Sidlaghatta : ರಾಜ್ಯ ಕಾಂಗ್ರೆಸ್ ಕೊಡುತ್ತಿರುವ ಗೃಹ ಲಕ್ಷ್ಮಿ ಗ್ಯಾರಂಟಿಯ 2 ಸಾವಿರ ರೂ.ಗಳಿಂದ ಹಳ್ಳಿಯ ಹೆಣ್ಣು ಮಕ್ಕಳು ದಾರಿ ತಪ್ಪುತ್ತಿದ್ದಾರೆ ಎಂದು ಹೆಣ್ಣು ಮಕ್ಕಳ ಕುಲಕ್ಕೆ ಅಪಮಾನ ಮಾಡಿರುವ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರ ಮನಸ್ಥಿತಿ ಎಂತಾದ್ದು ಎಂದು ಸಚಿವ ಡಾ.ಎಂ.ಸಿ.ಸುಧಾಕರ್ ಪ್ರಶ್ನಿಸಿದರು.
ಶಿಡ್ಲಘಟ್ಟ ವಿಧಾನಸಭಾ ಕ್ಷೇತ್ರದ ಅಬ್ಲೂಡು ಗ್ರಾಮ ಪಂಚಾಯಿತಿ ಕೇಂದ್ರದಲ್ಲಿ ಕೋಲಾರ ಲೋಕಸಭಾ ಕ್ಷೇತ್ರದ ಕಾಂಗೈ ಅಭ್ಯರ್ಥಿ ಕೆ.ವಿ.ಗೌತಮ್ ಅವರ ಪರ ಬಹಿರಂಗ ಪ್ರಚಾರ ನಡೆಸಿ ಅವರು ಮಾತನಾಡಿದರು.
ಎರಡು ಸಲ ಮುಖ್ಯ ಮಂತ್ರಿ ಆಗಿದ್ದ ಕುಮಾರಸ್ವಾಮಿ ಅವರು ಹೆಣ್ಣು ಮಕ್ಕಳ ಬಗ್ಗೆ ಇಷ್ಟು ಕೀಳು ಮಟ್ಟದ ಅಭಿರುಚಿ ಹೊಂದಿದ್ದಾರೆ ಎಂದು ನಾವು ಅಂದುಕೊಂಡಿರಲಿಲ್ಲ. ಅಂತಹವರಿಗೆ ಓಟು ಹಾಕದೆ ಇರುವ ಮೂಲಕ ಅವರಿಗೆ ಬುದ್ದಿ ಕಲಿಸಬೇಕೆಂದರು.
ಮೋದಿ ಅವರು ದೇಶದ ಜನರನ್ನು ಜಾತಿ ಧರ್ಮದ ಹೆಸರಲ್ಲಿ ತುಂಡು ತುಂಡುನ್ನಾಗಿ ಮಾಡುತ್ತಿದ್ದಾರೆ. ಅವರಿಗೆ ಅಭಿವೃದ್ದಿ ಬೇಕಿಲ್ಲ. ಅಧಿಕಾರ ಬೇಕಷ್ಟೆ. ಅದಕ್ಕೆ ಬೇಕಾದ ರೀತಿಯಲ್ಲಿ ಅಧಿಕಾರವನ್ನು ದುರ್ಬಳಕೆ ಮಾಡಿಕೊಂಡು ಧರ್ಮ ಜಾತಿ ರಾಮ ಪಾಕಿಸ್ತಾನದ ಹೆಸರಲ್ಲಿ ಮತದಾರರನ್ನು ಮರಳು ಮಾಡುತ್ತಿದ್ದಾರೆ ಎಂದು ದೂರಿದರು.
