ಶಿಡ್ಲಘಟ್ಟ ತಾಲ್ಲೂಕಿನ ದೇವರಮಳ್ಳೂರು ಗ್ರಾಮದಲ್ಲಿ 30 ದಿನಗಳ ಧನುರ್ಮಾಸದ ಪೂಜೆಯ ನಂತರ ಶನಿವಾರ ಮಕರ ಸಂಕ್ರಾಂತಿ ಹಬ್ಬದ ದಿನ ಆತ್ಮರಾಮ ಸ್ವಾಮಿ ಉತ್ಸವವನ್ನು ನಡೆಸಲಾಯಿತು.
ಗ್ರಾಮದ ಪ್ರಮುಖ ಬೀದಿಗಳಲ್ಲಿ ನಾದಸ್ವರ ವಾದನದೊಂದಿಗೆ ಭಜನೆ ತಂಡದವರ ಹಾಡುಗಳೊಂದಿಗೆ ದೇವರನ್ನು ಮೆರವಣಿಗೆ ಮಾಡಲಾಯಿತು.
ಗ್ರಾಮದಲ್ಲಿನ ಶಾಸನ ಕಲ್ಲುಗಳನ್ನು ಪೂಜಿಸಿ, ಅದನ್ನು ತೊಳೆದ ನೀರಿನ ಮೇಲೆ ರಾಸುಗಳನ್ನು ಓಡಾಡಿಸಿದಲ್ಲಿ ಒಂದು ವರ್ಷ ಕಾಲ ಯಾವುದೇ ರೋಗರುಜಿನಗಳು ಬರುವುದಿಲ್ಲ ಇದು ತಲತಲಾಂತರದಿಂದ ನಡೆದು ಕೊಂಡು ಬರುತ್ತಿರುವ ನಮ್ಮ ಊರಿನ ಸಂಪ್ರದಾಯ ಎನ್ನುತ್ತಾರೆ ಈ ಗ್ರಾಮದ ಹಿರಿಯರಾದ ಶ್ರೀರಾಮಪ್ಪ.
ಇಂದು ವಿಶೇಷವಾಗಿ ರಾಸುಗಳನ್ನು ಸಿಂಗರಿಸಿ ಸಂಜೆ ಮೆರವಣಿಗೆ ಮಾಡಿ ಕಾಟಪರಾಯನ ಗುಡಿ ಬಳಿ ಅವರೆಕಾಯಿ ಕಡಲೆಕಾಯಿ ಬೇಯಿಸಿ ಮೆರವಣಿಗೆಯಲ್ಲಿ ಬಂದವರಿಗೆ ಪ್ರಸಾದವಾಗಿ ವಿನಿಯೋಗಿಸಲಾಯಿತು. ಹಾಗೆಯೇ ಗ್ರಾಮದ ಯುವಕರು ಸಂಪ್ರದಾಯದಂತೆ ಬೆಂಕಿ ಭರಾಟೆಗನ್ನು ತಿರುಗಿಸಿ ಆಚರಣೆ ಮಾಡಲಾಯಿತು.
ಗ್ರಾಮದ ಮುಖಂಡರಾದ ಹಿರಿಯ ವಕೀಲ ಸುಬ್ರಮಣಿ, ಬಿಎಸ್ ಮುನಿರಾಜು, ವೇಣುಗೋಪಾಲ್, ಮುನಿರಾಜು, ಭೈರಪ್ಪ, ಅಕ್ಕಲಪ್ಪ, ಮುನಿರಾಜು, ರಾಮಣ್ಣ, ಮನೋಹರ್, ಮೂರ್ತಿ ಉತ್ಸವದಲ್ಲಿ ಪಾಲ್ಗೊಂಡಿದ್ದರು.