Sidlaghatta : ಭಾರತೀಯ ಸಂವಿಧಾನ ಶಿಲ್ಪಿ ಡಾ. ಬಾಬಾಸಾಹೇಬ್ ಅಂಬೇಡ್ಕರ್ ಅವರು ಹಿಂದೂ ಧರ್ಮವನ್ನು ತ್ಯಜಿಸಿ ಬೌದ್ಧ ಧರ್ಮವನ್ನು ಸ್ವೀಕರಿಸಿದ ದಿನವೇ ಧಮ್ಮಚಕ್ರ ಪ್ರವರ್ತನ ದಿನ. ಇದನ್ನು ಪ್ರಾಥಮಿಕವಾಗಿ ಪ್ರತಿ ವರ್ಷ ದೀಕ್ಷಾ ಭೂಮಿಯಲ್ಲಿ ಆಚರಿಸಲಾಗುತ್ತದೆ ಎಂದು ಜಿಲ್ಲಾ ಜಾಗೃತಿ ಸಮಿತಿ ಸದಸ್ಯ ಮೇಲೂರು ಮಂಜುನಾಥ್ ತಿಳಿಸಿದರು.
ಧಮ್ಮಚಕ್ರ ಪ್ರವರ್ತನ ದಿನದ ಅಂಗವಾಗಿ ಮಹಾರಾಷ್ಟ್ರದ ನಾಗಪುರದಲ್ಲಿರುವ ದೀಕ್ಷಾ ಭೂಮಿಗೆ ಯಾತ್ರೆ ಹೊರಟ ತಾಲ್ಲೂಕಿನ 54 ಮಂದಿಯಿರುವ ಬಸ್ ಗೆ ಶುಕ್ರವಾರ ನಗರದ ಪ್ರವಾಸಿ ಮಂದಿರದ ಬಳಿ ಚಾಲನೆ ನೀಡಿ ಅವರು ಮಾತನಾಡಿದರು.
ಪ್ರತಿವರ್ಷ ದೀಕ್ಷಾ ಭೂಮಿಗೆ ಹೋಗಲು ಸಮಾಜ ಕಲ್ಯಾಣ ಇಲಾಖೆ ನೆರವಾಗುತ್ತಿದೆ. ದೀಕ್ಷಾಭೂಮಿಯು ಮಹತ್ವದ ಯಾತ್ರಾ ಸ್ಥಳ ಮಾತ್ರವಲ್ಲದೆ ಜಾಗೃತಿ ಮತ್ತು ವಿಮೋಚನೆಯ ಸಂಕೇತವಾಗಿದೆ. ಒಂದು ಸ್ಥಳದಲ್ಲಿ ಈ ರೀತಿಯ ಸಾಮೂಹಿಕ ಮತಾಂತರವು ಇತಿಹಾಸದಲ್ಲಿ ಇದೇ ಮೊದಲನೆಯದು. ಅಂಬೇಡ್ಕರ್ ಅವರ ಜೀವನದಲ್ಲಿ ಮಹತ್ತರವಾದ ಪ್ರಾಮುಖ್ಯತೆಯನ್ನು ಹೊಂದಿರುವ ಎರಡು ಸ್ಥಳಗಳಲ್ಲಿ ದೀಕ್ಷಾಭೂಮಿ ಒಂದಾಗಿದೆ, ಇನ್ನೊಂದು ಮುಂಬೈನಲ್ಲಿರುವ ಚೈತ್ಯ ಭೂಮಿಯಾಗಿದೆ. ಈ ಪುಣ್ಯ ಸ್ಥಳಗಳನ್ನು ವೀಕ್ಷಿಸುವುದಲ್ಲದೆ ಅಂಬೇಡ್ಕರ್ ಬರೆದಿರುವುದನ್ನು ಸಹ ಎಲ್ಲರೂ ಓದಬೇಕು ಎಂದು ಹೇಳಿದರು.
ದ.ಸಂ.ಸ ಜಿಲ್ಲಾ ಸಂಚಾಲಕ ದಡಂಘಟ್ಟ ತಿರುಮಲೇಶ್, ಜಿಲ್ಲಾ ಸಂಘಟನಾ ಸಂಚಾಲಕ ಸೊಣ್ಣಪ್ಪ, ತಾಲ್ಲೂಕು ಸಂಚಾಲಕ ಹಿತ್ತಲಹಳ್ಳಿ ದೇವರಾಜು, ಸಂಘಟನಾ ಸಂಚಾಲಕ ಕೊಂಡಪ್ಪಗಾರಹಳ್ಳಿ ವಿಜಯಕುಮಾರ್, ಸುಬ್ರಮಣಿ ಹಾಜರಿದ್ದರು.