Sidlaghatta : ಬಸವಾದಿ ಶರಣರಂತೆ ಕಾಂಗ್ರೆಸ್ ಸರ್ಕಾರ ನುಡಿದಂತೆ ನಡೆದಿದೆ ಎಂದು ಮುಖ್ಯಮಂತ್ರಿ ಸಿದ್ಧರಾಮಯ್ಯ ತಿಳಿಸಿದರು.
ನಗರದಲ್ಲಿ ಭಾನುವಾರ ಕೋಲಾರ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಕೆ.ವಿ.ಗೌತಮ್ ಪರ ರೋಡ್ ಷೋ ನಡೆಸಿ ಮಾತನಾಡಿದರು.
ಶಿಡ್ಲಘಟ್ಟ ತಾಲ್ಲೂಕಿನ ಜಂಗಮಕೋಟೆ ಬಳಿ 2000 ಎಕರೆ ಪ್ರದೇಶದಲ್ಲಿ ಕೈಗಾರಿಕಾ ಎಸ್ಟೇಟ್ ಮಾಡಲಿದ್ದೇವೆ. ಶಿಡ್ಲಘಟ್ಟದ ಹೈಟೆಕ್ ಮಾರುಕಟ್ಟೆಗೆ 160 ಕೋಟಿ ರೂ ಹಣ ಬಿಡುಗಡೆ ಮಾಡಿದ್ದೇವೆ. ಕುಡಿಯುವ ನೀರಿನ ಯೋಜನೆಗೂ ಹಣ ಬಿಡುಗಡೆ ಮಾಡಿದ್ದೇವೆ. ಆದರೆ, ಕರ್ನಾಟಕಕ್ಕೆ ತೆರಿಗೆ ಹಂಚಿಕೆಯಲ್ಲಿ ಅನ್ಯಾಯವಾಗಿದೆ. ಬರಪರಿಹಾರದ ಹಣ ಒಂದು ರೂಪಾಯಿಯೂ ಕೊಡಲಿಲ್ಲ. ಕರ್ನಾಟಕದ ಬಗ್ಗೆ ಕೇಂದ್ರದ ಬಿಜೆಪಿ ಸರ್ಕಾರ ಮಲತಾಯಿ ಧೋರಣೆ ಅನುಸರಿಸುತ್ತಿದೆ. ಕರ್ನಾಟಕಕ್ಕೆ ಕೇಂದ್ರವು ಕೇವಲ ಖಾಲಿ ಚೊಂಬನ್ನು ನೀಡಿದೆ ಎಂದು ಆರೊಪಿಸಿದರು.
ಪ್ರಧಾನಿ ನರೇಂದ್ರ ಮೋದಿ ಅವರು ಈ ಹಿಂದೆ ನೀಡಿದ್ದ ಭರವಸೆಗಳಲ್ಲಿ ಯಾವುದನ್ನೂ ಈಡೇರಿಸಿಲ್ಲ. ಕೇವಲ ಭ್ರಮಾಲೋಕವನ್ನಷ್ಟೇ ಸೃಷ್ಟಿಸಿದರು. ಕಪ್ಪು ಹಣ ತಂದು ಪ್ರತಿಯೊಬ್ಬರ ಖಾತೆಗೂ 15 ಲಕ್ಷ ರೂ ಹಣ ಹಾಕುತ್ತೇವೆಂದಿದ್ದರು, ಏನಾಯಿತು? 15 ರೂ ಕೂಡ ಹಾಕಿಲ್ಲ. ಯುವ ಜನರಿಗೆ ಒಂದು ವರ್ಷಕ್ಕೆ ಎರಡು ಕೋಟಿ ಉದ್ಯೋಗ ಸೃಷ್ಟಿಸುತ್ತೇವೆಂದಿದ್ದರು, ಮಾಡಲಿಲ್ಲ. ಪಕೋಡ ಮಾರಿ ಎಂದು ಬೇಜವಾಬ್ದಾರಿ ಹೇಳಿಕೆ ಕೊಟ್ಟರಷ್ಟೇ. ಪ್ರಧಾನಿ ಆಗಲು ಅವರು ನಾಲಾಯಕ್ಕು. ರೈತರ ಆದಾಯ ದ್ವಿಗುಣ ಮಾಡುತ್ತೇವೆಂದರು, ಅಗತ್ಯ ವಸ್ತುಗಳ ಬೆಲೆ ಕಡಿಮೆ ಮಾಡುವುದಾಗಿ ಹೇಳಿದ್ದರು. ಪೆಟ್ರೋಲ್, ಡೀಸಲ್, ಗ್ಯಾಸ್, ಗೊಬ್ಬರ ಎಲ್ಲದರ ಬೆಲೆ ದ್ವಿಗುಣಗೊಂಡಿವೆ. ಅಚ್ಚೇದಿನ ಬಂತಾ, ಬರಲಿಲ್ಲ ಎಂದು ಹೇಳಿದರು.
