Lakkahalli, sidlaghatta : ಶಿಡ್ಲಘಟ್ಟ ತಾಲ್ಲೂಕಿನ ಲಕ್ಕಹಳ್ಳಿಯ ಅರಳಿಕಟ್ಟೆಯ ಮೇಲೆ ಸಾಮೂಹಿಕ ಆಸ್ತಿಗಳ ಸಾಪ್ತಾಹಿಕ ಆಚರಣೆಯ ಪ್ರಯುಕ್ತ ಗ್ರಾಮಸ್ಥರ ಜೊತೆ ಸಾಮೂಹಿಕ ಆಸ್ತಿಗಳ ಪರಿಸ್ಥಿತಿಯ ಕುರಿತು ಆಯೋಜಿಸಲಾಗಿದ್ದ ಚರ್ಚೆಯಲ್ಲಿ ಪರಿಸರ ಭದ್ರತಾ ಪ್ರತಿಷ್ಠಾನ ಸಂಸ್ಥೆಯ ಯೋಜನಾ ವ್ಯವಸ್ಥಾಪಕ ಆಗಟಮಡಕ ರಮೇಶ್ ಅವರು ಮಾತನಾಡಿದರು.
ಸಾಮೂಹಿಕ ಆಸ್ತಿಗಳಾದ ಗೋಮಾಳ, ಗುಂಡುತೋಪು, ಕೆರೆ, ಕುಂಟೆಗಳು, ರಾಜ ಕಾಲುವೆ ಮತ್ತು ಪೋಷಕ ಕಾಲುವೆಗಳು, ಸ್ಮಶಾನ ಹಾಗೂ ಅರಣ್ಯಗಳಿಂದ ತನ್ನ ಜೀವನಕ್ಕೆ ಬೇಕಾದ ಎಲ್ಲವನ್ನು ಪಡೆದುಕೊಂದು ಜೀವನವನ್ನು ನಡೆಸುತ್ತಿರುವ ಮಾನವ ಅವುಗಳನ್ನು ರಕ್ಷಣೆಯನ್ನು ಮಾಡದೇ ನಾಶಪಡಿಸುತ್ತ ತನ್ನ ಅಂತ್ಯಕ್ಕೆ ತಾನೇ ನಾಂದಿಯಾಗುತ್ತಿದ್ದಾನೆ ಎಂದು ತಿಳಿಸಿದರು.
ಸಂಕಷ್ಟದ ಪರಿಸ್ಥಿತಿಯಲ್ಲಿ ಇವತ್ತು ಸಾಮೂಹಿಕ ಆಸ್ತಿಗಳು ಇವೆ. ಅವುಗಳನ್ನು ರಕ್ಷಣೆ ಮಾಡಲು ನಾವೆಲ್ಲರೂ ಒಗ್ಗಾಟ್ಟಾಗಿ ಭರವಸೆಯನ್ನು ನೀಡಬೇಕಾಗಿದೆ. ಇಡೀ ವಿಶ್ವದ್ಯಾಂತ ಡಿಸೆಂಬರ್ 4 ರಿಂದ 12 ರವರೆಗೆ ಒಂದು ವಾರಗಳ ಕಾಲ ಸಾಮೂಹಿಕ ಆಸ್ತಿಗಳ ಸಾಪ್ತಾಹಿಕ ನಡೆಯುತ್ತಿದೆ. ಎಫ್ಇಎಸ್ ಸಂಸ್ಥೆಯು ಶಿಡ್ಲಘಟ್ಟ ತಾಲ್ಲೂಕಿನ ಎಲ್ಲಾ ಗ್ರಾಮಗಳಲ್ಲಿ ಸಾಮೂಹಿಕ ಆಸ್ತಿಗಳ ಬಳಕೆಕೆದಾರರಾದ ಮಹಿಳೆಯರು, ಮಕ್ಕಳು, ರೈತರು, ಹಿರಿಯರು ಗ್ರಾಮ ಪಂಚಾಯಿತಿ ಹಾಗೂ ಇಲಾಖೆಯ ಪ್ರತಿನಿಧಿಗಳ ಜೊತೆ ಚರ್ಚೆ ನಡೆಸುತ್ತಿದೆ. ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಿ ಸಾಮೂಹಿಕ ಆಸ್ತಿಗಳ ಮಹತ್ವ, ಅವುಗಳಿಂದ ದೊರೆಯುತ್ತಿರುವ ಅನುಕೂಲಗಳು ಮತ್ತು ರಕ್ಷಣೆ ಮಾಡದೇ ಇದ್ದರೆ ಆಗುವುಂತಹ ಸಮಸ್ಯೆಗಳು ಮುಂತಾದ ವಿಚಾರಗಳ ಕುರಿತು ಸಮುದಾಯಕ್ಕೆ ತಿಳಿಸಿಕೊಡಲಾಗುತ್ತಿದೆ ಎಂದರು.