ಅಧಿಕಾರದ ಆಸೆಗಾಗಿ ಬಿಜೆಪಿಯೊಂದಿಗೆ ಜೆಡಿಎಸ್ ನವರು ಕೈ ಜೋಡಿಸಿದ್ದಾರೆ. ಈ ಸಂಸತ್ ಚುನಾವಣೆಯಲ್ಲಿ ಬಿಜೆಪಿ ಮತ್ತು ಜೆಡಿಎಸ್ ಪಕ್ಷಕ್ಕೆ ತಕ್ಕ ಪಾಠ ಕಲಿಸಬೇಕು. ಬರ ಪರಿಹಾರ ವಿಚಾರ ಇರಬಹುದು, ನೀರಾವರಿ ವಿಚಾರ ಇರಬಹುದು ಪ್ರಧಾನಿ ಮುಂದೆ ಧೈರ್ಯವಾಗಿ ನಿಂತು ಮಾತನಾಡುವವರನ್ನು ಸಂಸತ್ತಿಗೆ ಕಳುಹಿಸಬೇಕು.
ಮೋದಿ ಮುಂದೆ ಕೈ ಕಟ್ಟಿ ಮಾತನಾಡದೆ ನಿಲ್ಲುವ ಬಿಜೆಪಿ ಸದಸ್ಯರನ್ನು ಆಯ್ಕೆ ಮಾಡುವುದು ಬೇಡ, ವಿದ್ಯಾರ್ಥಿ ದೆಸೆಯಿಂದಲೆ ಹೋರಾಟಗಳಲ್ಲಿ ತೊಡಗಿಸಿಕೊಂಡು ಸಾಮಾಜಿನ ನ್ಯಾಯವನ್ನು ಪ್ರತಿಪಾದಿಸುತ್ತಾ ಬಂದಿರುವ ಯುವ ಉತ್ಸಾಹಿ ಗೌತಮ್ ಅವರಿಗೆ ಮತ ನೀಡಿ ಗೆಲ್ಲಿಸಬೇಕೆಂದು ಮನವಿ ಮಾಡಿದರು.
ಕಾಂಗ್ರೆಸ್ ಮುಖಂಡ ರಾಜೀವ್‌ಗೌಡ ಮಾತನಾಡಿ, ಕೋಲಾರ ಸಂಸತ್ ಕ್ಷೇತ್ರವು ಕಾಂಗ್ರೆಸ್‌ನ ಭದ್ರ ಕೋಟೆಯಾಗಿದೆ. ಮೋದಿಯ ಮೋಡಿ ಇಲ್ಲಿನ ಮತದಾರರ ಮುಂದೆ ನಡೆಯೊಲ್ಲ. ಸಾಮಾಜಿಕ ನ್ಯಾಯವನ್ನು ಪ್ರತಿಪಾದಿಸುವ ಯುವಕ, ಹುಟ್ಟು ಹೋರಾಟಗಾರ ಗೌತಮ್ ಗೆ ಮತ ಕೊಟ್ಟು ಗೆಲ್ಲಿಸಿ ಸಂಸತ್‌ಗೆ ಕಳುಹಿಸಬೇಕು ಎಂದು ಮನವಿ ಮಾಡಿದರು.
ಕೋಲಾರ ಸೇರಿದಂತೆ ಬಯಲು ಸೀಮೆ ಭಾಗಕ್ಕೆ ನೀರಾವರಿ ಯೋಜನೆಗಳು ಜಾರಿ ಆಗಬೇಕಾದರೆ ಮೋದಿ ಮುಂದೆ ಬಿಜೆಪಿ ಸದಸ್ಯರು ಬಾಯಿ ಬಿಡೊಲ್ಲ. ಮಾತನಾಡಲೂ ಭಯ ಪಡುತ್ತಾರೆ. ಹಾಗಾಗಿ ನಮ್ಮೆಲ್ಲರ ಸಮಸ್ಯೆಯನ್ನು ಧೈರ್ಯವಾಗಿ ಸಂಸತ್ತಿನಲ್ಲಿ ಮಂಡಿಸುವ ಹೆದೆಗಾರಿಕೆಯ ಗೌತಮ್ ಅವರನ್ನು ಆಯ್ಕೆ ಮಾಡಬೇಕು ಎಂದು ಕೋರಿದರು.