ಅನ್ನಭಾಗ್ಯ ಕಾರ್ಯಕ್ರಮ ಜಾರಿ ಮಾಡಲು ಅಕ್ಕಿ ಕೊಡುತ್ತೇವೆಂದಿದ್ದ ಫುಡ್ ಕಾರ್ಪೊರೇಷನ್ ನವರು ಮೂರು ತಿಂಗಳಾದ ಮೇಲೆ ಮೇಲಿನಿಂದ ಆದೇಶ ಬಂದಿದೆ ಕೊಡುವುದಿಲ್ಲ ಎಂದರು. ಸಚಿವ ಕೆ.ಎಚ್.ಮುನಿಯಪ್ಪ ದೆಹಲಿಗೆ ಅದಕ್ಕಾಗಿ ಹೋದರೂ ಉಪಯೋಗವಾಗಲಿಲ್ಲ. ಬಡವರಿಗೆ ಅಕ್ಕಿ ಕೊಟ್ಟರೆ, ಬಡವರು ಸಿದ್ದರಾಮಯ್ಯನ ಪರ ನಿಲ್ಲುವರೆಂದು ಅಕ್ಕಿ ಕೊಡದ ಕೇಂದ್ರದ ಬಿಜೆಪಿ ಸರ್ಕಾರದ ಉದ್ದೇಶವನ್ನು ಜನರು ತಿಳಿಯಬೇಕು ಎಂದರು.
ವಿಧಾನಸಭೆ ಚುನಾವಣೆಗೂ ಮುನ್ನ ನಾವು ಭರವಸೆ ನೀಡಿದ್ದ ಐದು ಗ್ಯಾರಂಟಿ ಯೋಜನೆಗಳಾದ ಗೃಹಜ್ಯೋತಿ, ಗೃಹಲಕ್ಷ್ಮಿ, ಯುವಜನರಿಗೆ ಮಾಸಿಕ ಹಣ ಎಲ್ಲವನ್ನೂ ಜಾರಿಗೊಳಿಸಿದ್ದೇವೆ. ಪ್ರಧಾನಿ ನರೇಂದ್ರ ಮೋದಿ ಉದ್ಯೋಗ ಸೃಷ್ಟಿಸದಿದ್ದರಿಂದ ನಿರುದ್ಯೋಗಿಗಳಾಗಿರುವವರಿಹೆ ಮಾಸಿಕ ಹಣ ನಾವು ನೀಡುತ್ತಿದ್ದೇವೆ. ರೈತರ ಸಾಲ ಮನ್ನಾ ಮಾಡಿದ್ದು ಮನಮೋಹನ್ ಸಿಂಗ್ ಅವರು. ಬಿಜೆಪಿಯವರು ಕಾರ್ಪೊರೇಟ್‌ಗಳ ₹16 ಸಾವಿರ ಕೋಟಿ ಸಾಲ ಮನ್ನಾ ಮಾಡಿದ್ದಾರೆ ಎಂದು ದೂರಿದರು.
25 ಗ್ಯಾರಂಟಿಗಳನ್ನು ರಾಹುಲ್ ಗಾಂಧಿ ಮತ್ತು ಮಲ್ಲಿಕಾರ್ಜುನ ಖರ್ಗೆಯವರು ಘೋಷಿಸಿ ಪತ್ರಕ್ಕೆ ಸಹಿ ಹಾಕಿದ್ದಾರೆ. ವರ್ಷಕ್ಕೆ ಒಂದೂಕಾಲು ಲಕ್ಷ ರೂಪಾಯಿ ಮನೆ ಯಜಮಾನಿ ಮಹಿಳೆಯರ ಬ್ಯಾಂಕ್ ಖಾತೆಗೆ ಬಂದು ಬೀಳುತ್ತೆ. ಇಡೀ ದೇಶದ ರೈತರ ಸಾಲ ಮನ್ನಾ ಆಗತ್ತೆ . ನಿರುದ್ಯೋಗಿ ಯುವ ಸಮೂಹಕ್ಕೆ ಒಂದು ಲಕ್ಷ ರೂಪಾಯಿ ಕೊಡುತ್ತೇವೆ . ರೈತರು ಬೆಳೆದ ಬೆಳೆಗಳಿಗೆ ಖಚಿತವಾದ ಬೆಂಬಲ ಬೆಲೆ ಕೊಡುತ್ತೇವೆ. ಹೀಗಾಗಿ ಬಿಜೆಪಿಯ ಖಾಲಿ ಚೊಂಬಿಗೆ ಮತ ಹಾಕ್ತೀರಾ, ನಿಮ್ಮ ಜೇಬು ತುಂಬಿಸುವ ಮತ್ತು ನಿಮ್ಮ ಬ್ಯಾಂಕ್ ಖಾತೆಗೆ ಹಣ ಹಾಕಿ ನುಡಿದಂತೆ ನಡೆಯುವ ನಮಗೆ, ಕಾಂಗ್ರೆಸ್ ಪಕ್ಷಕ್ಕೆ ಮತ ಹಾಕ್ತೀರೋ ಎನ್ನುವುದನ್ನು ಯೋಚಿಸಿ ತೀರ್ಮಾನಿಸಿ ಎಂದು ನುಡಿದರು.