ಗ್ರಾಮದ ಹಿರಿಯ ಆಂಜನೇಯ ಮಾತನಾಡಿ, ರಚ್ಚೆಕಟ್ಟೆಯನ್ನು ಕಟ್ಟಿ ಅರಳಿಮರ ಮತ್ತು ಬೇವಿನ ಮರವನ್ನು ಬೆಳೆಸಿರುವ ಉದ್ದೇಶವನ್ನು ಎಲ್ಲರೂ ಅರಿಯಬೇಕು. ಅರಳಿ ಮರದಿಂದ ಉತ್ತಮ ಆಮ್ಲಜನಕ ಗ್ರಾಮಸ್ಥರಿಗೆ ದೊರೆಯುತ್ತದೆ ಹಾಗೂ ಬೇವಿನ ಮರಕ್ಕೆ ರೋಗರುಜಿಗಳು ತಡೆಯವ ಶಕ್ತಿ ಇದೆ. ಹಿಂದೆ ಅರಳಿಕಟ್ಟೆಯ ಮೇಲೆ ಕುಳಿತು ಅಭಿವೃದ್ಧಿಗೆ ಯೋಜನೆಗಳನ್ನು ಎಲ್ಲರೂ ಚರ್ಚೆಸಿ ಊರಿನವರೆಲ್ಲ ಸೇರಿ ಶ್ರಮದಾನದ ಮೂಲಕ ಗ್ರಾಮದ ಅಭಿವೃದ್ಧಿ ಕಾರ್ಯಕ್ರಮಗಳನ್ನು ಮಾಡುತ್ತಿದ್ದರು ಎಂದರು.
ಈ ಸಂದರ್ಭದಲ್ಲಿ ಸಾಮೂಹಿಕ ಆಸ್ತಿಗಳಿಂದ ಗ್ರಾಮಸ್ಥರಿಗೆ ಆಗುತ್ತಿರುವ ಪ್ರತ್ಯಕ್ಷ ಮತ್ತು ಪರೋಕ್ಷ ಸೇವೆಗಳ ಕುರಿತು ಚರ್ಚೆಯನ್ನು ಮಾಡಲಾಯಿತು. ಸಾಮೂಹಿಕ ಆಸ್ತಿಗಳಾದ ಗೋಮಾಳ, ಗುಂಡುತೋಪು, ಕೆರೆ, ಕುಂಟೆ, ಅರಣ್ಯ, ಸ್ಮಶಾನ, ರಾಜ ಕಾಲುವೆ ಮತ್ತು ಪೋಷಕ ಕಾಲುವೆಗಳಾದ ಜಲ ಮೂಲಗಳನ್ನು ಉಳಿಸಿ, ಅಭಿವೃದ್ಧಿ ಪಡಿಸುವುದರ ಜೊತೆಗೆ ನಿರ್ವಹಣೆ ಮಾಡುವುದರ ಕುರಿತು ಎಲ್ಲರೂ ಸೇರಿ ಪ್ರತಿಜ್ಞೆಯನ್ನು ಮಾಡಿದರು.
ಗ್ರಾಮದ ಪ್ರಮುಖರಾದ ಆಂಜಿನಪ್ಪ, ನಾಗಪ್ಪ, ಪಿಡಿಒ ಮಧು, ವಾಣಿರೆಡ್ಡಿ ಹಾಗೂ ಲಕ್ಕಹಳ್ಳಿ ಗ್ರಾಮ ಪರಿಸರ ಅಭಿವೃದ್ಧಿ ಸಮಿತಿಯ ಸದಸ್ಯರು ಮತ್ತು ಗ್ರಾಮದ ಮಹಿಳೆಯರು ಹಾಗೂ ಮಕ್ಕಳು ಹಾಜರಿದ್ದರು.