Sidlaghatta : ಪರಸ್ಪರ ಪ್ರೀತಿಸುತ್ತಿದ್ದ ಅಪ್ರಾಪ್ತ ಬಾಲಕಿ ಮತ್ತು ಯುವಕ ಇಬ್ಬರೂ ಮರದ ಕೊಂಬೆಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಶಿಡ್ಲಘಟ್ಟ ಗ್ರ್ರಾಮಾಂತರ ಠಾಣೆ ವ್ಯಾಪ್ತಿಯ ಚಿಕ್ಕದಾಸೇನಹಳ್ಳಿ-ಬೀರಪ್ಪನಹಳ್ಳಿ ಮಾರ್ಗದ ಮಾವಿನ ಮರದ ತೋಪಿನಲ್ಲಿ ನಡೆದಿದೆ.
ಚಿಂತಾಮಣಿ ತಾಲ್ಲೂಕಿನ ಬಟ್ಲಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯ ಸೀತಾರಾಮಪುರದ ವಾಸಿ ಕ್ಲೀನರ್ ವೃತ್ತಿ ಮಾಡುತ್ತಿದ್ದ ನವೀನ್(20)ಮೃತಪಟ್ಟ ಯುವಕ. ಆತನನ್ನು ಪ್ರೀತಿಸುತ್ತಿದ್ದ ಅಪ್ರಾಪ್ತೆಯೂ ಆತನೊಂದಿಗೆ ನೇಣಿಗೆ ಶರಣಾಗಿದ್ದಾಳೆ.
ಅಪ್ರಾಪ್ತ ಬಾಲಕಿಯು ಚಿಕ್ಕಬಳ್ಳಾಪುರ ಜಿಲ್ಲಾ ಕೇಂದ್ರದ ಬಾಲಕಿಯರ ಬಾಲ ಮಂದಿರದ ವಶದಲ್ಲಿದ್ದು ಜಿಲ್ಲಾ ಕೇಂದ್ರದ ಸರ್ಕಾರಿ ಪ್ರೌಢಶಾಲೆಯೊಂದರಲ್ಲಿ ಎಸ್.ಎಸ್.ಎಲ್.ಸಿ ಓದುತ್ತಿದ್ದಳು.
ಇವರಿಬ್ಬರ ಪ್ರೀತಿಗೆ ಕುಟುಂಬದವರಿಂದ ವಿರೋಧವಿದ್ದು ಕಳೆದ ಮಾರ್ಚ್ ನಲ್ಲಿ ಅಪ್ರಾಪ್ತೆ ಬಾಲಕಿಯ ಕುಟುಂಬದವರಿಂದ ಯುವಕ ನವೀನ್ ವಿರುದ್ದ ಚಿಂತಾಮಣಿಯ ಬಟ್ಲಹಳ್ಳಿಯ ಪೊಲೀಸ್ ಠಾಣೆಯಲ್ಲಿ ಫೋಕ್ಸೋ ಕೇಸು ದಾಖಲಿಸಲಾಗಿತ್ತು. ನವೀನ್ ನ್ಯಾಯಾಂಗ ಬಂಧನಲ್ಲಿದ್ದ.
ಇತ್ತೀಚೆಗಷ್ಟೆ ಜೈಲಿನಿಂದ ಬಿಡುಗಡೆ ಆಗಿದ್ದ ನವೀನ್ ಅಪ್ರಾಪ್ತ ಬಾಲಕಿಯನ್ನು ಭೇಟಿ ಮಾಡಿದ್ದು ಇಬ್ಬರೂ ಜತೆಗೂಡಿ ಚಿಕ್ಕದಾಸೇನಹಳ್ಳಿ-ಬೀರಪ್ಪನಹಳ್ಳಿ ಮಾರ್ಗದ ಮಾವಿನ ಮರದ ತೋಪಿಗೆ ಬಂದು ಆತ್ಮಹತ್ಯೆಗೆ ಶರಣಾಗಿದ್ದಾರೆ. ಶಾಲೆಗೆ ಬಂದಿದ್ದ ಅಪ್ರಾಪ್ತ ಬಾಲಕಿಯು ಶಾಲಾ ಸಮವಸ್ತ್ರದಲ್ಲೆ ಇದ್ದಳು, ಆಕೆಯ ಬ್ಯಾಗು ಪುಸ್ತಕಗಳು ಅಲ್ಲೇ ಬಿದ್ದಿವೆ.
