Home News ಶಿಡ್ಲಘಟ್ಟ ವಿಧಾನಸಭಾ ಕ್ಷೇತ್ರದಾದ್ಯಂತ ಶಾಂತಿಯುತ ಮತದಾನ

ಶಿಡ್ಲಘಟ್ಟ ವಿಧಾನಸಭಾ ಕ್ಷೇತ್ರದಾದ್ಯಂತ ಶಾಂತಿಯುತ ಮತದಾನ

0
Karnataka Assembly Elections Sidlaghatta Constituency Polling

Sidlaghatta : ಶಿಡ್ಲಘಟ್ಟ ವಿಧಾನಸಭಾ ಕ್ಷೇತ್ರದಾದ್ಯಂತ ಬುಧವಾರ ಮತದಾನ ಶಾಂತಿಯುತವಾಗಿ ನಡೆಯಿತು.

ಕೆಲವು ಮತಗಟ್ಟೆಗಳಲ್ಲಿ ಮತಯಂತ್ರದ ತೊಂದರೆ ಕಂಡುಬಂದಿದ್ದು, ಅವುಗಳನ್ನು ಸರಿಪಡಿಸಿ ಮತದಾನ ಪ್ರಕ್ರಿಯೆಯನ್ನು ಸುಸೂತ್ರಗೊಳಿಸಲಾಯಿತು.

ನಗರದ ಪ್ರಥಮ ದರ್ಜೆ ಕಾಲೇಜಿನ ಮತಗಟ್ಟೆಯಲ್ಲಿ ಸೆನ್ಸಾರ್ ಸಮಸ್ಯೆಯುಂಟಾದಾಗ ವಿವಿ ಪ್ಯಾಟ್ ಬದಲಿಸಿದರು. ಕೊಂಡ್ರಾಜನಹಳ್ಳಿ ಮತಗಟ್ಟೆಯಲ್ಲಿ ಉಂಟಾದ ಸಮಸ್ಯೆಯನ್ನು ತಾಂತ್ರಿಕ ಸಿಬ್ಬಂದಿ ಸರಿಪಡಿಸಿದರು. 171 ಸಂಖ್ಯೆಯ ಮತಗಟ್ಟೆ ಮತ್ತು 64 ನೇ ಸಂಖ್ಯೆಯ ಮತಗಟ್ಟೆ (ಅಲಗುರ್ಕಿ) ಗಳಲ್ಲಿ ಸಂಪೂರ್ಣ ಮತಯಂತ್ರ ಹಾಗೂ ವಿವಿ ಪ್ಯಾಟ್ ಎಲ್ಲವನ್ನೂ ಬದಲಿಸಲಾಯಿತು. ಬಚ್ಚಹಳ್ಳಿಯಲ್ಲಿ ಮತಯಂತ್ರದಲ್ಲಿ ಬಟನ್ ಸಿಲುಕಿ ತೊಂದರೆಯಾದಾಗ ಸುಮಾರು ಒಂದೂವರೆ ಗಂಟೆಗಳ ಕಾಲ ಮತದಾನ ನಿಂತಿತ್ತು. ನಂತರ ಸರಿಪಡಿಸಿದ ಮೇಲೆ ಮತದಾನ ಮುಂದುವರೆಯಿತು.

ಮತಗಟ್ಟೆ ಸಂಖ್ಯೆ 207, 158, 81, 74, 34, 8 ಗಳಲ್ಲಿ ಮತಯಂತ್ರಗಳಲ್ಲಿ ಉಂಟಾದ ದೋಷವನ್ನು ಸರಿಪಡಿಸಲಾಯಿತು.

