ಕರ್ನಾಟಕ ಜೀತದಾಳು ಮತ್ತು ಕೃಷಿ ಕಾರ್ಮಿಕರ ಒಕ್ಕೂಟದ ವತಿಯಿಂದ ನಗರದ ನೆಹರೂ ಕ್ರೀಡಾಂಗಣದಲ್ಲಿ ಸೋಮವಾರ ಆಯೋಜಿಸಲಾಗಿದ್ದ ರಾಜ್ಯ ಮಟ್ಟದ ಸಮಾವೇಶ ಮತ್ತು ಬಹಿರಂಗ ಸಭೆಯಲ್ಲಿ ಪಾಲ್ಗೊಂಡು ಚಿಂತಕಿ, ಮಾಜಿ ಸಚಿವೆ ಬಿ.ಟಿ.ಲಲಿತಾನಾಯಕ್ ಅವರು ಮಾತನಾಡಿದರು.
ಧರ್ಮಾಂದರಿಗೆ ತಕ್ಕ ಪಾಠ ಕಲಿಸಬೇಕಾದ ಅನಿವಾರ್ಯತೆಯಿದ್ದು ಇಡೀ ಮನುಷ್ಯ ಕುಲ ಒಂದೇ ಎಂದು ಸಾರಿ ಹೇಳುವ ಮೂಲಕ ಸಂವಿಧಾನವನ್ನು ಅಕ್ಷರಶಃ ಜಾರಿಗೆ ತರುವ ಕೆಲಸ ಆಗಬೇಕು. ಈಗಿನ ಸರ್ಕಾರಗಳು ಜಾತಿಗಳ ನಡುವೆ ಕಿಚ್ಚು ಹಚ್ಚಿ ತಮ್ಮ ಬೇಳೆ ಬೇಯಿಸಿಕೊಳ್ಳುತ್ತಿದ್ದಾರೆ. ವಿಶ್ವದಲ್ಲಿ ಗಂಡು, ಹೆಣ್ಣು ಎಂಬ ಎರಡು ಜಾತಿಗಳು ಬಿಟ್ಟರೆ ಉಳಿದವೆಲ್ಲವೂ ನಾವು ಮಾಡಿಕೊಂಡಿರುವುದು. ಹಾಗಾಗಿ ಜಾತಿ ಜಾತಿಗಳ ನಡುವೆ ಕಲಹವಿಟ್ಟು ರಾಜಕೀಯ ಮಾಡುವುದನ್ನು ಸರ್ಕಾರಗಳು ಬಿಡಬೇಕು. ನಮ್ಮನ್ನಾಳುವ ಜನ ನಮ್ಮಲ್ಲಿ ಧೀನತೆಯನ್ನು ತುಂಬಿರುವುದರಿಂದ ನಾವು ದೈಹಿಕವಾಗಿ ಜೀತದಿಂದ ಮುಕ್ತರಾಗಿದ್ದರೂ ಮಾನಸಿಕ ಜೀತದಿಂದ ಮುಕ್ತರಾಗಿಲ್ಲ ಎಂದರು. ಜೀತ ವಿಮುಕ್ತಿ ಕರ್ನಾಟಕ ಸಂಘಟನೆಯಿಂದ ರಾಜ್ಯದಾಧ್ಯಂತ ಸುಮಾರು 20 ಸಾವಿರಕ್ಕೂ ಹೆಚ್ಚು ಜೀತದಾಳುಗಳನ್ನು ಈವರೆಗೂ ಜೀತವಿಮುಕ್ತರನ್ನಾಗಿಸಿರುವುದು ಸಂತಸದ ಸಂಗತಿ ಎಂದು ಅವರು ತಿಳಿಸಿದರು.
ಚಲನಚಿತ್ರ ನಟ ಹಾಗೂ ಸಾಮಾಜಿಕ ಹೋರಾಟಗಾರ ಚೇತನ್ ಮಾತನಾಡಿ, ಅಸಮಾನತೆಯ ರಾಮರಾಜ್ಯ ಬೇಕಿಲ್ಲ, ಬದಲಿಗೆ ಬುದ್ದ, ಬಸವ, ಅಂಬೇಡ್ಕರ್, ಪೆರಿಯಾರ್, ಪುಲೆ, ಕುವೆಂಪು ರಂತಹ ಮಹಾತ್ಮರು ಕಟ್ಟಿದ ನ್ಯಾಯ, ಸಮಾನತೆಯ ರಾಜ್ಯ ನಮಗೆ ಬೇಕಿದೆ. ಭಗವದ್ಗೀತೆ, ಕುರಾನ್, ಬೈಬಲ್ ನಂತಹವನ್ನು ಮಕ್ಕಳ ಪಠ್ಯಗಳಲ್ಲಿ ಅಳವಡಿಸಲು ಮುಂದಾಗಿರುವ ಸರ್ಕಾರಗಳ ಕ್ರಮಗಳನ್ನು ಖಂಡಿಸಿ ಎಲ್ಲರನ್ನು ಸಮಾನತೆಯಿಂದ ಕಾಣುವ ಸ್ಥಿತಿ ನಿರ್ಮಾಣ ಮಾಡಲು ಹೋರಾಟಗಳು ಅತ್ಯಗತ್ಯ ಎಂದರು. ನೂರಾರು ವರ್ಷಗಳಿಂದ ಜೀತಪದ್ಧತಿಯಿಂದ ನರಳುತ್ತಿರುವವರನ್ನು ಗುರುತಿಸಿ ಅಂತಹವರನ್ನು ಜೀತವಿಮುಕ್ತರನ್ನಾಗಿಸುವ ನಿಟ್ಟಿನಲ್ಲಿ ಶ್ರಮಿಸುತ್ತಿರುವ ಜೀವಿಕ ಕಾರ್ಯ ಶ್ಲಾಘನೀಯ ಎಂದರು.
