ಕೋವಿಡ್ ಮೂರನೇ ಅಲೆಯ ವಿರುದ್ಧ ಜಿಲ್ಲಾಡಳಿತ ಮುಂದಾಲೋಚನೆ ವಹಿಸಿದೆ. ತಾಲ್ಲೂಕಿನ ಜಂಗಮಕೋಟೆ ಪ್ರಾಥಮಿಕ ಆರೋಗ್ಯ ಕೇಂದ್ರದ ಆವರಣದಲ್ಲಿ ಜಿಲ್ಲೆಯಲ್ಲಿಯೇ ಪ್ರಪ್ರಥಮವಾಗಿ ಅತ್ಯಾಧುನಿಕ 30 ಹಾಸಿಗೆಗಳ ಸಂಪೂರ್ಣ ಆಮ್ಲಜನಕ ವ್ಯವಸ್ಥೆಯುಳ್ಳ ಮಾಡ್ಯುಲಸ್ ಕೋವಿಡ್ ಕೇರ್ ಸೆಂಟರನ್ನು ನಿರ್ಮಿಸಲಾಗಿದೆ. ಇದು ಅಕ್ಟೋಬರ್ 30 ರಂದು ಮುಖ್ಯಮಂತ್ರಿಯವರಿಂದ ಉದ್ಘಾಟನೆಗೊಳ್ಳಲಿದೆ.
ಜಂಗಮಕೋಟೆ ಪ್ರಾಥಮಿಕ ಆರೋಗ್ಯ ಕೇಂದ್ರದ ಹಿಂಭಾಗದಲ್ಲಿಯೇ ನಿರ್ಮಿಸಲಾಗಿರುವ ಈ ಮಾಡ್ಯುಲಸ್ ಆಸ್ಪತ್ರೆಯು ತುರ್ತು ಪರಿಸ್ಥಿತಿಯಲ್ಲಿ ಬೇಕಾದ ಕಡೆಗೆ ಸ್ಥಳಾಂತರಗೊಳಿಸಬಹುದಾಗಿದೆ. ಸಾಮಾನ್ಯವಾಗಿ ಒಂದು ಆಸ್ಪತ್ರೆಯನ್ನು ನಿರ್ಮಾಣ ಮಾಡಲು ಒಂದು ವರ್ಷವಾದರೂ ಬೇಕಾಗುತ್ತದೆ. ಆದರೆ, ಕೇವಲ ಒಂದು ವಾರದೊಳಗೆ ಈ ಮಾಡ್ಯುಲರ್ ಆಸ್ಪತ್ರೆಯು ತಲೆಯೆತ್ತಿದೆ.
ಜಂಗಮಕೋಟೆಯಲ್ಲಿನ ಮಾಡ್ಯುಲಸ್ ಕೋವಿಡ್ ಕೇರ್ ಸೆಂಟರಿನಲ್ಲಿ ನಾಲ್ಕು ಹಾಸಿಗೆಗಳ ಐಸಿಯು, ಗಂಡಸರಿಗಾಗಿ ಮತ್ತು ಹೆಂಗಸರಿಗಾಗಿ ಪ್ರತ್ಯೇಕವಾದ ತಲಾ 13 ಹಾಸಿಗೆಗಳ ವಾರ್ಡ್ ಗಳು ಮತ್ತು ಒ.ಪಿ.ಡಿ ಗಾಗಿ ಒಂದು ಪ್ರತ್ಯೇಕ ವಾರ್ಡ್ ಗಳನ್ನು ಹೊಂದಿದೆ.
“ಕೊರೊನಾ ಮೂರನೇ ಅಲೆಯಾಗಲೀ ಅಥವಾ ಕೋವಿಡ್ ಪ್ರಕರಣಗಳು ಈ ಭಾಗದಲ್ಲಿ ಎಲ್ಲಿಯೇ ಕಂಡುಬರಲಿ ನಾವಿಲ್ಲಿ ಸಮರ್ಥವಾಗಿ ಚಿಕಿತ್ಸೆ ನೀಡಬಹುದಾಗಿದೆ. ಜಂಗಮಕೋಟೆ ಹಾಗೂ ಸುತ್ತಮುತ್ತಲಿನ ಹತ್ತಾರು ಹಳ್ಳಿಗಳ ಜನರು ಮತ್ತು ಈ ಭಾಗದ ಜನರಿಗೆ ಈ ಆಸ್ಪತ್ರೆಯು ವರದಾನವಾಗಲಿದೆ” ಎನ್ನುತ್ತಾರೆ ವೈದ್ಯಾಧಿಕಾರಿ ಡಾ.ಅಂಬಿಕಾ.
ನರೇಗಾ ಯೋಜನೆಯಿಂದ ಆಸ್ಪತ್ರೆ ಸುತ್ತ ಅಭಿವೃದ್ಧಿ ಕಾಮಗಾರಿಗಳು :
ವಾಹನ ನಿಲುಗಡೆಗೆ ಸ್ಥಳಾವಕಾಶ, ಆಂಬುಲೆನ್ಸ್ ನಿಲುಗಡೆಗೆ ಶೆಡ್, ಆಸ್ಪತ್ರೆಯ ಮುಂದೆ ನೀರು ಸರಾಗವಾಗಿ ಹರಿದು ಹೋಗಲು ಚರಂಡಿ ನಿರ್ಮಿಸಲಾಗುತ್ತಿದೆ. ಆಮ್ಲಜನಕದ ಉತ್ಪಾದನಾ ಘಟಕವನ್ನೂ ಸ್ಥಾಪಿಸಲು ಯೋಜನೆ ರೂಪಿಸಲಾಗಿದೆ. ಡೆಂಗ್ಯೂ, ಮಲೇರಿಯಾ ಹರಡುವ ಸೊಳ್ಳೆಗಳ ಲಾರ್ವಾ ಕಬಳಿಸುವ ಮೀನುಗಳಾದ ಗಪ್ಪಿ ಮತ್ತು ಗಾಂಬೂಸಿಯಾ ಬೆಳೆಸಲು ನೀರಿನ ತೊಟ್ಟಿಯನ್ನೂ ಸಹ ನಿರ್ಮಾಣ ಮಾಡಲಾಗಿದೆ.
Like, Follow, Share ನಮ್ಮ ಶಿಡ್ಲಘಟ್ಟ
Facebook: https://www.facebook.com/sidlaghatta
Instagram: https://www.instagram.com/sidlaghatta
Telegram: https://t.me/Sidlaghatta
Twitter: https://twitter.com/hisidlaghatta
ಸುದ್ದಿಗಳು ಹಾಗೂ ಮಾಹಿತಿಗಾಗಿ ಸಂಪರ್ಕಿಸಿ:
WhatsApp: https://wa.me/917406303366?text=Hi