಚಾಲಕರು ಕೂಡಲೇ ತಮ್ಮ ವಾಹನಗಳಿಗೆ ವಿಮೆ ಸೌಲಭ್ಯವನ್ನು ಮಾಡಿಕೊಂಡು ಡ್ರೈವಿಂಗ್ ಲೈಸೆನ್ಸ್ ಹೊಂದಿರಬೇಕು. ಇಲ್ಲದಿದ್ದ ಪಕ್ಷದಲ್ಲಿ ದಂಡ ವಿಧಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.
18 ವರ್ಷದ ಕಡಿಮೆ ವಯಸ್ಸಿನ ಮಕ್ಕಳು ದ್ವಿಚಕ್ರ ವಾಹನ ಚಾಲನೆ ಮಾಡುತ್ತಿದ್ದಾರೆ. ಜೊತೆಗೆ ಒಂದು ವಾಹನದಲ್ಲಿ ಮೂರರಿಂದ ನಾಲ್ಕು ಜನ ಸವಾರಿ ಮಾಡುತ್ತಿದ್ದು ಪೊಲೀಸ್ ಇಲಾಖೆ ಕಣ್ಣು ತಪ್ಪಿಸಿ ಹೋಗುತ್ತೇವೆ ಎಂದರೆ ಅದು ನಿಮ್ಮ ಭ್ರಮೆ ಇಲಾಖೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಿದೆ. ವಾಹನ ಸವಾರರು ಇಲಾಖೆಯೊಂದಿಗೆ ಸಹಕರಿಸಿ ಸಂಚಾರ ನಿಯಮಗಳನ್ನು ಪಾಲಿಸಬೇಕೆಂದು ಸೂಚಿಸಿದರು.
ವಾಹನ ಸವಾರರಿಗೆ ಮಧ್ಯವರ್ತಿಗಳ ಹಾವಳಿ ಇಲ್ಲದೆ ವಿಮೆ ಮತ್ತು ಡ್ರೈವಿಂಗ್ ಲೈಸೆನ್ಸ್ ಮಾಡಿಕೊಳ್ಳಲು ಇಲಾಖೆಯಿಂದ ಸಹಕಾರ ನೀಡಲಾಗುತ್ತಿದೆ. ಅದಕ್ಕಾಗಿ ತಾಲೂಕು ನೋಡೆಲ್ ಅಧಿಕಾರಿಗಳನ್ನು ನೇಮಕ ಮಾಡಲಾಗಿದೆ. ತಾವು ಪೂರಕ ದಾಖಲೆಗಳನ್ನು ಒದಗಿಸಿದರೆ ಡ್ರೈವಿಂಗ್ ಲೈಸೆನ್ಸ್ ತ್ವರಿತವಾಗಿ ಲಭ್ಯವಾಗುತ್ತದೆ ಎಂದರು.
ಸಮಾಜದಲ್ಲಿ ಜಾತಿ ಮತ ಭೇದ ಮರೆತು ಎಲ್ಲರೂ ಅನ್ಯೋನ್ಯವಾಗಿ ಜೀವನ ನಡೆಸಬೇಕು. ಹಿಂದೂ ಮುಸ್ಲಿಮರ ರಕ್ತ ಒಂದೇ ಆಗಿದೆ ಎಲ್ಲಾದರೂ ಅಪಘಾತ ಸಂಭವಿಸಿದರೆ ಎಲ್ಲರ ರಕ್ತವನ್ನು ಬಳಸುತ್ತೇವೆ ಮತ್ತೆ ಯಾಕೆ ಬೇದಭಾವ ಎಂದು ಪ್ರಶ್ನಿಸಿದ ಅವರು ಶಿಡ್ಲಘಟ್ಟ ತಾಲೂಕಿನಲ್ಲಿ ಎಲ್ಲಾ ಸಮಾಜದವರು ಶಾಂತಿ ಸೌಹಾರ್ದತೆಯಿಂದ ಜೀವನ ನಡೆಸುತ್ತಿರುವುದು ಜಿಲ್ಲೆಯಲ್ಲಿ ಮಾದರಿಯಾಗಿದ್ದಾರೆ ಎಂದು ಪ್ರಶಂಸಿಸಿದರು.
ಸಭೆಯಲ್ಲಿ ಶಿಡ್ಲಘಟ್ಟ ಗ್ರಾಮಾಂತರ ಪೊಲೀಸ್ ಠಾಣೆಯ ಪಿಎಸ್‌ಐ ಸತೀಶ್, ನಗರ ಪೊಲೀಸ್ ಠಾಣೆಯ ಪಿಎಸ್‌ಐ ವೇಣುಗೋಪಾಲ್ ಮತ್ತು ವಾಹನ ಚಾಲಕರು ಮತ್ತು ಮಾಲೀಕರು ಉಪಸ್ಥಿತರಿದ್ದರು.