ಸಚಿವರಾದ ಕೆ.ಎಚ್.ಮುನಿಯಪ್ಪ, ಡಾ.ಎಂ.ಸಿ.ಸುಧಾಕರ್, ಬೈರತಿ ಸುರೇಶ್, ವಿಧಾನ ಪರಿಷತ್ ಸದಸ್ಯ ನಸೀರ್ ಅಹಮದ್, ಕೋಲಾರ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಕೆ.ವಿ.ಗೌತಮ್, ಶಿಡ್ಲಘಟ್ಟ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷೆ ಸಹನಾ ರಾಜೀವ್ ಗೌಡ, ಕಾಂಗ್ರೆಸ್ ಮುಖಂಡರಾದ ರಾಜೀವ್ ಗೌಡ, ಪುಟ್ಟು ಆಂಜಿನಪ್ಪ, ಜಿಲ್ಲಾ ಕಂಗ್ರೆಸ್ ಅಧ್ಯಕ್ಷ ಕೇಶವರೆಡ್ಡಿ ಹಾಜರಿದ್ದರು.
ಪ್ರಧಾನಿಯಾಗಲು ನರೇಂದ್ರ ಮೋದಿ ನಾಲಾಯಕ್ಕು- ಸಿದ್ಧರಾಮಯ್ಯ
“ಕೀಳು ಮಟ್ಟಕ್ಕೆ ಇಳಿದ ದೇವೇಗೌಡ”
“ದೇವೇಗೌಡರು ಯಾಕೆ ಇಷ್ಟು ಕೀಳುಮಟ್ಟಕ್ಕೆ, ಕೆಳಮಟ್ಟಕ್ಕೆ ಇಳಿದುಬಿಟ್ಟಿದ್ದಾರೆ? ದೇವೇಗೌಡರೇ ನಿಮ್ಮ ಜಾತ್ಯತೀತತೆ ಏನಾಯಿತು” ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಶ್ನಿಸಿದರು.
ಚಿಕ್ಕಬಳ್ಳಾಪುರದಲ್ಲಿ ಶನಿವಾರ ನಡೆದ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ದೇವೇಗೌಡರು ಪೈಪೋಟಿಗೆ ಬಿದ್ದು ಸುಳ್ಳುಗಳನ್ನು ಹೇಳಿದ್ದಾರೆ. ಕರ್ನಾಟಕಕ್ಕೆ ಖಾಲಿ ಚೊಂಬು ನೀಡಿರುವ ಕೇಂದ್ರ ಸರ್ಕಾರ ಅಕ್ಷಯಪಾತ್ರೆ ನೀಡಿದೆ ಎಂದು ಸುಳ್ಳು ಹೇಳಿದ್ದಾರೆ ಎಂದು ಕಿಡಿಕಾರಿದರು.
ಕೇವಲ ಕುಟುಂಬದ ಸ್ವಾರ್ಥಕ್ಕಾಗಿ ಕೋಮುವಾದಿಗಳೊಂದಿಗೆ ಕೈಜೋಡಿಸಿಬಿಟ್ಟಿರಾ ದೇವೇಗೌಡರೇ? ನಿಮಗೆ ನಾಚಿಕೆ ಆಗಬೇಕು. ಜೆಡಿಎಸ್ ನವರಿಗೆ ಕಾಂಗ್ರೆಸ್ ಬಗ್ಗೆ ಹೆದರಿಕೆ ಹುಟ್ಟಿದೆ. ಅದಕ್ಕಾಗಿ ಬಿಜೆಪಿ ಜೊತೆ ಸಖ್ಯ ಬೆಳೆಸಿದ್ದಾರೆ ಎಂದು ಟೀಕಿಸಿದರು.
ದೇವೇಗೌಡರು ಮಗ, ಅಳಿಯ, ಮೊಮ್ಮಗನಿಗೆ ಟಿಕೆಟ್ ಕೊಡಿಸಿ ಕುಟುಂಬಕ್ಕಾಗಿ ರಾಜಕಾರಣ ಮಾಡುತ್ತಿದ್ದಾರೆ. ಇನ್ನೊಂದು ಅವಕಾಶ ಇದಿದ್ದರೆ ಇನ್ನೊಬ್ಬ ಮೊಮ್ಮಗನಿಗೂ ಸ್ಥಾನ ಕೊಡಿಸುತ್ತಿದ್ದರೇನೋ ಎಂದು ವ್ಯಂಗ್ಯವಾಡಿದರು.
ಸುಳ್ಳು ಭರವಸೆಗಳನ್ನು ನೀಡಿ ಭ್ರಮಾಲೋಕ ಸೃಷ್ಟಿ ಮಾಡುವ ನರೇಂದ್ರ ಮೋದಿ ಪ್ರಧಾನಿಯಾಗಲು ನಾಲಾಯಕ್ಕು ಎಂದರು.