Sidlaghatta : ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ದ ಪ್ರಾಸಿಕ್ಯೂಷನ್‌ಗೆ ಅನುಮತಿ ಕೊಟ್ಟಿರುವ ರಾಜ್ಯಪಾಲರ ನಡೆಯನ್ನು ಖಂಡಿಸಿ ಅಹಿಂದ ಒಕ್ಕೂಟ ಹಮ್ಮಿಕೊಂಡಿದ್ದ ರಾಜ ಭವನ ಚಲೋಗೆ ಶಿಡ್ಲಘಟ್ಟದಿಂದ ನೂರಾರು ಮಂದಿ ಕಾಂಗ್ರೆಸ್ ನ ಅಹಿಂದ ಕಾರ್ಯಕರ್ತರು ಮಂಗಳವಾರ ತೆರಳಿದರು.
ಶಿಡ್ಲಘಟ್ಟ ತಾಲ್ಲೂಕಿನ ನಾನಾ ಕಡೆಯಿಂದ ಸುಮಾರು 30 ಬಸ್‌ಗಳಲ್ಲಿ 1500 ಕ್ಕೂ ಹೆಚ್ಚು ಮಂದಿ ರಾಜ ಭವನ ಚಲೋಗಾಗಿ ಬೆಂಗಳೂರಿಗೆ ತೆರಳಿದ ಕಾರ್ಯಕರ್ತರ ಚಲೋಗೆ ಶಿಡ್ಲಘಟ್ಟದಲ್ಲಿ ಕಾಂಗ್ರೆಸ್ ಮುಖಂಡ, ಕೆಪಿಸಿಸಿ ಕೋ ಆರ್ಡಿನೇಟರ್ ರಾಜೀವ್ ಗೌಡ ಚಾಲನೆ ನೀಡಿದರು.
ಈ ವೇಳೆ ಮಾತನಾಡಿದ ಅವರು, ಮುಖ್ಯಮಂತ್ರಿ ಸಿದ್ದರಾಮಯ್ಯನವರದ್ದು 40 ವರ್ಷಗಳ ಸುದೀರ್ಘವಾದ ಒಂದೆ ಒಂದು ಕಪ್ಪು ಚುಕ್ಕೆ ಇಲ್ಲದ ರಾಜಕೀಯ ಬದುಕು. ಇದನ್ನು ಸಹಿಸದೆ ಬಿಜೆಪಿ ಮತ್ತು ಜೆಡಿಎಸ್ ನವರು ಸಿದ್ದರಾಮಯ್ಯನವರ ಕಳಂಕ ರಹಿತ ಬದುಕಿಗೆ ಕಳಂಕವನ್ನು ತರಲು ಪಿತೂರಿ ನಡೆಸುತ್ತಿದ್ದಾರೆ ಎಂದು ದೂರಿದರು.
ರಾಜ್ಯಪಾಲರನ್ನು ಗುರಾಣಿಯನ್ನಾಗಿ ಬಳಸಿಕೊಳ್ಳುತ್ತಿದ್ದಾರೆ. ರಾಜ್ಯಪಾಲರು ಕೂಡ ಬಿಜೆಪಿ ಅವರ ಏಜೆಂಟರಂತೆ ವರ್ತಿಸುತ್ತಿದ್ದು ಅವರ ನಡೆಯು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ರಾಜ್ಯಪಾಲರ ಹುದ್ದೆಗೆ ಕಳಂಕ ತರುವಂತಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.
ರಾಜ್ಯಪಾಲರ ನಡೆಯನ್ನು ವಿರೋಧಿಸಿ ಅಹಿಂದ ಕಾರ್ಯಕರ್ತರು ರಾಜ ಭವನ ಚಲೋ ಹೋರಾಟವನ್ನು ಹಮ್ಮಿಕೊಂಡಿದ್ದು ಶಿಡ್ಲಘಟ್ಟದಿಂದ ನೂರಾರು ಕಾರ್ಯಕರ್ತರು ಚಲೋ ಹೋರಾಟದಲ್ಲಿ ಭಾಗವಹಿಸಲು ತೆರಳುತ್ತಿದ್ದು ಹೋರಾಟ ಯಶಸ್ವಿಯಾಗಲಿ, ಚಲೋದಲ್ಲಿ ಭಾಗವಹಿಸಿದ ಎಲ್ಲರಿಗೂ ಶುಭ ಕೋರಿದರು.
ಶಿಡ್ಲಘಟ್ಟದಿಂದ 30ಕ್ಕೂ ಹೆಚ್ಚು ಬಸ್‌ಗಳಲ್ಲಿ 1500ಕ್ಕೂ ಹೆಚ್ಚು ಮಂದಿ ಅಹಿಂದ ಕಾರ್ಯಕರ್ತರು ಬೆಂಗಳೂರಿನ ಫ್ರೀಡಂ ಪಾರ್ಕಿಗೆ ತೆರಳಿ ಅಲ್ಲಿಂದ ಕಾಲ್ನಡಿಗೆಯಲ್ಲಿ ರಾಜಭವನಕ್ಕೆ ತೆರಳಿದರು.