Sidlaghatta : ಶಿಡ್ಲಘಟ್ಟ ನಗರದಲ್ಲಿ ದೀಪಾವಳಿ ಹಬ್ಬದ ವ್ಯಾಪಾರ ಜೋರಾಗಿದ್ದು ತಾಲೂಕಿನ ಜನ ಅದ್ಧೂರಿಯಾಗಿ ಆಚರಿಸಲು ಸಿದ್ಧತೆ ನಡೆಸಿದ್ದಾರೆ.
ಕಳೆದ 2 ವರ್ಷಗಳಿಂದ ಕೊರೊನಾದಿಂದ ಸದ್ದಡಗಿದ್ದ ಬೆಳಕಿನ ಹಬ್ಬ ದೀಪಾವಳಿ ಸಂಭ್ರಮ ಈ ಬಾರಿ ಹಿಂದಿರುಗಿದೆ. ಸತತ ಮಳೆಯಿಂದ ಕೆರೆ – ಕುಂಟೆ ತುಂಬಿಕೊಂಡಿದ್ದು, ಖುಷಿಯಿಂದಲೇ ಜನರು ಹಬ್ಬದ ಖರೀದಿಗೆ ಮುಗಿಬಿದ್ದಿದ್ದರು. ಇದರೊಂದಿಗೆ ಬೆಲೆ ಏರಿಕೆ ಬಿಸಿಯೂ ಗ್ರಾಹಕರಿಗೆ ತಟ್ಟಿದೆ. ಪಟಾಕಿ ದರ ಕೂಡಾ ಸಿಕ್ಕಾಪಟ್ಟೆ ಏರಿಕೆಯಾಗಿದ್ದು, ಜನರ ಕೈ ಸುಡುತ್ತಿತ್ತು. ಇನ್ನೊಂದೆಡೆ ದೀಪಾವಳಿ ಹಬ್ಬದ ವಿಶೇಷ ಹಣತೆಗಳ ವ್ಯಾಪಾರ ಜೋರಾಗಿತ್ತು, ನೋಮದಾರ, ಅಡಿಕೆ ಗೊನೆ ಹೀಗೆ ಹಬ್ಬದ ಸಾಮಗ್ರಿಗಳ ಅಂಗಡಿಗಳೇ ಎಲ್ಲೆಲ್ಲೂ ಕಾಣಿಸುತ್ತಿದ್ದವು.
ಕೆಲವು ದಿನಗಳಿಂದ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದ ಸೇವಂತಿಗೆ, ಕನಕಾಂಬರ, ಚೆಂಡು ಹೂವು ಹಾಗೂ ಗುಲಾಬಿ ಹೂಗಳು ಹಾಳಾಗಿವೆ. ಇದರಿಂದ ಮಾರುಕಟ್ಟೆಗೆ ಬರುತ್ತಿರುವ ಹೂಗಳು ಹಾಳಾಗಿದ್ದು, ಖರೀದಿಗೆ ಗ್ರಾಹಕರು ಹಿಂದೇಟು ಹಾಕುತ್ತಿದ್ದರು. ಗುಣಮಟ್ಟದ ಹೂವಿಗೆ ಗ್ರಾಹಕರಿಂದ ಬೇಡಿಕೆ ಹೆಚ್ಚಿತ್ತು. ಹೀಗಾಗಿ ಹೂವಿನ ಬೆಲೆ ಸಾಮಾನ್ಯವಾಗಿ ಏರಿಕೆಯಾಗಿತ್ತು,
ಒಟ್ಟಾರೆ ಈ ಬಾರಿಯ ಬೆಳಕಿನ ಹಬ್ಬ ದೀಪಾವಳಿಯ ಹಬ್ಬದ ವ್ಯಾಪಾರ ವೈವಾಟು ಜೋರಾಗಿ ನಡೆಯುತ್ತಿರುವುದು ಕಂಡುಬಂದಿತು.