Sidlaghatta : ಶಿಡ್ಲಘಟ್ಟ ನಗರದ ಕ್ರೆಸೆಂಟ್ ವಿದ್ಯಾಸಂಸ್ಥೆಯಲ್ಲಿ ಭಾನುವಾರ ಜಿಲ್ಲಾಮಟ್ಟದ ಚೆಸ್ ಚಾಂಪಿಯನ್ ಶಿಪ್ ಟೂರ್ನಮೆಂಟ್ ಆಯೋಜಿಸಲಾಗಿತ್ತು. ಪಾಂಚಜನ್ಯ ಅಸೋಸಿಯೇಷನ್, ಚಾಣಕ್ಯ ಚೆಸ್ ಅಕಾಡೆಮಿ ಹಾಗೂ ಕ್ರೆಸೆಂಟ್ ಶಾಲೆಯ ಸಹಯೋಗದಲ್ಲಿ ನಡೆದ ಚೆಸ್ ಟೂರ್ನಮೆಂಟ್ ಅನ್ನು ಹಿರಿಯ ಸಿವಿಲ್ ನ್ಯಾಯಾಧೀಶ ಮಹಮ್ಮದ್ ರೋಷನ್ ಷಾ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಹಿರಿಯ ಸಿವಿಲ್ ನ್ಯಾಯಾಧೀಶ ಮಹಮ್ಮದ್ ರೋಷನ್ ಷಾ, “ಚೆಸ್ ಚತುರರ ಆಟವಾಗಿದೆ. ಇದರಲ್ಲಿ ಭಾಗವಹಿಸುವುದರಿಂದ ಮಕ್ಕಳ ಬುದ್ಧಿಶಕ್ತಿ, ನೆನಪಿನ ಶಕ್ತಿ, ಸೃಜನಶೀಲತೆ ಬೆಳೆಯುತ್ತದೆ. ಚೆಸ್ ಏಕಾಗ್ರತೆ ಬಯಸುವ ಮತ್ತು ಬುದ್ಧಿ ಚುರುಕುಗೊಳಿಸುವ ಆಟ. ಚೆಸ್ ಆಟವು ಸಾಕಷ್ಟು ಚಲನೆಗಳು ಮತ್ತು ತಂತ್ರಗಳನ್ನು ಒಳಗೊಂಡಿರುತ್ತದೆ ಮತ್ತು ಕಾಲಾನಂತರದಲ್ಲಿ ನೆನಪನ್ನು ತೀಕ್ಷ್ಣಗೊಳಿಸಲು ಮತ್ತು ಜೀವನದ ಪ್ರತಿಯೊಂದು ಕ್ಷೇತ್ರದಲ್ಲೂ ಹೆಚ್ಚಿನ ದಕ್ಷತೆಯನ್ನು ತರಲು ಸಹಾಯ ಮಾಡುತ್ತದೆ” ಎಂದು ಹೇಳಿದರು.
ಮೂಳೆತಜ್ಞ ಡಾ.ಅಜಿತ್, ನರರೋಗ ತಜ್ಞ ಡಾ.ಅಭಿಷೇಕ್, ಚೆಸ್ ಅಸೋಸಿಯೇಷನ್ ಜಿಲ್ಲಾ ಕಾರ್ಯದರ್ಶಿಗಳಾದ ಸುರೇಶ್ ಬಾಬು, ಮುಸ್ತಾಕ್, ಟಿ.ಟಿ.ನರಸಿಂಹಪ್ಪ, ಕ್ರೆಸೆಂಟ್ ವಿದ್ಯಾಸಂಸ್ಥೆಯ ಕಾರ್ಯದರ್ಶಿ ಮಹಮ್ಮದ್ ಅನ್ಸಾರಿ, ಡಾಲ್ಫಿನ್ ವಿದ್ಯಾಸಂಸ್ಥೆ ಅಧ್ಯಕ್ಷ ಎ.ನಾಗರಾಜ್ ಹಾಜರಿದ್ದರು.