ಶಿಡ್ಲಘಟ್ಟ ತಾಲ್ಲೂಕಿನ ಹರಳಹಳ್ಳಿಯಲ್ಲಿ ಕೃಷಿ ಹೊಂಡಕ್ಕೆ ತಾಯಿ ಮತ್ತು ಮಗು ಬಿದ್ದು ಸಾವನ್ನಪ್ಪಿರುವ ಘಟನೆ ಗುರುವಾರ ಸಂಜೆ ನಡೆದಿದೆ. ಹರಳಹಳ್ಳಿಯ ಲಕ್ಷ್ಮಣ್‌ಗೌಡ ಅವರ ಪತ್ನಿ 26 ವರ್ಷದ ನವಲತ ಹಾಗೂ 5 ವರ್ಷದ ಪುತ್ರ ಅಂಜನ್‌ಗೌಡ ಮೃತಪಟ್ಟ ದುರ್ಧೈವಿಗಳು.
ತಾಲ್ಲೂಕಿನ ಹರಳಹಳ್ಳಿಯ ತನ್ನ ಸಂಬಂಧಿಕರೆ ಆದ ಲಕ್ಷ್ಮಣ್‌ಗೌಡ ಅವರನ್ನು ಏಳು ವರ್ಷಗಳ ಹಿಂದೆ ಮದುವೆಯಾಗಿದ್ದ ನವಲತಾಳಿಗೆ ಐದು ವರ್ಷದ ಅಂಜನ್‌ಗೌಡ ಎಂಬ ಮಗುವಿತ್ತು.
ಎಂದಿನಂತೆ ತೋಟದಲ್ಲಿ ಏನೋ ಕೆಲಸಕ್ಕೆಂದು ಹೋಗಿದ್ದಾಗ ಮಗು ಕೃಷಿಹೊಂಡಕ್ಕೆ ಬಿದ್ದಿದ್ದು ಮಗುವನ್ನು ರಕ್ಷಿಸಲೆಂದು ತಾಯಿಯೂ ಕೃಷಿಹೊಂಡಕ್ಕೆ ಇಳಿದಾಗ ಈ ಘಟನೆ ನಡೆದಿರಬಹುದೆಂದು ಲಕ್ಷ್ಮಣಗೌಡನ ಕುಟುಂಬದವರು ಹೇಳುತ್ತಿದ್ದಾರೆ.
ಆದರೆ ಮೃತ ನವಲತಾಳ ತಾಯಿ ಯಲಹಂಕ ಬಳಿಯ ಅಮೃತಹಳ್ಳಿಯ ವಾಸಿ ಶೋಭ ಅವರು ಶಿಡ್ಲಘಟ್ಟ ಗ್ರಾಮಾಂತರ ಠಾಣೆಗೆ ದೂರು ನೀಡಿದ್ದು, ವರದಕ್ಷಿಣೆ ಕಿರುಕುಳದಿಂದಲೆ ನನ್ನ ಮಗಳು ಹಾಗೂ ಮೊಮ್ಮಗು ಸಂಪಿಗೆ ಬಿದ್ದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ದೂರನ್ನು ದಾಖಲಿಸಿದ್ದಾರೆ.
ನನ್ನ ತಮ್ಮನೇ ಆದ ಲಕ್ಷ್ಮಣ್‌ಗೌಡನಿಗೆ ಏಳು ವರ್ಷಗಳ ಹಿಂದೆ ನನ್ನ ಮಗಳನ್ನು ಮದುವೆ ಮಾಡಿಕೊಟ್ಟಾಗ 100 ಗ್ರಾಂ ಚಿನ್ನಾಭರಣ ಹಾಗೂ 1.5 ಲಕ್ಷ ಹಣ ಕೊಟ್ಟಿದ್ದೆವು. ಆದರೆ ನಂತರದ ದಿನಗಳಲ್ಲೂ ವರದಕ್ಷಿಣೆಗೆಂದು ಲಕ್ಷ್ಮಣ್‌ಗೌಡ, ಅವರ ತಂದೆ ರಾಮಣ್ಣ, ಅಮ್ಮ ಪಿಳ್ಳಮ್ಮ ಹಾಗೂ ಕುಟುಂಬದವರು ದಿನಾಲೂ ಕಿರುಕುಳ ಕೊಡುತ್ತಿದ್ದರು.
ಈ ಬಗ್ಗೆ ಹಲವು ಬಾರಿ ಸಂಧಾನ ಮಾತುಕತೆ ನಡೆಸಿ ಮಗಳಿಗೆ ಧೈರ್ಯ ತುಂಬಲಾಗಿತ್ತು. ಇತ್ತೀಚೆಗೆ ಮಗಳು ನನಗೆ ಕರೆ ಮಾಡಿ ನನ್ನಿಂದ ಮನೆಯವರ ಕಿರುಕುಳ ತಾಳಲಾಗುತ್ತಿಲ್ಲ. ಸಾಯುತ್ತೇನೆಂದು ಹೇಳಿ ಅತ್ತುಕೊಂಡಿದ್ದಳು.
ನಾನು ಬಂದು ಮಾತನಾಡುತ್ತೇನೆ ಎಲ್ಲವನ್ನೂ ಸರಿಮಾಡುತ್ತೇವೆಂದು ಹೇಳಿ ಸಾಯುವಂತ ನಿರ್ಧಾರ ಮಾಡಬೇಡ, ಮಗುವಿನ ಮುಖ ನೋಡಿಕೊಂಡು ಅವನಿಗಾದರೂ ಬದುಕಿರು ಎಂದು ಹೇಳಿದ್ದೆಯಾದರೂ ಗಂಡ ಮಾವ ಅತ್ತೆ ಬಾಮೈದುನರ ಕಿರುಕುಳದಿಂದ ಇಬ್ಬರೂ ಮೃತಪಟ್ಟಿದ್ದಾರೆ ಎಂದು ದೂರಿದ್ದಾರೆ. ಸಂಪಿನಿಂದ ಹೊರ ತೆಗೆದ ಶವಗಳನ್ನು ಸಾರ್ವಜನಿಕ ಆಸ್ಪತ್ರೆಯಲ್ಲಿ ಶವ ಪರೀಕ್ಷೆ ನಡೆಸಿ ದೂರು ದಾಖಲಿಸಿಕೊಳ್ಳಲಾಗಿದೆ.
ಡಿವೈಎಸ್ಪಿ ಚಂದ್ರಶೇಖರ್, ಸಿಪಿಐ ಧರ್ಮೇಗೌಡ, ಎಸ್‌ಐ ಸತೀಶ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.