ಮುಖಂಡ ಪುಟ್ಟು ಆಂಜಿನಪ್ಪ ಮಾತನಾಡಿ, ಕಳೆದ 60 ವರ್ಷಗಳಲ್ಲಿ ಕಾಂಗ್ರೆಸ್ ಮಾಡಿದ ಅಭಿವೃದ್ದಿಯನ್ನು ನೀವು ಮಾಡದೆ ಇದ್ದರೂ ಪರವಾಗಿಲ್ಲ ಆದರೆ ಕಾಂಗ್ರೆಸ್ ಮಾಡಿರುವ ಅಭಿವೃದ್ದಿಯನ್ನು ಹಾಳು ಮಾಡಬೇಡಿ ಎಂದು ಬಿಜೆಪಿಯವರಿಗೆ ಹೇಳಿದರು.
ಯುವಕರಿಗೆ ಉದ್ಯೋಗ ಕೊಡ್ತೇವೆ, ರೈತರ ಆದಾಯವನ್ನು ದುಪ್ಪಟ್ಟು ಮಾಡುತ್ತೇವೆ ಎಂದು ಅಧಿಕಾರಕ್ಕೆ ಬಂದ ಮೋದಿ ಅವರು ಮಾಡಿದ್ದಾದರೂ ಏನು ಎಂದು ಪ್ರಶ್ನಿಸಿದರು.
ಧರ್ಮ ಜಾತಿಯ ಹೆಸರಲ್ಲಿ ಸಾಮರಸ್ಯವನ್ನು ಕೆಡಿಸುತ್ತಿರುವ ಬಿಜೆಪಿ ಅವರಿಗೆ ಅಭಿವೃದ್ದಿ ಮಾಡಲು ಪುರುಸೊತ್ತು ಇಲ್ಲ, ಮಾತನಾಡುವುದೂ ಇಲ್ಲ. ಆದರೆ ಈ ಭಾರಿಯ ಸಂಸತ್ ಚುನಾವಣೆಯಲ್ಲಿ ಅಭಿವೃದ್ದಿ ಬಿಟ್ಟು ಧರ್ಮ ಜಾತಿ ಹೆಸರಲ್ಲಿ ರಾಜಕಾರಣ ಮಾಡುವವರಿಗೆ ಮತದಾರರು ತಕ್ಕ ಪಾಠ ಕಲಿಸುತ್ತಾರೆ ಎಂದರು.
ಶಿಡ್ಲಘಟ್ಟ ವಿಧಾನಸಭೆ ಕ್ಷೇತ್ರದಲ್ಲಿ ಒಂದು ಲಕ್ಷ ಮತಗಳನ್ನು ಲೀಡ್ ಕೊಟ್ಟು ಗೌತಮ್ ಅವರನ್ನು ಗೆಲ್ಲಿಸುತ್ತೇವೆಂದು ಮತದಾರರ ಪರವಾಗಿ ಭರವಸೆ ನೀಡಿದರು.
ಅಬ್ಲೂಡು ವೃತ್ತದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಬೃಹತ್ ಹೂವಿನ ಹಾರ ಹಾಕಿ ಸಚಿವ ಡಾ.ಎಂ.ಸಿ.ಸುಧಾಕರ್, ಗೌತಮ್, ರಾಜೀವ್‌ಗೌಡ, ಪುಟ್ಟು ಆಂಜಿನಪ್ಪ ಅವರನ್ನು ಸ್ವಾಗತಿಸಿದರು.
ಮಾಜಿ ಸಚಿವ ವಿ.ಮುನಿಯಪ್ಪ, ಅಭ್ಯರ್ಥಿ ಕೆ.ವಿ.ಗೌತಮ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷೆ ಸಹನಾರಾಜೀವ್ ಗೌಡ, ಕೃಷ್ಣಾರೆಡ್ಡಿ, ಕೋಚಿಮುಲ್ ಶ್ರೀನಿವಾಸ್, ಡಾಲ್ಫಿನ್ ನಾಗರಾಜ್, ಗುಡಿಹಳ್ಳಿ ನಾರಾಯಣಸ್ವಾಮಿ, ರಾಯಪ್ಪಲ್ಲಿ ಅಶ್ವತ್ಥನಾರಾಯಣರೆಡ್ಡಿ, ಕ್ಯಾತಪ್ಪ ಹಾಜರಿದ್ದರು.