
sidlaghatta : ಅಂತರಾಷ್ಟ್ರೀಯ ಭೂಮಿ ದಿನದ ಅಂಗವಾಗಿ ಮಂಗಳವಾರ ಶಿಡ್ಲಘಟ್ಟ ನ್ಯಾಯಾಲಯದ ಆವರಣದಲ್ಲಿ ಗಿಡ ನೆಡುವ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು. ಹಿರಿಯ ಸಿವಿಲ್ ನ್ಯಾಯಾಧೀಶರಾದ ಮೊಹಮ್ಮದ್ ರೋಷನ್ ಷಾ ಅವರು ಗಿಡ ನೆಡದು ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಈ ವೇಳೆ ಮಾತನಾಡಿದ ಅವರು, “ಪರಿಸರ ದಿನಾಚರಣೆ ಕೇವಲ ಒಂದು ದಿನದ ಆಚರಣೆಯಲ್ಲಿ ನಿಲ್ಲದೆ, ಪ್ರತಿದಿನವೂ ನಾವೆಲ್ಲರೂ ಪ್ರಕೃತಿಯ ಉಜ್ವಲ ಭವಿಷ್ಯಕ್ಕಾಗಿ gida ನೆಡುವಂತಹ ಹಂಬಲ ಇಡಬೇಕು. ಪ್ಲಾಸ್ಟಿಕ್ ಬಳಕೆಯ ಹಾನಿಯ ಬಗ್ಗೆ ಜನರು ಅರಿವು ಹೊಂದಿ, ಪರಿಸರ ಸ್ನೇಹಿ ಪರ್ಯಾಯಗಳನ್ನು ಬಳಸಬೇಕು” ಎಂದು ಹೇಳಿದರು.
ಹೆಚ್ಚುವರಿ ಸಿವಿಲ್ ನ್ಯಾಯಾಧೀಶೆ ರಂಜಿತಾ ಎಸ್. ಅವರು ಮಾತನಾಡಿ, “ಭೂಮಿ ಫಲವತ್ತಾದುದು ಸಾವಯವ ಪದ್ಧತಿಯ ಫಲ. ಆದರೆ ಇಂದು ನಾವು ರಾಸಾಯನಿಕ ಗೊಬ್ಬರಗಳಿಂದ ಭೂಮಿಯ ಗುಣಮಟ್ಟ ಹಾಳು ಮಾಡುತ್ತಿದ್ದೇವೆ. ಸಾವಯವ ಕೃಷಿ ಮತ್ತು ಮರ ನೆಡುವ ಮೂಲಕ ಪರಿಸರಕ್ಕೆ ಕೊಡುಗೆ ನೀಡೋಣ” ಎಂದು ಹೇಳಿದರು.
ವಕೀಲರ ಸಂಘದ ಅಧ್ಯಕ್ಷ ಎ. ನಾರಾಯಣಸ್ವಾಮಿ, “ಮರಗಳನ್ನು ಬೆಳೆಸುವುದು ಕೇವಲ ಹಸಿರಿನ ಕೆಲಸವಲ್ಲ, ಇದು ಭವಿಷ್ಯ ಪೀಳಿಗೆಗೆ ಕೊಡುವ ಉಡುಗೊರೆ. ಸಾಲುಮರದ ತಿಮ್ಮಕ್ಕ ಅವರ ಸೇವೆ ಈ ನಿಟ್ಟಿನಲ್ಲಿ ಎಲ್ಲರಿಗೂ ಪ್ರೇರಣೆಯಾಗಬೇಕು” ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ವಕೀಲರ ಸಂಘದ ಪ್ರಧಾನ ಕಾರ್ಯದರ್ಶಿ ಸಿ.ಜಿ. ಭಾಸ್ಕರ್ ಸೇರಿದಂತೆ ಹಲವು ನ್ಯಾಯಾಂಗ ಸಿಬ್ಬಂದಿ, ವಕೀಲರು ಉಪಸ್ಥಿತರಿದ್ದರು.