ಸ್ಥಳಕ್ಕೆ ಡಿವೈಎಸ್ಪಿ ಮುರಳೀಧರ್, ಸಿಪಿಐ ಎಂ.ಶ್ರೀನಿವಾಸ್, ಗ್ರಾಮಾಂತರ ಠಾಣೆಯ ಎಸ್‌ಐ ಸತೀಶ್, ನಗರಠಾಣೆಯ ಎಸ್‌ಐ ಕೆ.ವೇಣುಗೋಪಾಲ್ ಹಾಗೂ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ತನಿಖೆಗೆ ಆಗ್ರಹ
ಫೋಕ್ಸೋ ಪ್ರಕರಣ ಸಂಬಂಧ ಅಪ್ರಾಪ್ತ ಬಾಲಕಿಯು ಚಿಕ್ಕಬಳ್ಳಾಪುರ ಜಿಲ್ಲಾ ಕೇಂದ್ರದಲ್ಲಿನ ಬಾಲಕಿಯರ ಬಾಲ ಮಂದಿರದ ವಶದಲ್ಲಿದ್ದು ಸರಕಾರಿ ಪ್ರೌಢಶಾಲೆಯೊಂದರಲ್ಲಿ 10 ನೇ ತರಗತಿ ಓದುತ್ತಿದ್ದಳು. ಶಾಲೆಗೆ ಹೋಗದೆ ಯುವಕನ ಜತೆ ಬಂದು ಆತ್ಮಹತ್ಯೆ ಮಾಡಿಕೊಂಡಿದ್ದು ಇದಕ್ಕೆ ಸರ್ಕಾರಿ ಪ್ರೌಢಶಾಲೆಯ ಮುಖ್ಯ ಶಿಕ್ಷಕರು ಮತ್ತು ಬಾಲಕಿಯರ ಬಾಲ ಮಂದಿರದ ಮೇಲ್ವಿಚಾರಕರ ನಿರ್ಲಕ್ಷ್ಯವೇ ಕಾರಣ ಎಂದು ಅಪ್ರಾಪ್ತ ಬಾಲಕಿಯ ಕುಟುಂಬದವರು ದೂರಿದ್ದಾರೆ.
ಶಾಲೆಗೆ ಗೈರು ಹಾಜರಿಯಾದರೆ ಕೂಡಲೆ ಶಿಕ್ಷಕರು ಬಾಲಕಿಯರ ಬಾಲ ಮಂದಿರದ ಮುಖ್ಯಸ್ಥರಿಗೆ ಮಾಹಿತಿ ನೀಡಬೇಕು ಮತ್ತು ಸಂಜೆ ಸಮಯಕ್ಕೆ ಸರಿಯಾಗಿ ಬಾಲ ಮಂದಿರಕ್ಕೆ ಬಾಲಕಿಯು ವಾಪಸ್ ಆಗದಿದ್ದಾಗ ಬಾಲ ಮಂದಿರದ ಮೇಲ್ವಿಚಾರಕರು ಪೋಷಕರಿಗೆ ಮಾಹಿತಿ ನೀಡಬೇಕಿತ್ತು ಮತ್ತು ಪೊಲೀಸರಿಗೆ ದೂರು ನೀಡಿ ಹುಡುಕುವ ಕೆಲಸ ಆಗಬೇಕಿತ್ತು ಆದರೆ ಆಗಿಲ್ಲ. ಈ ಬಗ್ಗೆ ತನಿಖೆ ಆಗಬೇಕೆಂದು ಆಗ್ರಹಿಸಿದ್ದಾರೆ.