ಜೀವಿಕ ರಾಜ್ಯ ಸಂಚಾಲಕ ಡಾ.ಕಿರಣ್‌ಕಮಲ್‌ಪ್ರಸಾದ್ ಮಾತನಾಡಿ, ಜೀತಪದ್ದತಿ ಸಮಾಜದ ಅನಿಷ್ಠ ಪದ್ದತಿಯಾಗಿದೆ. ಸ್ವಾತಂತ್ರ್ಯ ಬಂದು 75 ವರ್ಷ ಕಳೆದರೂ ದೇಶದಲ್ಲಿ ಜೀತಪದ್ದತಿ ಇನ್ನೂ ಜೀವಂತವಿದೆ ಎಂದರೆ ಅದಕ್ಕೆ ನಮ್ಮನ್ನಾಳುವ ರಾಜಕಾರಣಿಗಳು ಸೇರಿದಂತೆ ಅಧಿಕಾರ ವರ್ಗವೇ ಕಾರಣ ಎಂದರು. ಜೀತಪದ್ದತಿ ಕೇವಲ ಹಳ್ಳಿಗಳಲ್ಲಿ ಮಾತ್ರ ಇದೆ ಎಂದು ಭಾವಿಸಿರುವ ಅಧಿಕಾರಿಗಳ ಮನೋಭಾವ ಬದಲಾವಣೆಯಾಗಬೇಕು. ನಗರಗಳಲ್ಲಿ ಕೆಲಸ ಮಾಡುವ ಕಟ್ಟಡ ಕಾರ್ಮಿಕರು ಸೇರಿದಂತೆ ವಿವಿಧ ಮಾಲ್ ಗಳಲ್ಲಿಯೂ ಇದೆ. ಬಲವಂತದ ದುಡಿಮೆ ಅಪರಾಧ ಎಂಬ ಕಾನೂನಿದ್ದರೂ ಇಂದಿಗೂ ಕೆಲಸಕ್ಕೆ ತಕ್ಕ ಸಂಬಳ ನೀಡದೇ ಬಲವಂತವಾಗಿ ದುಡಿಸಿಕೊಳ್ಳುವುದು ಸಹ ಜೀತ ಪದ್ದತಿಯಡಿಯಲ್ಲಿ ಬರುತ್ತದೆ. ಸಂಘಟಿತರಾಗಿ ಹೋರಾಟ ಮಾಡಿದಾಗ ಮಾತ್ರ ನ್ಯಾಯ ಸಿಗುತ್ತದೆ ಹಾಗಾಗಿ ವಿವಿಧ ದಲಿತಪರ ಸಂಘಟನೆಗಳು ಸೇರಿದಂತೆ ಎಲ್ಲರೂ ಸಂಘಟಿತರಾಗಿ ಹೋರಾಟ ನಡೆಸುವ ಮೂಲಕ ಜೀತಪದ್ದತಿ ನಿರ್ಮೂಲನೆಗೆ ಶ್ರಮಿಸೋಣ ಎಂದರು.
ಈ ಸಂದರ್ಭದಲ್ಲಿ ಕರ್ನಾಟಕ ಜೀತದಾಳು ಮತ್ತು ಕೃಷಿ ಕಾರ್ಮಿಕರ ಒಕ್ಕೂಟದ ರಾಜ್ಯಾಧ್ಯಕ್ಷ ನರಸಿಂಹಪ್ಪ, ಜೀವಿಕ ತಾಲ್ಲೂಕು ಸಂಚಾಲಕ ಪಿ.ಶ್ರೀನಿವಾಸ್, ಕದಸಂಸ ಜಿಲ್ಲಾ ಸಂಚಾಲಕ ಮೇಲೂರು ಮಂಜುನಾಥ್, ನಗರಸಭೆ ಸದಸ್ಯ ಕೃಷ್ಣಮೂರ್ತಿ, ಟಿ.ಎ.ಚಲಪತಿ, ಅಶೋಕ್, ಲಕ್ಷ್ಮಣರಾಜು, ಚಿಕ್ಕಮುನಿಯಪ್ಪ, ರಾಮಸ್ವಾಮಿ, ಶೆಟ್ಟಿಕೆರೆ ವೆಂಕಟೇಶ್, ಮುತ್ತೂರು ವೆಂಕಟೇಶ್, ಗೆಜ್ಜಿಗಾನಹಳ್ಳಿ ರವಿ ಹಾಜರಿದ್ದರು.