Sidlaghatta : ರಾಜ್ಯಾದ್ಯಂತ ಸಂವಿಧಾನ ಜಾಗೃತಿ ರಥ ಸಂಚರಿಸುತ್ತಿರುವ ಹಿನ್ನೆಲೆಯಲ್ಲಿ ಶಿಡ್ಲಘಟ್ಟ ನಗರದಲ್ಲಿ ಮಂಗಳವಾರ ಸಮಾಜ ಕಲ್ಯಾಣ ಇಲಾಖೆಯ ಮೂಲಕ ಸಂವಿಧಾನದ ಬಗ್ಗೆ ಜಾಗೃತಿ ಮೂಡಿಸಲು ಜಾಥವನ್ನು ಆಯೋಜಿಸಲಾಗಿತ್ತು.
ನಗರದ ತಾಲ್ಲೂಕು ಕಚೇರಿಯ ಮುಂಭಾಗ ತಾಪಂ ಇಓ ಜಿ.ಮುನಿರಾಜು ಜಾಥಾಗೆ ಹಸಿರು ನಿಶಾನೆ ತೋರಿಸುವ ಮೂಲಕ ಚಾಲನೆ ನೀಡಿದರು.
ಜಾಥಾಗೆ ಚಾಲನೆ ನೀಡಿ ಮಾತನಾಡಿದ ಅವರು ರಾಜ್ಯಾದ್ಯಂತ ಸಂವಿಧಾನದ ಜಾಗೃತಿ ರಥ ಸಂಚರಿಸುತ್ತಿದೆ. ಸಂವಿಧಾನದ ಮಹತ್ವ ಮತ್ತು ಅದರ ಆಶಯಗಳನ್ನು ಪ್ರತಿಯೊಬ್ಬರಿಗೂ ತಿಳಿಸುವ ಸಲುವಾಗಿ ಸಂವಿಧಾನ ಜನಜಾಗೃತಿ ಜಾಥವನ್ನು ಹಮ್ಮಿಕೊಳ್ಳಲಾಗಿದೆ. ಈ ಜಾಥಾದಲ್ಲಿ ಎಲ್ಲಾ ದೇಶಭಕ್ತರು ಭಾಗವಹಿಸಿ ಸಂವಿಧಾನದ ಮಹತ್ವವನ್ನು ತಿಳಿದುಕೊಂಡು ಅದರ ಆಶಯದಂತೆ ಎಲ್ಲರೂ ನಡೆದುಕೊಳ್ಳಬೇಕೆಂದು ಕರೆ ನೀಡಿದರು.
ಶಾಲಾ ವಿದ್ಯಾರ್ಥಿಗಳು ಮತ್ತು ಹಾಸ್ಟೆಲ್ ವಿದ್ಯಾರ್ಥಿಗಳು ಜನಜಾಗೃತಿ ಜಾಥದಲ್ಲಿ ಭಾಗವಹಿಸಿದ್ದರು ದಲಿತ ಸಂಘರ್ಷ ಸಮಿತಿಯ ಮುಖಂಡರು ಕ್ರಾಂತಿಕಾರಿ ಗೀತೆಗಳನ್ನು ಹಾಡಿದರು.
ಈ ಸಂದರ್ಭದಲ್ಲಿ ಸರ್ಕಲ್ ಇನ್ಸ್ಪೆಕ್ಟರ್ ಎಂ.ಶ್ರೀನಿವಾಸಮೂರ್ತಿ, ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ಜಗದೀಶ್, ತಾಲ್ಲೂಕು ಆರೋಗ್ಯ ಅಧಿಕಾರಿ ಡಾ.ವೆಂಕಟೇಶಮೂರ್ತಿ, ಸಿಡಿಪಿಓ ನೌತಾಜ್, ದಲಿತ ಸಂಘರ್ಷ ಸಮಿತಿಯ ಚಲಪತಿ, ದೇವರಾಜ್, ನಾರಾಯಣಸ್ವಾಮಿ, ಮುನಿರತ್ನಮ್ಮ ಮತ್ತಿತರರು ಉಪಸ್ಥಿತರಿದ್ದರು.