ನಗರದ ಮುಖ್ಯ ರಸ್ತೆಗಳಲ್ಲಿ ಬಹುತೇಕ ಅಂಗಡಿ ಮುಂಗಟ್ಟುಗಳು ಮುಚ್ಚಿರುವುದೂ ಸೇರಿದಂತೆ ಗ್ರಾಮೀಣ ಪ್ರದೇಶದ ಜನತೆ ಇಂದು ನಗರಕ್ಕೆ ಬಾರದೇ ಇದ್ದುದರಿಂದ ನಗರದಲ್ಲೆಲ್ಲಾ ಅಘೋಷಿತ ಬಂದ್ ವಾತಾವರಣ ನಿರ್ಮಾಣವಾಗಿತ್ತು. ಚುನಾವಣೆಗಾಗಿ ಎಲ್ಲಾ ಕೆ.ಎಸ್.ಆರ್.ಟಿ.ಸಿ ಬಸ್ ಗಳನ್ನು ಬಳಸಿಕೊಂಡಿದ್ದ ಕಾರಣ ಸಾರಿಗೆ ಬಸ್ ವ್ಯವಸ್ಥೆ ಇರಲಿಲ್ಲ. ಹಾಗಾಗಿ ಪರ ಊರಿಗೆ ಹೋಗುವವರು ಖಾಸಗಿ ಬಸ್ ಗಳ ಮೊರೆ ಹೋದರು. ಬೆಂಗಳೂರಿನ ಕಡೆಗೆ ರೈಲಿನಲ್ಲಿ ಪ್ರಯಾಣಿಸುವವರ ಸಂಖ್ಯೆ ತುಂಬಾ ಹೆಚ್ಚಾಗಿತ್ತು.

ಕೆಲವೆಡೆ ಮತದಾನ ಪ್ರಕ್ರಿಯೆ ಶುರುವಾಗುತ್ತಿದ್ದಂತೆ ಬೆಳಿಗ್ಗೆಯೇ ಉತ್ಸಾಹ ಭರಿತರಾಗಿ ಬೇಗ ಬಂದು ಸರತಿಸಾಲುಗಳಲ್ಲಿ ನಿಂತು ಜನತೆ ಮತದಾನ ಮಾಡಿದರೆ, ನಗರ ಸೇರಿದಂತೆ ಕೆಲ ಗ್ರಾಮಗಳಲ್ಲಿ ಮಧ್ಯಾಹ್ನದ ವರೆಗೂ ಮತದಾನ ಮಾಡಲು ಜನರು ಬರುವುದು ಕಡಿಮೆಯಾಗಿತ್ತು. ಸಂಜೆ ನಾಲ್ಕು ಗಂಟೆಯ ನಂತರ ಹಲವು ಮತಗಟ್ಟೆಗಳಲ್ಲಿ ಜನರ ಬರುವಿಕೆ ಹೆಚ್ಚಾಗಿತ್ತು.

ಜೆಡಿಎಸ್ ಅಭ್ಯರ್ಥಿ ಬಿ.ಎನ್.ರವಿಕುಮಾರ್ ತಮ್ಮ ಸ್ವಗ್ರಾಮ ಮೇಲೂರಿನಲ್ಲಿ ಮತಚಲಾಯಿಸಿದರೆ, ಕಾಂಗ್ರೆಸ್ ಅಭ್ಯರ್ಥಿ ಬಿ.ವಿ.ರಾಜೀವ್‌ಗೌಡ ನಗರದ ಇಂದಿರಾ ಕ್ಯಾಂಟೀನ್ ಪಕ್ಕದಲ್ಲಿರುವ ರೇಷ್ಮೆ ಮತಗಟ್ಟೆಯಲ್ಲಿ ಮತಚಲಾಯಿಸಿದರು. ಬಿಜೆಪಿ ಅಭ್ಯರ್ಥಿ ಸೀಕಲ್ ರಾಮಚಂದ್ರಗೌಡ ನಗರದ ಉಲ್ಲೂರುಪೇಟೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮತಗಟ್ಟೆಯಲ್ಲಿ ಮತಚಲಾಯಿಸಿದರು.

NO COMMENTS

LEAVE A REPLY

Please enter your comment!
Please enter your name here
This site is protected by reCAPTCHA and the Google Privacy Policy and Terms of Service apply.

The reCAPTCHA verification period has expired. Please reload the page.

error: Content is protected !!
Exit mobile version