ಹಿಜಾಬ್ ಮತ್ತು ಕೇಸರಿ ಶಾಲುಗಳನ್ನು ಧರಿಸದೆ ವಸ್ತ್ರಸಂಹಿತೆಯನ್ನು ಪಾಲಿಸುವಂತೆ ನ್ಯಾಯಾಲಯದ ಆದೇಶದ ನಡುವೆಯೂ ಶಿಡ್ಲಘಟ್ಟ ನಗರದ ಡಾಲ್ಫಿನ್ ಪಿಯು ಕಾಲೇಜು ಮತ್ತು ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಬುಧವಾರ ಬೆಳಗ್ಗೆ ಕಾಲೇಜು ಪ್ರಾರಂಭವಾಗುವ ವೇಳೆಯಲ್ಲಿ ಕೆಲವು ವಿದ್ಯಾರ್ಥಿನಿಯರು ಹಿಜಾಬ್ ಧರಿಸಿಕೊಂಡು ಬಂದಿದ್ದರು.
ಕಾಲೇಜಿನ ಪ್ರಾಧ್ಯಾಪರುಗಳು ನ್ಯಾಯಾಲಯದ ಸೂಚನೆಯನ್ನು ಪಾಲಿಸಬೇಕು ಎಂದು ತಿಳಿಹೇಳಿದರು. ಆದರೆ ಆ ವಿದ್ಯಾರ್ಥಿನಿಯರು ಹಿಜಾಬ್ ತೆಗೆದು ಕಾಲೇಜಿನ ಪಾಠ ನಡೆಯುವ ಕೊಠಡಿಗೆ ಹೋಗಲು ಒಪ್ಪಲಿಲ್ಲ. ನ್ಯಾಯಾಲಯದ ಸೂಚನೆ ಪಾಲಿಸದಿದ್ದಲ್ಲಿ, ಮನೆಗೆ ಹೋಗಬಹುದು ನಿಮಗೆ ಆನ್ ಲೈನ್ ಮೂಲಕ ಪಾಠ ಮಾಡುತ್ತೇವೆ ಎಂದು ತಿಳಿಸಲಾಗಿದೆ.
ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಈ ಹೆಣ್ಣುಮಕ್ಕಳಿಗಾಗಿಯೇ ಒಂದು ಕೊಠಡಿಯನ್ನು ಮೀಸಲಿರಿಸಿ, ಅಲ್ಲಿ ಕುಳಿತುಕೊಳ್ಳಿ, ಅಲ್ಲಿಯೇ ಹಿಜಾಬ್ ತೆಗೆದಿಟ್ಟು ನಿಮ್ಮ ಪಾಠ ನಡೆಯುವ ಕೊಠಡಿಗೆ ಹೋಗಿ ಎಂದು ತಿಳಿಸಲಾಯಿತು.
ಎರಡೂ ಕಾಲೇಜುಗಳಲ್ಲಿ ತಾಲ್ಲೂಕು ನೋಡಲ್ ಅಧಿಕಾರಿ ಷರೀಫ್ ಮತ್ತು ಮಹಿಳಾ ಅಧಿಕಾರಿ ಇಬ್ಬರೂ ಧಾರ್ಮಿಕ ಮುಖಂಡರು ಮತ್ತು ಪೋಷಕರನ್ನು ಕರೆಸಿ ಅವರ ಮೂಲಕ ವಿದ್ಯಾರ್ಥಿನಿಯರಿಗೆ ನ್ಯಾಯಾಲಯದ ಆದೇಶ ಮತ್ತು ಸಾಮರಸ್ಯ ಮನೋಭಾವ ಹಾಗೂ ಹೆಣ್ಣುಮಕ್ಕಳಿಗೆ ವಿದ್ಯೆಯ ಅಗತ್ಯತೆಯ ಬಗ್ಗೆ ವಿವರಿಸಿ ಮನವೊಲಿಸಿದರು. ಆ ನಂತರ ಆ ವಿದ್ಯಾರ್ಥಿನಿಯರು ಹಿಜಾಬ್ ತೆಗೆದಿಟ್ಟು ತಮ್ಮ ಪಾಠ ನಡೆಯುವ ಕೊಠಡಿಗೆ ತೆರಳಿದರು.